Site icon Vistara News

Assembly 2023 | ಬಾದಾಮಿಯಿಂದ ಕೋಲಾರಕ್ಕೆ ಸಿದ್ದರಾಮಯ್ಯ ಶಿಫ್ಟ್‌?

Siddaramaiah shifting badami to kolar

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಾದಾಮಿ ವಿಧಾನಸಭಾ ಕ್ಷೇತ್ರವನ್ನೂ ತೊರೆಯುವ ನಿರ್ಧಾರ ಮಾಡಿದ್ದಾರೆ. 2023ರ ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷಕ್ಕೂ ಕಡಿಮೆ ಸಮಯ ಉಳಿದಿರುವಂತೆ ಸಿದ್ದರಾಮಯ್ಯ ಈ ನಿರ್ಧಾರ ಕೈಗೊಳ್ಳಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಸಿದ್ದರಾಮಯ್ಯ 2013ರಲ್ಲಿ ವರುಣ ಕ್ಷೇತ್ರದಿಂದ ಜಯಿಸಿದ್ದರು. 2018ರ ಚುನಾವಣೆ ವೇಳೆಗೆ ಈ ಕ್ಷೇತ್ರವನ್ನು ತಮ್ಮ ಪುತ್ರ ರಾಕೇಶ್‌ಗೆ ಬಿಟ್ಟುಕೊಡುವ ಆಲೋಚನೆಯಲ್ಲಿದ್ದರು. ಅದಾಗಲೇ ರಾಕೇಶ್‌ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದರು. ಆದರೆ ಚುನಾವಣೆಗೆ ಇನ್ನು ಎರಡು ವರ್ಷವಿದ್ದಂತೆ ಬೆಲ್ಜಿಯಂ ಪ್ರವಾಸದ ವೇಳೆ ಹೃದಯಾಘಾತವಾಗಿ ಮೃತಪಟ್ಟರು.

ಇದನ್ನೂ ಓದಿ | ಸಿದ್ದರಾಮಯ್ಯ ನನಗಿಂತ ದೊಡ್ಡವ, ಅವನೇ ಮೊಮ್ಮಕ್ಕಳನ್ನ ಆಡಿಸ್ತಾ ಕೂರಲಿ: ಹೊರಟ್ಟಿ

ನಂತರ ಈ ಕ್ಷೇತ್ರಕ್ಕೆ ತಮ್ಮ ಹಿರಿಯ ಪುತ್ರ ಡಾ. ಯತೀಂದ್ರ ಅವರನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಶಿಫ್ಟ್‌ ಆಗುವ ನಿರ್ಧಾರ ಮಾಡಿದರು. ಆದರೆ ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎಂದು ನಿರ್ಧಾರ ಮಾಡಿದ ಜೆಡಿಎಸ್‌ ಹಾಗೂ ಬಿಜೆಪಿ, ಒಟ್ಟಾಗಿ ಸೆಣೆಸಿದವು.

ಬಿಜೆಪಿ ಅಭ್ಯರ್ಥಿ ಗೆಲ್ಲುವಷ್ಟು ಮತಗಳನ್ನು ಕ್ಷೇತ್ರದಲ್ಲಿ ಹೊಂದಿಲ್ಲವಾದರೂ 18-20 ಸಾವಿರ ಮತಗಳು ಸಾಮಾನ್ಯವಾಗಿ ಲಭಿಸುತ್ತವೆ. ಎರಡೂ ಪಕ್ಷಗಳು ಒಟ್ಟಾಗಿ ಸೆಣೆಸಿದ್ದನ್ನು ಕಂಡ ಸಿದ್ದರಾಮಯ್ಯ ತಮ್ಮ ಸೋಲು ಖಚಿತ ಎಂದು ಭಾವಿಸಿ ಬೇರೆ ಕ್ಷೇತ್ರ ಹುಡಕಾಟ ಆರಂಭಿಸಿದರು. ಕೊನೆಗೆ, ಉತ್ತರ ಕರ್ನಾಟಕದಲ್ಲಿ ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಬಾದಾಮಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಕಾಂಗ್ರೆಸ್‌ನ ಚಿಮ್ಮನಕಟ್ಟಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರು.

ಇಲ್ಲಿಯೂ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಬೇಕು ಎಂದು ನಿರ್ಧರಿಸಿದ ಬಿಜೆಪಿ, ಶ್ರೀರಾಮುಲು ಅವರನ್ನು ಎರಡನೇ ಕ್ಷೇತ್ರದಲ್ಲಿ ಕಣಕ್ಕಿಳಿಸಿತು. ಈ ಕ್ಷೇತ್ರದಲ್ಲಿ ನಾಯಕ ಸಮುದಾಯದ ಮತಗಳೂ ಗಣನೀಯ ಪ್ರಮಾಣದಲ್ಲಿದ್ದದ್ದು ಇದಕ್ಕೆ ಕಾರಣವಾಯಿತು. ಪ್ರಬಲ ಪೈಪೋಟಿ ಎದುರಾಗಿ ಸಿದ್ದರಾಮಯ್ಯ ಚುನಾವಣೆಯ ಅಂತಿಮ ಆರೇಳು ದಿನ ಕ್ಷೇತ್ರ ಬಿಟ್ಟು ಹೊರಬಾರದಷ್ಟು ಒತ್ತಡಕ್ಕೆ ಸಿಲುಕಿದರು. ಅಂತಿಮವಾಗಿ ಕೇವಲ 1,696 ಮತಗಳ ಅಂತರದಲ್ಲಿ ಗೆದ್ದು ಹಾಗೂ ಹೀಗೂ ವಿಧಾನಸಭೆ ಮೆಟ್ಟಿಲೇರಿದರು. ಇತ್ತ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ ಅಭ್ಯರ್ಥಿ ಜಿ.ಟಿ. ದೇವೇಗೌಡ ವಿರುದ್ಧ ನಿರೀಕ್ಷೆಯಂತೆ 36,042 ಮತಗಳ ಭಾರೀ ಅಂತರದಲ್ಲಿ ಸೋತರು.

ಆಗ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದ ಸಿದ್ದರಾಮಯ್ಯ ಇದೀಗ 2023ರ ಚುನಾವಣೆಗೂ ಮುನ್ನ ಮತ್ತೆ ಕ್ಷೇತ್ರ ಹುಡುಕಾಟಡದಲ್ಲಿ ನಿರತರಾಗಿದ್ದಾರೆ. ಬಾದಾಮಿಯಲ್ಲಿ ಕಳೆದ ಬಾರಿ ಸ್ಥಳೀಯ ಕಾಂಗ್ರೆಸ್‌ ನಾಯಕರು ಕ್ಷೇತ್ರ ಬಿಟ್ಟುಕೊಟ್ಟರಾದರೂ ಪ್ರತಿ ಬಾರಿಯೂ ಬಿಟ್ಟುಕೊಡುತ್ತಲೇ ಹೋದರೆ ತಮ್ಮ ಭವಿಷ್ಯ ಏನು ಎಂಬ ಪ್ರಶ್ನೆ ಎದುರಾಗಿದೆ. ಹಾಗೂ ಬಲವಂತವಾಗಿ ಟಿಕೆಟ್‌ ಪಡೆದು ಸ್ಪರ್ಧಿಸಿ, ಕೊನೆಗೆ ಕಾರ್ಯಕರ್ತರು ನಿರುತ್ಸಾಹ ತೋರಿ ಸೋಲಿಸಿದರೆ ಎಂಬ ಭಯವೂ ಕಾಡುತ್ತಿದೆ.

ಇದೇ ಕಾರಣಕ್ಕೆ ಚಾಮುಂಡೇಶ್ವರಿಯೂ ಬೇಡ, ಬಾದಾಮಿಯೂ ಬೇಡ ವರುಣ ಕ್ಷೇತ್ರದಲ್ಲೆ ಸ್ಪರ್ಧೆ ಮಾಡುವಂತೆ ಆಪ್ತರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಬಾರಿ ಪುತ್ರ ಯತೀಂದ್ರ ಸ್ಪರ್ಧಿಸುವುದು ಬೇಡ ಎಂಬ ಸಲಹೆಯನ್ನು ಸಿದ್ದರಾಮಯ್ಯ ಸ್ವೀಕರಿಸಿಲ್ಲ. ಹಾಗೆ ಮಾಡಿದರೆ ಯತೀಂದ್ರ ಭವಿಷ್ಯಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಬೆಂಗಳೂರು ಸಮೀಪದ ಯಾವುದಾದರೂ ಕ್ಷೇತ್ರವನ್ನು ಹುಡುಕಾಡುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಕೋಲಾರ ವಿಧಾನಸಭೆ ಕ್ಷೇತ್ರ ಸಿಕ್ಕಿದೆ.

ಕೋಲಾರ ವಿಧಾನಸಭೆ ಕ್ಷೇತ್ರದಲ್ಲಿ 40 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಸುಮಾರು 23 ಸಾವಿರ ಕುರುಬ ಸಮುದಾಯದ ಮತದಾರರಿದ್ದಾರೆ. ಎಸ್‌ಸಿಎಸ್‌ಟಿ ಮತಗಳೂ ಗಣನೀಯವಾಗಿವೆ. ಹೀಗಾಗಿ ಕೋಲಾರ ಸೇಫ್‌ ಸೀಟ್‌ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಕೆ. ಶ್ರೀನಿವಾಸ ಗೌಡ 46% ಮತ ಪಡೆದು ಭಾರೀ ಬಹುಮತದಿಂದ ಜಯಗಳಿಸಿದ್ದರು. ನಂತರದ ಸ್ಥಾನದಲ್ಲಿ ಕಾಂಗ್ರೆಸ್‌ನ ಸೈಯದ್‌ ಜಮೀರ್‌ ಪಾಷಾ 21% ಮತ ಪಡೆದಿದ್ದರು. ಇದೀಗ ಶ್ರೀನಿವಾಸ ಗೌಡ ಜೆಡಿಎಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಇತ್ತೀಚೆಗಷ್ಟೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಬದಲಿಗೆ ಕಾಂಗ್ರೆಸ್‌ನ ಮನ್ಸೂರ್‌ ಖಾನ್‌ಗೆ ಅಡ್ಡಮತದಾನ ಮಾಡಿದ್ದಾರೆ. ಏಕೆ ಕಾಂಗ್ರೆಸ್‌ಗೆ ಮತ ನೀಡಿದಿರಿ ಎಂಬ ಸುದ್ದಿಗಾರರ ಪ್ರಶ್ನೆಗೆ ‘Because I Love Congress’ ಎಂದು ಹೇಳಿದ್ದರು.

ಈಗಾಗಲೆ ಶ್ರೀನಿವಾಸಗೌಡ ಜತೆಗೆ ಈ ಬಗ್ಗೆ ಮಾತುಕತೆಯೂ ನಡೆದಿದ್ದು, ಶ್ರೀನಿವಾಸ ಗೌಡ ಸಹ ಕ್ಷೇತ್ರವನ್ನು ಬಿಟ್ಟುಕೊಡಲು ಒಪ್ಪಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೆ ಈ ಕುರಿತು ಸಿದ್ದರಾಮಯ್ಯ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಸಿದ್ದರಾಮಯ್ಯ ಸೀಳು ನಾಲಿಗೆ ಸರಿಪಡಿಸಿಕೊಳ್ಳಲಿ : ಸಚಿವ ಶ್ರೀರಾಮುಲು

Exit mobile version