ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಸಮೀಪವಾಗುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರಗಳೂ ಮಿತಿಮೀರುತ್ತಿವೆ. ಈ ನಡುವೆ ರಾಜ್ಯದಲ್ಲಿ ಟಿಪ್ಪು ವಿವಾದ ಜ್ವಲಂತವಾಗಿದೆ. ಬೇರೆ ಬೇರೆ ವಿಧದಲ್ಲಿ ಟಿಪ್ಪುವಿನ ವಿಚಾರಗಳು ಆಡಳಿತ ಮತ್ತು ಪ್ರತಿಪಕ್ಷ ನಾಯಕರ ವಾಕ್ಸಮರಕ್ಕೆ ತುತ್ತಾಗುತ್ತಿವೆ. ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ಕಾಂಗ್ರೆಸ್ ಹೇಳಿದರೆ, ಆತ ಒಬ್ಬ ದೇಶದ್ರೋಹಿ ಎಂದು ಬಿಜೆಪಿ ಹೇಳುತ್ತಾ ಬಂದಿದೆ. ಅಲ್ಲದೆ, ಟಿಪ್ಪು ಕುರಿತಾದ ಪುಸ್ತಕಗಳನ್ನೂ ಪರಸ್ಪರ ಬಿಡುಗಡೆ ಮಾಡಿಕೊಂಡಿದ್ದವು. ಈಗ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಟಿಪ್ಪು ಸುಲ್ತಾನ್ ಮಾದರಿಯಲ್ಲಿ ಹೊಡೆದು ಹಾಕಬೇಕು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ (Ashwathnarayan) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಡ್ಯದ ಸಾತನೂರು ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಹೇಳಿಕೆ ನೀಡಿರುವ ಅಶ್ವತ್ಥ ನಾರಾಯಣ ಅವರು, ಕಾರ್ಯಕರ್ತರ ಬಳಿ ನಿಮಗೆ ಸಾವರ್ಕರ್ ಬೇಕಾ? ಟಿಪ್ಪು ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸಾವರ್ಕರ್ ಬೇಕು ಎಂಬ ಉತ್ತರ ಬಂದಿದ್ದೇ ಅವರು ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
ಅಶ್ವತ್ಥ ನಾರಾಯಣ ಹೇಳಿದ್ದೇನು?
ಟಿಪ್ಪುವಿನ ಜಾಗಕ್ಕೆ ಸಿದ್ದರಾಮಯ್ಯ ಬಂದು ಬಿಡುತ್ತಾರೆ. ನಿಮಗೆ ಸಾವರ್ಕರ್ ಬೇಕಾ? ಇಲ್ಲವೇ ಟಿಪ್ಪು ಬೇಕಾ? ನೀವೇ ತೀರ್ಮಾನವನ್ನು ತೆಗೆದುಕೊಳ್ಳಿ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳುತ್ತಿದ್ದಂತೆ ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರೆಲ್ಲರೂ, ನಮಗೆ ಸಾವರ್ಕರ್ ಬೇಕು ಎಂದು ಹೇಳಿದ್ದಾರೆ. ಮತ್ತೆ ಮತ್ತೆ ಇದನ್ನೇ ಕೇಳಿದಾಗಲೂ ಎಲ್ಲರೂ ಸಾವರ್ಕರ್ ಎಂದೇ ಉತ್ತರಿಸಿದ್ದಾರೆ.
ಇದನ್ನೂ ಓದಿ: RSS Chief Mohan Bhagwat: ಒಬ್ಬ ವ್ಯಕ್ತಿ, ಒಂದು ಸಿದ್ಧಾಂತ, ಒಂದು ಗ್ರೂಪ್‌ನಿಂದ ದೇಶ ನಿರ್ಮಾಣ ಸಾಧ್ಯವಿಲ್ಲ ಎಂದ ಭಾಗವತ್
ಆಗ ಮತ್ತೆ ಮಾತನಾಡಿದ ಸಚಿವರು, ಹಾಗಾದರೆ ಟಿಪ್ಪು ಸುಲ್ತಾನನ್ನು ಎಲ್ಲಿಗೆ ಕಳುಹಿಸಬೇಕು? ಟಿಪ್ಪುವನ್ನು ಉರಿಗೌಡ, ನಂಜೇಗೌಡ ಏನ್ ಮಾಡಿದರು? ಎಂದು ಕೇಳಿದರು. ಆಗ ಅಲ್ಲಿನ ಕಾರ್ಯಕರ್ತರು ಹೊಡೆದು ಹಾಕಿದರು ಎಂದು ಉತ್ತರಿಸಿದರು. ಆಗ ಸಚಿವರು, “ಹೌದು. ಟಿಪ್ಪುವನ್ನು ಉರಿಗೌಡ, ನಂಜೇಗೌಡ ಹೊಡೆದು ಹಾಕಿದಂತೆ ಇವರನ್ನೂ ಹೊಡೆದು ಹಾಕಬೇಕು ಎಂದು ಹೇಳುತಾ, ನಮ್ಮತನವನ್ನು ನಾವು ಕಾಪಾಡಬೇಕೆಂದರೆ ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಾಗಿ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.