ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆ ಘೋಷಣೆ ಮಾಡಿದ್ದ ಗ್ಯಾರಂಟಿಗಳಲ್ಲಿ (Congress Guarantee) ಗೃಹಜ್ಯೋತಿ ಅಡಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಕೊಡಿ ಎಂಬ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು, ವಿವೇಕ ಇಟ್ಟುಕೊಂಡು ಮಾತನಾಡಬೇಕು. 200 ಯುನಿಟ್ ಹೇಳಿದ್ದೀರಿ, ಅಷ್ಟೇ ಕೊಡಿ ಎಂದು ಹೇಳುತ್ತಿದ್ದಾರೆ. ಎಷ್ಟು ವಿದ್ಯುತ್ ಬಳಸುತ್ತಿದ್ದಾರೋ ಅಷ್ಟನ್ನೇ ಬಳಸಬೇಕು. ಹೆಚ್ಚು ಬಳಸಿದರೆ ದುಂದು ವೆಚ್ಚ ಆಗುತ್ತದೆ ಎಂದು ಹೇಳಿದ್ದಾರೆ.
ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಚಿತ ವಿದ್ಯುತ್ ವಿಚಾರದ ವಾರ್ಷಿಕ ಸರಾಸರಿ ಲೆಕ್ಕಾಚಾರ ಸರಿಯಾಗಿಯೇ ಇದೆ. ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ವರ್ಷದಲ್ಲಿ ಬಳಸಿದ ವಿದ್ಯುತ್‌ನ ಸರಾಸರಿ ಮೇಲೆ ನಾವು ಚಾರ್ಜ್ ಹಾಕುತ್ತೇವೆ. 200 ಯುನಿಟ್ ಹೇಳಿದ್ದೀರಿ ಅಷ್ಟನ್ನೂ ಕೊಡಿ ಎಂದು ಕೇಳುತ್ತಿದ್ದಾರೆ. ಅವರಿಗೆ ವಿವೇಕ ಇದೆಯೇ? ಎಷ್ಟು ವಿದ್ಯುತ್ ಬಳಸಲಾಗುತ್ತಿದೆಯೋ ಅಷ್ಟನ್ನೇ ಬಳಸಬೇಕು. ಹೆಚ್ಚು ಬಳಸಿದರೆ ದುಂದು ವೆಚ್ಚ ಆಗುತ್ತದೆ. ಮನುಷ್ಯನಿಗೆ ವಿವೇಕ ಇರಬೇಕು. ನಾವೂ ಬದುಕಬೇಕು, ಸಮಾಜದಲ್ಲಿರುವವರೂ ಬದುಕಬೇಕು. ಹಾಗಾಗಿ ಕೆಲವು ಮಿತಿಗಳನ್ನು ಹಾಕಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್
ವಿದ್ಯುತ್ ಅನ್ನು ಮಿತಿಯಾಗಿ ಬಳಿಸಿ ಎಂದು ಹೇಳುವುದು ತಪ್ಪೇ? ಎಷ್ಟು ಬೇಕೋ ಅಷ್ಟನ್ನು ಬಳಸಿ. ಮನುಷ್ಯರಿಗೆ ವಿವೇಕ ಇರಬೇಕು. ನಾನೊಬ್ಬನೇ ಬದುಕಿದರೆ ಸಾಲದು ನನ್ನ ಸುತ್ತಮುತ್ತಲಿನವರೆಲ್ಲರೂ ಬದುಕಬೇಕು. ಅದಕ್ಕೆ ಕೆಲವು ನಿರ್ಬಂಧಗಳ ಅಗತ್ಯತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪರಿಸರದಿಂದ ಆರೋಗ್ಯ ಸುರಕ್ಷೆ
ಪರಿಸರ ಚನ್ನಾಗಿದ್ದರೆ, ಆರೋಗ್ಯ ಚನ್ನಾಗಿರುತ್ತದೆ. ನಾವು ಎಷ್ಟು ಕಾನೂನು ಮಾಡಿದರೂ ಜನರಲ್ಲಿ ಜಾಗೃತಿ ಬರದೇ ಇದ್ದರೆ ಉದ್ದೇಶ ಸಫಲವಾಗುವುದಿಲ್ಲ. ಇದಕ್ಕಾಗಿ ಜಾಗೃತಿಯ ಅಗತ್ಯತೆ ಇದೆ. ನಾವು ಪ್ರಕೃತಿಯನ್ನು ಮತ್ತು ಭೂಮಿಯನ್ನು ಪ್ರೀತಿಸಬೇಕು. ಅದು ನಮ್ಮ ಕರ್ತವ್ಯ ಎಂದು ಭಾವಿಸಬೇಕು. ಭೂಮಿ, ಪ್ರಕೃತಿ ಎಲ್ಲವೂ ಆರೋಗ್ಯವಾಗಿರಬೇಕು. ಇವೆಲ್ಲವೂ ಆರೋಗ್ಯವಾಗಿದ್ದರೆ ನಮ್ಮ ಬದುಕೂ ಹಸನಾಗಿರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: Karnataka Election 2023: ಮತಕ್ಕಾಗಿ ಆಣೆ- ಪ್ರಮಾಣ, ಗಿಫ್ಟ್ ಆಮಿಷಕ್ಕೆ ಮುಂದಾದ ದಾವಣಗೆರೆ ಬಿಜೆಪಿ ಅಭ್ಯರ್ಥಿ, ದೂರು
ಎಷ್ಟು ಮಂದಿಯಿಂದ ಮಳೆ ನೀರು ಕೊಯ್ಲು ಅಳವಡಿಕೆ?
ಪ್ರಕೃತಿ ಮತ್ತು ಭೂಮಿ ತಾಯಿಯಿಂದ ಸಾಕಷ್ಟು ಪಡೆದುಕೊಳ್ಳುತ್ತೇವೆ. ಅದಕ್ಕೆ ನಾವು ವಾಪಸ್ ಏನಾದರೂ ಕೊಡಬೇಕಲ್ಲವೇ? ಹಿಂದೆ ಒಂದು ಮರ ಕಡಿದರೆ ಇನ್ನೊಂದು ಗಿಡ ನೆಡುತ್ತಿದ್ದರು. ಈಗ ಮರ ಕಡಿಯುತ್ತಿದ್ದೇವೆ. ಆದರೆ, ಗಿಡವನ್ನು ನೆಡುತ್ತಿಲ್ಲ. ಕಾಡು ಬೆಳೆಸುವುದು ಕೇವಲ ಅರಣ್ಯ ಇಲಾಖೆಯ ಕೆಲಸ ಅಲ್ಲ. ಇದು ಪ್ರತಿಯೊಬ್ಬರದ್ದೂ ಜವಾಬ್ದಾರಿಯಾಗಿದೆ. ಈ ಹಿಂದೆ ನನ್ನ ಸರ್ಕಾರವಿದ್ದಾಗ ಪ್ಲಾಸ್ಟಿಕ್ ನಿಷೇಧ ಮಾಡಿದ್ದೆ. ಈಗ ಪ್ಲಾಸ್ಟಿಕ್ ಅನ್ನು ಮನ ಬಂದಂತೆ ಬಳಕೆ ಮಾಡಲಾಗುತ್ತಿದೆ. ಮಳೆ ನೀರು ಕೊಯ್ಲನ್ನು ಎಷ್ಟು ಮಂದಿ ಅಳವಡಿಸಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.