ಬೆಂಗಳೂರು: ಬಿಜೆಪಿ ಸರ್ಕಾರವಿದ್ದಾಗ ನೇಮಕವಾಗಿದ್ದ ಎಲ್ಲ ನಿಗಮ ಮಂಡಳಿಗಳ ಪದಾಧಿಕಾರಿಗಳನ್ನು ಕಾಂಗ್ರೆಸ್ ಸರ್ಕಾರ ಹೊರಗೆ ಕಳಿಸಿದೆ.
ಈ ಬಗ್ಗೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಎಲ್ಲ ಅಕಾಡೆಮಿ, ಪ್ರಧಾಇಕಾರ ಮುಂತಾದ ನಿಗಮ ಮಂಡಳಿಗಳ ಅಧ್ಯಕ್ಷ, ನಿರ್ದೇಶಕ ಹಾಗೂ ಸದಸ್ಯರುಗಳ ಅವಧಿಯನ್ನು ಮೇ 22ರಿಂದಲೇ ಜಾರಿಗೆ ಬರುವಂತೆ ಹಿಂಪಡೆಯಬೇಕು ಎಂದು ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಬಿಜೆಪಿ ಸರ್ಕಾರವಿದ್ದಾಗಲೇ ಅಕಾಡೆಮಿಗಳನ್ನು ತೆರವುಗೊಳಿಸಿತ್ತು. ಅಲ್ಲಿಗೆ ಮರು ನೇಮಕ ಮಾಡಿರಲಿಲ್ಲ. ಚುನಾವಣೆ ಫಲಿತಾಂಶದ ನಂತರ ಕೆಲವು ನಿಗಮ ಮಂಡಳಿಗಳ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರು. ಆದರೂ ಇನ್ನೂ ಕೆಲವರು ಹುದ್ದೆಯಲ್ಲಿದ್ದಾರೆ ಎಂದು ತಿಳಿದುಬಂದಿದ್ದು, ಅವರೆಲ್ಲರನ್ನೂ ಸಿದ್ದರಾಮಯ್ಯ ಹೊರಗೆ ಕಳಿಸಿದ್ದಾರೆ.
ಪೇಮೆಂಟ್ಸ್ ತಡೆ:
ಬಿಜೆಪಿ ನೇಮಿಸಿದ್ದ ಪದಾಧಿಕಾರಿಗಳು ಹಾಕಿಕೊಂಡ ಯೋಜನೆಗಳಿಗೆ ನೀಡಬೇಕಾದ ಹಣ ಹಾಗೂ ಇನ್ನೂ ಆರಂಭವಾಗಬೇಕಿರುವ ಕಾಮಗಾರಿಗಳಿಗೂ ಸರ್ಕಾರ ತಡೆ ನೀಡಿದೆ. ನಿಗಮ ಮಂಡಳಿಗಳಲ್ಲಿ ಚುನಾವಣೆ ಸಮಯದಲ್ಲೂ ಹಾಗೂ ಅಕ್ರಮವಾಗಿ ಅನೇಕ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಆರೋಪವಿತ್ತು. ತಾವು ಅಧಿಕಾರಕ್ಕೆ ಬಂದರೆ ಎಲ್ಲ ಕಾಮಗಾರಿಗಳನ್ನೂ ಸ್ಥಗಿತಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು. ಅದರಂತೆ ಮುಂದಿನ ಎಲ್ಲ ಯೋಜನೆಗಳನ್ನು ಹಾಗೂ ಯೋಜನೆಗಳಿಗೆ ಹಣ ಬಿಡುಗಡೆಯನ್ನೂ ತಡೆ ಹಿಡಿಯಲಾಗಿದೆ. ಈ ಬಗ್ಗೆ ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ: Karnataka Election: ನೀತಿ ಸಂಹಿತೆ ಉಲ್ಲಂಘಿಸಿ ನಡೆಸುವ ರಸ್ತೆ ಕಾಮಗಾರಿಗಳಿಗೆ ತಡೆ ನೀಡಿ; ಜೆಡಿಎಸ್