Site icon Vistara News

Siddaramaiah Vs BJP | ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಗೆ ಕೋರ್ಟ್‌ ತಡೆ: ಟೌನ್‌ ಹಾಲ್ ಎದುರು ಭಾರಿ ಕೋಲಾಹಲ

siddu nijakanasugalu bjp ಸಿದ್ದರಾಮಯ್ಯ

ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಪ್ರಾಯೋಜಿತ ʻಸಿದ್ದು ನಿಜ ಕನಸುಗಳುʼ ಪುಸ್ತಕ ಬಿಡುಗಡೆಗೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಸೋಮವಾರ ಮಧ್ಯಾಹ್ನ ಮೂರು ಗಂಟೆಗೆ ಪುಸ್ತಕ ಬಿಡುಗಡೆ ಮಾಡಲು ಟೌನ್‌ ಹಾಲ್‌ನಲ್ಲಿ ಬಿಜೆಪಿ ಸಕಲ ಸಿದ್ಧತೆಗಳನ್ನು ನಡೆಸಿದ್ದು, ಇದೀಗ ಸಿಟಿ ಸಿವಿಲ್‌ ಕೋರ್ಟ್‌ ಕೊನೆಯ ಕ್ಷಣದಲ್ಲಿ ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ. ೫೯ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಧೀಶರು ಪುಸ್ತಕ ಬಿಡುಗಡೆ ಮಾಡದಂತೆ ಸೂಚಿಸಿದ್ದಾರೆ.

ಭಾರತೀಯ ಜನತಾ ಪಕ್ಷವು ಸಿದ್ದರಾಮಯ್ಯ ಅವರನ್ನು ಟಿಪ್ಪುವಿಗೆ ಹೋಲಿಸಿ, ಅಡ್ಡಂಡ ಕಾರ್ಯಪ್ಪ ಅವರ ʻಟಿಪ್ಪು ನಿಜ ಕನಸುಗಳುʼ ಮಾದರಿಯಲ್ಲಿ ʻಸಿದ್ದು ನಿಜ ಕನಸುಗಳುʼ ಪುಸ್ತಕವನ್ನು ಸಿದ್ಧಪಡಿಸಿ ಬಿಡುಗಡೆಗೆ ರೆಡಿಯಾಗಿತ್ತು. ಈ ನಡುವೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಅವರನ್ನು ಪ್ರತಿವಾದಿಯಾಗಿಸಿ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಅಶ್ವತ್ಥ ನಾರಾಯಣ ಅವರು ಪುಸ್ತಕ ಬಿಡುಗಡೆಯ ಪ್ರಧಾನ ಅತಿಥಿ ಎಂಬ ನೆಲೆಯಲ್ಲಿ ಅವರನ್ನು ಪ್ರತಿವಾದಿಯಾಗಿ ಮಾಡಲಾಗಿತ್ತು.

ಟೌನ್‌ ಹಾಲ್‌ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಸಿದ್ದು ನಿಜ ಕನಸುಗಳು ಪುಸ್ತಕಕ್ಕೆ ಸಂಬಂಧಿಸಿ ಬೆಳಗ್ಗಿನಿಂದ ದೊಡ್ಡ ಮಟ್ಟದಲ್ಲಿ ವಿವಾದ ಹುಟ್ಟಿಕೊಂಡಿದ್ದು, ಕಾಂಗ್ರೆಸ್‌ ಕೂಡಾ ಬಿಜೆಪಿಗೆ ವಿರುದ್ಧವಾಗಿ ಪುಸ್ತಕ ಬಿಡುಗಡೆಗೆ ಮುಂದಾಗಿತ್ತು. ಹೀಗಾಗಿ ಮಧ್ಯಾಹ್ನದ ಹೊತ್ತಿಗೆ ಟೌನ್‌ ಹಾಲ್‌ನ ಒಳಗಡೆ ಬಿಜೆಪಿ ಮತ್ತು ಹೊರಗೆ ಕಾಂಗ್ರೆಸ್‌ ಕಾರ್ಯಕರ್ತರು ಜಮಾಯಿಸಿ ಭಾರಿ ಕೋಲಾಹಲದ ವಾತಾವರಣ ನಿರ್ಮಾಣವಾಗಿದೆ.

ಪೊಲೀಸರು ಹೊರಗಡೆ ಪುಸ್ತಕ ಬಿಡುಗಡೆ ಮತ್ತು ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಚದುರಿಸಿ ವಾಹನಗಳಲ್ಲಿ ತುಂಬಿಸಿ ಕಳುಹಿಸುತ್ತಿದ್ದಾರೆ. ಎರಡೂ ಕಡೆಗಳು ಪರಸ್ಪರ ವಾಗ್ಯುದ್ಧ ನಡೆಸುತ್ತಿದ್ದು ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ಇದನ್ನೂ ಓದಿ | Siddaramaiah Vs BJP : ಕಾಂಗ್ರೆಸ್‌ನಿಂದ ಬಿಜೆಪಿ ಕಳ್ಳಮಾರ್ಗ ಪುಸ್ತಕ; ಸಿದ್ದು ವಿರೋಧಿ ಪುಸ್ತಕಕ್ಕೆ ಕೌಂಟರ್‌

Exit mobile version