ನವದೆಹಲಿ: ಐದು ದಿನಗಳ ನಿರಂತರ ಚರ್ಚೆ ನಂತರ ಕರ್ನಾಟಕ ಮುಖ್ಯಮಂತ್ರಿ ಕುರಿತು ಎಐಸಿಸಿ ನಿರ್ಧಾರ ತೆಗೆದುಕೊಂಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಲು ಮಲ್ಲಿಕಾರ್ಜುನ ಖರ್ಗೆ ಒಪ್ಪಿದ್ದಾರೆ.
ನವದೆಹಲಿಯಲ್ಲಿ ಈ ಕುರಿತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪತ್ರಿಕಾಗೋಷ್ಠಿ ಮೂಲಕ ಪ್ರಕಟಿಸಿದರು. ಜತೆಗೆ, ಡಿ.ಕೆ. ಶಿವಕುಮಾರ್ ಏಕೈಕ ಡಿಸಿಎಂ ಆಗಿರಲಿದ್ದಾರೆ ಎಂದು ತಿಳಿಸಿದರು.
ನಮ್ಮ ಎಲ್ಲ ನಾಯಕರು, ಮುಖ್ಯಮಂತ್ರಿಗಳು ಹಾಗೂ ಕಾರ್ಯಕರ್ತರು ಈ ಗೆಲುವಿಗೆ ಕಾರಣ. ಎಐಸಿಸಿ ಅಧ್ಯಕ್ಷರು ಒಂದು ತಿಂಗಳು ಸಮಯ ವ್ಯಯಿಸಿದ್ದಾರೆ. ಭಾರತ್ ಜೋಡೊ ಯಾತ್ರೆಯೂ ಈ ಗೆಲುವಿಗೆ ಬಹುಮುಖ್ಯ ಪಾತ್ರ ವಹಿಸಿದೆ.
ಪ್ರಿಯಾಂಕಾ ಗಾಂಧಿಯವರು ಬಹಳಷ್ಟು ಪ್ರಚಾರ ನಡೆಸಿದ್ದಾರೆ, ಅವರಿಗೂ ಧನ್ಯವಾದ ಸಲ್ಲಿಸುತ್ತೇವೆ. ಸೋನಿಯಾ ಗಾಂಧಿಯವರೂ ಪ್ರಚಾರದಲ್ಲಿ ಭಾಗವಹಿಸಿ ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು. ಮೇ 13ರಂದೇ ಫಲಿತಾಂಶ ಬಂದು ಕೂಡಲೆ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಅಲ್ಲಿನ ನಿರ್ಣಯವನ್ನು ಕೂಡಲೆ ಎಐಸಿಸಿಗೆ ಕಳಿಸಿಕೊಡಲಾಯಿತು.
ನಮ್ಮ ಪಕ್ಷ ಪ್ರಜಾತಾಂತ್ರಿಕವಾಗಿದ್ದು, ಏಕಚಕ್ರಾಧಿಪತ್ಯವಲ್ಲ. ಕರ್ನಾಟಕದಲ್ಲಿ ಅತಿ ಅನುಭವಿ ನಾಯಕರಿದ್ದಾರೆ. ಸಿದ್ದರಾಮಯ್ಯ ಅನುಭವಿ ಜತೆಗೆ ಅತ್ಯುತ್ತಮ ಆಡಳಿತಗಾರ. ಈ ಚುನಾವಣೆಯಲ್ಲಿ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಡೀ ಸಂಘಟನೆಯನ್ನು ಮುನ್ನಡೆಸಿದ್ದಾರೆ. ಇದೊಂದು ಅತ್ಯುತ್ತಮ ಜೋಡಿಯಾಗಿ ಕೆಲಸ ಮಾಡಿದೆ. ಇಬ್ಬರೂ ಕರ್ನಾಟಕದ ಅತಿ ದೊಡ್ಡ ಆಸ್ತಿ.
ಎಲ್ಲರಿಗೂ ಸಿಎಂ ಆಗುವ ಆಸೆ ಇರುತ್ತದೆ. ಹಾಗೆಯೇ ಇಬ್ಬರಿಗೂ ನಿರೀಕ್ಷೆಗಳಿದ್ದವು. ಇಬ್ಬರ ಜತೆಗೆ ನಿರಂತರ ಸಂವಾದ ನಡೆಸಲಾಯಿತು. ಎಲ್ಲರ ಜತೆ ಚರ್ಚೆ ನಂತರ, ಸಿದ್ದರಾಮಯ್ಯ ಅವರನ್ನು ಕರ್ನಾಟಕ ಸಿಎಂ ಆಗಿ ಮಾಡಲು ಒಪ್ಪಿಗೆಯನ್ನು ಎಐಸಿಸಿ ಅಧ್ಯಕ್ಷರು ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಏಕೈಕ ಡಿಸಿಎಂ ಆಗಲಿದ್ದಾರೆ. ಅವರು ಸಂಸತ್ ಚುನಾವಣೆ ಮುಕ್ತಾಯವಾಗುವವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಮೇ 20ರಂದು ಸಿಎಂ ಹಾಗೂ ಡಿಸಿಎಂ ಜತೆಗೆ ಅನೇಕ ಸಚಿವರೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
ಆದರೆ ಸಂಸತ್ ಚುನಾವಣೆ ನಂತರದಲ್ಲಿ ಸರ್ಕಾರದಲ್ಲಿ ಬದಲಾವಣೆ ಆಗುತ್ತದೆಯೇ? ಸಿಎಂ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಬಿಟ್ಟುಕೊಡುತ್ತಾರೆಯೇ? ಎಂಬ ಕುರಿತು ಯಾವುದೇ ಸ್ಪಷ್ಟನೆಯನ್ನು ಕಾಂಗ್ರೆಸ್ ನೀಡಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆ.ಸಿ. ವೇಣುಗೋಪಾಲ್, ಅಧಿಕಾರವನ್ನು ರಾಜ್ಯದ ಜನತೆಗೆ ಹಂಚಿಕೊಳ್ಳುವುದೇ ಅಧಿಕಾರ ಹಂಚಿಕೆ ಸೂತ್ರ ಎಂದು ಹಾಸ್ಯ ಚಟಾಕಿ ಹಾರಿಸಿ ಸುದ್ದಿಗೋಷ್ಠಿಯನ್ನು ಮುಗಿಸಿದರು.
ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಮುಂದಿನ ಸಿಎಂ, ಡಿಕೆಶಿ ಡಿಸಿಎಂ; ಎಐಸಿಸಿಯಿಂದ ಅಧಿಕೃತ ಘೋಷಣೆ