Site icon Vistara News

Karnataka Elections : ಸಿದ್ದರಾಮಯ್ಯ ವರುಣಾ, ಕೋಲಾರ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂದ ಯತೀಂದ್ರ

Siddaramaiah yathindra

#image_title

ಮೈಸೂರು: ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ (Siddaramaiah) ಅವರನ್ನು ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದೆ. ನಮ್ಮ ತಂದೆಯವರು ಕೋಲಾರದಿಂದಲೂ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ: ಹೀಗೆಂದು ಹೇಳಿದ್ದಾರೆ ವರುಣ ಕ್ಷೇತ್ರದ ಹಾಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ.

ಸಿದ್ದರಾಮಯ್ಯ ಅವರು ತಾವು ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಜತೆಗೆ ಇನ್ನೊಂದು ಕ್ಷೇತ್ರದ ಚಿಂತನೆಯೂ ಇದೆ ಎಂದಿದ್ದರು. ಅವರು ಬಾದಾಮಿ ಕ್ಷೇತ್ರ ಸಂಚಾರಕ್ಕೆ ಹೊರಟ ಹಿನ್ನೆಲೆಯಲ್ಲಿ ಎರಡನೇ ಕ್ಷೇತ್ರವಾಗಿ ಬಾದಾಮಿಯನ್ನು ಆಯ್ಕೆ ಮಾಡಿಕೊಳ್ಳಬಹುದೇ ಎಂಬ ಚರ್ಚೆಯೂ ಇತ್ತು. ಅದರೆ, ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಪ್ರಕಾರ ಆ ಸಾಧ್ಯತೆ ಕಡಿಮೆ.

ನಿಜವೆಂದರೆ, ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಎರಡು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದಕ್ಕೆ ವಿರುದ್ಧವಾಗಿದ್ದರು ಎನ್ನಲಾಗಿದೆ. ಹಾಗಿದ್ದರೆ ಈಗ ಸಿದ್ದರಾಮಯ್ಯ ಅವರು ಈ ಇಬ್ಬರು ನಾಯಕರಿಗೆ ಸಡ್ಡು ಹೊಡೆದು ಟಿಕೆಟ್‌ ಗಿಟ್ಟಿಕೊಳ್ಳುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

ಮೈಸೂರಿನಲ್ಲಿ ಯತೀಂದ್ರ ಹೇಳಿದ್ದೇನು?

ʻʻತಂದೆಯವರ ನಿರ್ಧಾರಕ್ಕೆ ನಾನು ಬದ್ಧ. ವರುಣ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದರೆ ನಾವು ಅವರಿಗೆ ಸರ್ಪೋರ್ಟ್​ ಮಾಡುತ್ತೇವೆ. ವರುಣ ಮತ್ತು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಕೆಲಸ ಮಾಡುತ್ತೇವೆʼʼ ಎಂದಿದ್ದಾರೆ ಯತೀಂದ್ರ ಸಿದ್ದರಾಮಯ್ಯ.

ʻʻಕೋಲಾರಕ್ಕೆ ಹೋಗುವ ಮುನ್ನ ವರುಣದಿಂದ ಸ್ಪರ್ಧೆ ಮಾಡಬೇಕೆಂದು ನಾನು ಸಲಹೆ ನೀಡಿದ್ದೆ. ಆದರೆ, ಕೋಲಾರದ ನಾಯಕರು ಸ್ಪರ್ಧೆ ಮಾಡುವಂತೆ ತೀವ್ರ ಒತ್ತಡ ಹೇರಿದ್ದರು. ಅಲ್ಲಿಯೂ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂತಾನೇ ಹೇಳಿದ್ದರುʼʼ ಎಂದು ನೆನಪು ಮಾಡಿಕೊಂಡರು.

ʻʻಸದ್ಯ ಹೈಕಮಾಂಡ್ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದೆ. ಬ್ಯಾಕ್​ಅಪ್​ಗೋಸ್ಕರ ಕೋಲಾರದಲ್ಲಿ ಸ್ಪರ್ಧೆ ಮಾಡಲು ತಂದೆಯವರು ನಿರ್ಧರಿಸಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆʼʼ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ರಾಹುಲ್‌ ಅನರ್ಹತೆಗೆ ಯತೀಂದ್ರ ಆಕ್ರೋಶ

ʻಕಳ್ಳರ ಹೆಸರೆಲ್ಲ ಮೋದಿ ಎಂದೇ ಯಾಕಿರುತ್ತದೆʼ ಎಂಬ ಆಕ್ಷೇಪಾರ್ಹ ಹೇಳಿಕೆಗಾಗಿ ಎರಡು ವರ್ಷಗಳ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಿದ ಕ್ರಮವನ್ನು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಖಂಡಿಸಿದರು.

ʻʻಮೋದಿ ಬಂದ ಮೇಲೆ ಜನರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಪ್ರತಿಪಕ್ಷಗಳ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ. ಅದಕ್ಕೆ ಸಾಕ್ಷಿ ರಾಹುಲ್ ಗಾಂಧಿ ಸದಸ್ಯತ್ವ ರದ್ದು ಮಾಡಿರುವುದು. ಇದನ್ನೇ ರಾಹುಲ್ ಗಾಂಧಿ ನಿರಂತವಾಗಿ ಹೇಳುತ್ತಿದ್ದುದು. ಪ್ರತಿಪಕ್ಷ ನಾಯಕರ ವಿರುದ್ಧ ಬಿಜೆಪಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಇದು ದೇಶಕ್ಕೆ ಒಳ್ಳೆಯದಲ್ಲʼʼ ಎಂದು ಹೇಳಿದರು.

ʻʻರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ಮೋದಿ ಅವರಿಗೂ ಅದಾನಿ ಅವರಿಗೆ ಇರುವ ಸಂಬಂಧವನ್ನು ಜನರಿಗೆ ತಿಳಿಸುತ್ತಾರೆ. ಭಯದಿಂದ ಈ ರೀತಿ ಮಾಡಿದ್ದಾರೆ. ಇದು ಹೇಡಿಗಳ ಸರ್ಕಾರʼʼ ಎಂದು ಹೇಳಿದರು ಯತೀಂದ್ರ.

ಇದನ್ನೂ ಓದಿ : Karnataka Elections : ವರುಣಾದಿಂದಲೇ ಸಿದ್ದರಾಮಯ್ಯ ಸ್ಪರ್ಧೆ, ಬಾದಾಮಿಯಿಂದಲೂ ಟಿಕೆಟ್‌ ಕೋರಿಕೆ?

Exit mobile version