Site icon Vistara News

ರಾಜ್ಯಸಭೆ ಚುನಾವಣೆ ಹೊಸ ಟ್ವಿಸ್ಟ್‌: JDS ಶಾಸಕರಿಗೆ ʼಕೈʼ ಶಾಸಕಾಂಗ ನಾಯಕ ಸಿದ್ದು ಪತ್ರ!

siddaramaiah

ಬೆಂಗಳೂರು: ರಾಜ್ಯಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಬೇಕೆಂದು ಮಾಧ್ಯಮಗಳ ಮೂಲಕ ಮನವಿ ಮಾಡುವುದರಲ್ಲೆ ನಿರತವಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ಜಾತ್ಯಾತೀತತೆಯ ಹೆಸರಿನಲ್ಲಿ ಜೆಡಿಎಸ್‌ ಶಾಸಕರಿಗೆ ಮನವಿ ರೂಪದ ಬ್ಲ್ಯಾಕ್‌ಮೇಲ್‌ ಪತ್ರ ಬರೆದಿದ್ದಾರೆ.

ಜೆಡಿಎಸ್‌ ಪಕ್ಷವು ಅಲ್ಪಸಂಖ್ಯಾತರ ಪರ ಎಂದು ಗುರುತಿಸಿಕೊಂಡಿದೆ. ಇದನ್ನೇ ದಾಳವಾಗಿಡಿಕೊಂಡಿರುವ ಕಾಂಗ್ರೆಸ್‌ ಬುಧವಾರವಷ್ಟೆ, ಮುಸ್ಲಿಂಸ್‌ ಆಫ್‌ ಕರ್ನಾಟಕ ಹೆಸರಿನಲ್ಲಿ ಪತ್ರವೊಂದನ್ನು ಹರಿಬಿಟ್ಟಿತ್ತು. ದೇವೇಗೌಡರನ್ನು ಹಾಡಿ ಹೊಗಳಿದ್ದ ಆ ಪತ್ರದಲ್ಲಿ, ಕೊನೆಗೆ ಬ್ಲ್ಯಾಕ್‌ಮೇಲ್‌ ತಂತ್ರವನ್ನೇ ಅನುಸರಿಸಲಾಗಿತ್ತು. ತಾವು ಎಂದಿಗೂ ಜಾತ್ಯಾತೀತ ತತ್ವವನ್ನು ಪಾಲಿಸಿದ್ದೀರಿ. ಈಗಲೂ ಅದನ್ನೇ ನಿಭಾಯಿಸಿ ಎನ್ನುವಂತೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೇ ಬ್ಲ್ಯಾಕ್‌ಮೇಲ್‌ ಮಾಡಲಾಗಿತ್ತು. ಆದರೆ ಈ ಪತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡದೆ, ʼವಿವಿಧ ಮೂಲಗಳʼ ಮೂಲಕ ಕಾಂಗ್ರೆಸ್‌ ಹರಿಬಿಟ್ಟಿತ್ತು. ಈಗ ಸಿದ್ದರಾಮಯ್ಯ ಅಧಿಕೃತವಾಗಿಯೇ ಜೆಡಿಎಸ್‌ ಶಾಸಕರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ | Rajyasabha Election | ಕಾಂಗ್ರೆಸ್‌-ಜನತಾದಳದ ʼಆತ್ಮಸಾಕ್ಷಿʼ ಜಗಳ

“ಜಾತ್ಯತೀತ ಜನತಾದಳದ ವಿಧಾನಸಭಾ ಸದಸ್ಯರಿಗೆ ಪ್ರೀತಿಯ ನಮಸ್ಕಾರಗಳು” ಎಂದು ಪತ್ರ ಆರಂಭಿಸಿರುವ ಸಿದ್ದರಾಮಯ್ಯ, “ದೇಶ ಅತ್ಯಂತ ಆತಂಕಕಾರಿ ಹಾದಿಯಲ್ಲಿ ಸಾಗುತ್ತಿರುವುದು ನಮ್ಮೆಲ್ಲರ ಅರಿವಿನಲ್ಲಿದೆ. ಸಾಮಾಜಿಕ ನ್ಯಾಯ, ಸಮಾನತೆ,ಭಾತೃತ್ವ, ಜಾತ್ಯತೀತತೆ ಮೊದಲಾದ ಸಂವಿಧಾನದ ಆಶಯಗಳ ಮೇಲೆ ಪ್ರಭುತ್ವವೇ ನಡೆಸುತ್ತಿರುವ ನಿರಂತರ ದಾಳಿಯಿಂದ ದೇಶದ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ” ಎಂದು ನೇರವಾಗಿ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಲ್ಪಸಂಖ್ಯಾತರ ಹೆಸರಿನಲ್ಲಿ ದೇವೇಗೌಡರಿಗೆ ಬರೆಯಲಾಗಿರುವ ಪತ್ರ

ಈಗಾಗಲೆ ಅನೇಕ ಬಾರಿ ಹೇಳಿರುವ ಆತ್ಮಸಾಕ್ಷಿ ಮತಗಳತ್ತ ಚಿತ್ತ ಹರಿಸಿರುವ ಸಿದ್ದರಾಮಯ್ಯ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ, ಶೈಕ್ಷಣಿಕ,ಆರ್ಥಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಬದಲಾವಣೆಗಳಿಗೂ ರಾಜಕೀಯ ಬದಲಾವಣೆಯೇ ಚಾಲನಾ ಶಕ್ತಿ ಎನ್ನುವುದು ನಾವು ಇತಿಹಾಸದಿಂದ ಕಲಿತ ಪಾಠವಾಗಿದೆ. ಕಲಿತ ಪಾಠವನ್ನು ಪ್ರಯೋಗಿಸುವ ಅವಕಾಶ ಎದುರಾದಾಗ ಮುಕ್ತ ಮನಸ್ಸಿನಿಂದ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಕರ್ತವ್ಯ. ಇಂತಹದ್ದೊಂದು ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವ ಅವಕಾಶವನ್ನು ಇದೇ ಜೂನ್ ಹತ್ತರಂದು ರಾಜ್ಯದಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆ ನಮಗೆ ನೀಡಿದೆ. ಕಾಂಗ್ರೆಸ್ ಕೋಮುವಾದದ ಜೊತೆ ಎಂದೂ ರಾಜಿಯಾಗದೆ ಜಾತ್ಯತೀತತೆ ಪರವಾಗಿ ಗಟ್ಟಿಯಾಗಿ ನಿಂತಿರುವ ಪಕ್ಷ. ಕೋಮುವಾದಿ ಶಕ್ತಿಗಳನ್ನು ಸೋಲಿಸುವ ಪ್ರಸಂಗ ಎದುರಾದಾಗ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವನ್ನು ಲೆಕ್ಕಿಸದೆ ಜಾತ್ಯತೀತತೆ ಪರವಾಗಿ ಕಾಂಗ್ರೆಸ್ ಪಕ್ಷ ನಿಂತಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ” ಎಂದಿದ್ದಾರೆ.

ಈ ಹಿಂದೆ ತಾವು ಜೆಡಿಎಸ್‌ಗೆ ಮಾಡಿದ ಉಪಕಾರಗಳನ್ನು ಸ್ಮರಿಸಿರುವ ಸಿದ್ದರಾಮಯ್ಯ, “ಜಾತ್ಯತೀತ ಜನತಾದಳದ ಹಿರಿಯ ನಾಯಕ ಎಚ್.ಡಿ. ದೇವೇಗೌಡರಿಗೆ ಪ್ರಧಾನಿಯಾಗುವ ಅವಕಾಶ ಎದುರಾದಾಗ ಕಾಂಗ್ರೆಸ್ ಪಕ್ಷ ಮುಕ್ತ ಹೃದಯದಿಂದ ಬೆಂಬಲಿಸಿತ್ತು. ಎರಡು ವರ್ಷಗಳ ಹಿಂದೆ ದೇವೇಗೌಡರು ರಾಜ್ಯಸಭಾ ಚುನಾವಣೆಯನ್ನು ಎದುರಿಸಿದಾಗ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಗೌಡರನ್ನು ಬೆಂಬಲಿಸಿ ಗೆಲ್ಲಿಸಿತ್ತು. ನಾಲ್ಕು ವರ್ಷಗಳ ಹಿಂದೆ ಕೇವಲ 37 ಶಾಸಕರನ್ನು ಹೊಂದಿದ್ದ ಜಾತ್ಯತೀತ ಜನತಾದಳಕ್ಕೆ ನಮ್ಮ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಹೆಚ್.ಡಿ.ಕುಮರಾಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿತ್ತು” ಎಂದು ಹೇಳಿದ್ದಾರೆ.

ಜೆಡಿಎಸ್‌ಗೆ ಬೇಂಬಲ ನೀಡಿದ್ದನ್ನು ಸೈದ್ದಾಂತಿಕ ಬದ್ದತೆ ಎಂದಿರುವ ಸಿದ್ದರಾಮಯ್ಯ, “ಈ ಬಾರಿ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಇದೇ ಸೈದ್ದಾಂತಿಕ ಬದ್ದತೆಯಿಂದ ಜಾತ್ಯತೀತ ಜನತಾದಳ ನಮ್ಮ ಎರಡನೇ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸಬಹುದು ಎಂಬ ನಿರೀಕ್ಷೆಯಿಂದ ನಮ್ಮ ಯುವನಾಯಕ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿದ್ದೆವು. ನಮ್ಮ ಅಭ್ಯರ್ಥಿ ಘೋಷಣೆ ಮಾಡಿದ ಮರುದಿನ ತಮ್ಮಲ್ಲಿ ಒಬ್ಬ ಅಭ್ಯರ್ಥಿಯನ್ನೂ ಗೆಲ್ಲಿಸುವಷ್ಟು ಮತಗಳು ಲಭ್ಯವಿಲ್ಲದೆ ಇದ್ದರೂ ಜೆಡಿಎಸ್ ಪಕ್ಷ, ಹಠಾತ್ತನೆ ತನ್ನ ಅಭ್ಯರ್ಥಿಯನ್ನು ಘೋಷಿಸಿರುವುದು ನಮಗೆ ಆಘಾತವುಂಟುಮಾಡಿದೆ” ಎಂದು ಪಕ್ಷದ ವಿರುದ್ಧವೇ ಜೆಡಿಎಸ್‌ ಶಾಸಕರನ್ನು ಎತ್ತಿಕಟ್ಟಲು ಸಿದ್ದರಾಮಯ್ಯ ಅವರ ಪ್ರಯತ್ನ ಸ್ಪಷ್ಟವಾಗಿ ಕಾಣುತ್ತದೆ.

ಜೆಡಿಎಸ್‌ ಪಕ್ಷಕ್ಕೆ ಯಾವ ಭಾಷೆಯಲ್ಲಿ ಹೇಳಬೇಕು ಎಂದು ತಿಳಿದಿರುವ ಸಿದ್ದರಾಮಯ್ಯ, ನಾಡಗೀತೆ, ಕುವೆಂಪು ಹಾಗೂ ಕೆಂಪೇಗೌಡರ ವಿಚಾರವನ್ನು ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸಿದ್ದಾರೆ. “ಈ ಚುನಾವಣೆ ಬಹುಮುಖ್ಯವಾಗಿ ಜಾತ್ಯತೀತತೆ ಮತ್ತು ಕೋಮುವಾದ ಎಂಬ ಎರಡು ಸಿದ್ದಾಂತಗಳ ನಡುವಿನ ಸಮರವೂ ಆಗಿದೆ ಎನ್ನುವುದನ್ನು ನೀವು ಬಲ್ಲಿರಿ. ರಾಷ್ಟ್ರಕವಿ ಕುವೆಂಪು ಅವರು ಹೆಮ್ಮೆಯಿಂದ ಹೇಳಿಕೊಂಡ ಸರ್ವಜನಾಂಗದ ಶಾಂತಿಯ ತೋಟವನ್ನು ಬಿಜೆಪಿ, ಧಾರ್ಮಿಕ ದ್ವೇಷಾಸೂಯೆಗಳಿಂದ ಹಾಳುಗೆಡಹುತ್ತಿರುವುದನ್ನು ನಾವು ನಿತ್ಯ ನೋಡುತ್ತಿದ್ದೇವೆ. ಪಠ್ಯಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಬಸವಣ್ಣ,ಅಂಬೇಡ್ಕರ್, ನಾರಾಯಣ ಗುರು, ನಾಡಪ್ರಭು ಕೆಂಪೇಗೌಡ, ಕುವೆಂಪು ಸೇರಿದಂತೆ ನಾವು ಗೌರವಿಸುವ ಮಹಾಪುರುಷರಿಗೆ ಮಾಡಿರುವ ಅವಮಾನ ಇದಕ್ಕೆ ಇತ್ತೀಚಿನ ಜ್ವಲಂತ ಉದಾಹರಣೆ” ಎಂದಿದ್ದಾರೆ.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಜೆಡಿಎಸ್‌ ತೆಕ್ಕೆಯಿಂದ ಹಾರಿದ ತುಮಕೂರು ʼಗುಬ್ಬಿʼ

“ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆಯಾಗಿ ರಾಜ್ಯಸಭಾ ಚುನಾವಣೆ ನಮ್ಮ ಮುಂದಿದೆ. ಸೈದ್ದಾಂತಿಕವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದು ಕಡೆ ಇದ್ದರೆ, ಕೋಮುವಾದವನ್ನೇ ಉಸಿರಾಡುವ ಬಿಜೆಪಿ ಇನ್ನೊಂದು ಕಡೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಎರಡನೇ ಅಭ್ಯರ್ಥಿಯಾಗಿರುವ ಮನ್ಸೂರ್ ಅಲಿ ಖಾನ್ ಅವರ ಸೋಲು-ಗೆಲುವನ್ನು ರಾಜ್ಯದ ಅಲ್ಪಸಂಖ್ಯಾತ ಸಮುದಾಯ ಮಾತ್ರವಲ್ಲ ಜಾತ್ಯತೀತತೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕುತೂಹಲದಿಂದ ಗಮನಿಸುತ್ತಿದ್ದಾರೆ. ಸೈದ್ದಾಂತಿಕ ಬದ್ದತೆಯಿಂದ ಜಾತ್ಯತೀತ ಜನತಾದಳ ಬೆಂಬಲಿಸಿದರೆ ಈ ಯುವನಾಯಕನ ಆಯ್ಕೆ ನಿರಾತಂಕವಾಗಿ ನಡೆದುಹೋಗುತ್ತದೆ.

“ಮನ್ಸೂರು ಅಲಿ ಖಾನ್ ಅವರ ಗೆಲುವು ಯಾವುದೇ ಒಂದು ಪಕ್ಷದ ಗೆಲುವಾಗದೆ ಜಾತ್ಯತೀತ ಸಿದ್ದಾಂತದ ಮೇಲೆ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಪಕ್ಷಗಳೆರಡರ ಸೈದ್ದಾಂತಿಕ ಗೆಲುವಾಗುತ್ತದೆ. ಪ್ರಜಾಪ್ರತಿನಿಧಿಗಳಾದ ನಾವೆಲ್ಲರೂ ನಮ್ಮ ಪ್ರಭುಗಳಾದ ಪ್ರಜೆಗಳ ಆತ್ಮಸಾಕ್ಷಿಗೆ ದನಿಯಾಗಬೇಕಾಗಿರುವುದು ಕರ್ತವ್ಯವಾಗಿದೆ” ಎಂದು ಜೆಡಿಎಸ್‌ ಪಕ್ಷದ ಶಾಸಕರು ಕಡ್ಡಾಯವಾಗಿ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ನೇರವಾಗಿ ಹೇಳಿದ್ದಾರೆ. ಈ ಆತ್ಮಸಾಕ್ಷಿಯ ಮತವನ್ನು ಜಾತ್ಯತೀತತೆಗೆ ಬದ್ದವಾಗಿರುವ ನಮ್ಮ ಪಕ್ಷದ ಮನ್ಸೂರ್ ಅಲಿ ಖಾನ್ ಅವರಿಗೆ ಚಲಾಯಿಸಬೇಕೆಂದು ನನ್ನ ಸವಿನಯ ವಿನಂತಿ ಎಂದು ಪತ್ರ ಮುಗಿಸಿದ್ದಾರೆ.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ನಮ್ಮ ಆಫರ್‌ ಇನ್ನೂ ಮುಗಿದಿಲ್ಲ ಎಂದ ಕುಮಾರಸ್ವಾಮಿ

Exit mobile version