ಮೈಸೂರು: ವಿಧಾನಸಭಾ ಚುನಾವಣೆಗೆ (Karnataka Election 2023) ರಾಜ್ಯ ರಾಜಕೀಯ ಸಜ್ಜಾಗಿದೆ. ಈಗಾಗಲೇ ಒಂದು ಹಂತದಲ್ಲಿ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಎಂಬುದನ್ನು ಆಯಾ ಪಕ್ಷಗಳು ಫೈನಲ್ ಮಾಡಿವೆ. ಇನ್ನು ಜೆಡಿಎಸ್ ಈಗಾಗಲೇ 120 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದೆ. ಈಗ ಈ ಮುಂಚೆ ಕಾಂಗ್ರೆಸ್‌ಗೆ ಹೋಗಲಿದ್ದಾರೆ ಎಂಬ ಬಗ್ಗೆ ಸುದ್ದಿಯಲ್ಲಿದ್ದು ಕೊನೆಗೆ ಜೆಡಿಎಸ್‌ನಲ್ಲಿಯೇ ಉಳಿದಿರುವ ಮಾಜಿ ಸಚಿವ ಜಿ.ಟಿ. ದೇವೇಗೌಡ (GT Devegowda) ಅವರಿಗೆ ಸರಿಯಾದ ಏಟು ಕೊಡಲು ಸಿದ್ಧತೆ ನಡೆಸಿರುವ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಹುತೇಕ ಟಿಕೆಟ್ ಅನ್ನು ಫೈನಲ್ ಮಾಡಿದ್ದಾರೆ.
ಕಾಂಗ್ರೆಸ್‌ನಿಂದ ಈ ಬಾರಿ ಮಾವಿನಹಳ್ಳಿ ಸಿದ್ದೇಗೌಡ ಕಣಕ್ಕಿಳಿಸಲು ತೀರ್ಮಾನ ಮಾಡಿರುವ ಸಿದ್ದರಾಮಯ್ಯ ಅವರು, ಶಾಸಕ ಜಿ.ಟಿ. ದೇವೇಗೌಡ ವಿರುದ್ಧ ಜಾತಿ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಸೇರಿದ ಮುಖಂಡರಿಗೆ ಸ್ಪಷ್ಟ ಸಂದೇಶವನ್ನು ಈ ಮೂಲಕ ರವಾನೆ ಮಾಡಿದ್ದಾರೆ.
ಬೀರಿಹುಂಡಿ ಬಸವಣ್ಣ, ಯರಗನಹಳ್ಳಿ ಮಾದೇಗೌಡ, ಹಿನಕಲ್ ಕೃಷ್ಣನಾಯಕ, ಮಾವಿನಹಳ್ಳಿ ಸಿದ್ದೇಗೌಡ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು. ಇವರೆಲ್ಲರೂ ಜಿ.ಟಿ. ದೇವೇಗೌಡ ಅವರ ವಿರುದ್ಧದ ಬಂಡಾಯ ಗುಂಪಿನವರಾಗಿದ್ದಾರೆ. ಇವರು ಪಕ್ಷ ಸೇರ್ಪಡೆ ಸಂದರ್ಭದಲ್ಲಿಯೇ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಇವರೆಲ್ಲರೂ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿ ಇದ್ದಾಗಿನಿಂದಲೂ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಮುಖಂಡರಾಗಿದ್ದರು ಎನ್ನಲಾಗಿದೆ.
ಅಲ್ಲದೆ, ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿ.ಟಿ. ದೇವೇಗೌಡ ವಿರುದ್ಧ ಸೋಲನುಭವಿಸಿದ್ದರು. ಅವರು ಇನ್ನೊಂದು ಕ್ಷೇತ್ರವಾದ ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ್ದರಿಂದ ಅಲ್ಲಿ ಜಯಗಳಿಸಿದ್ದರು. ಆದರೆ, ತಮ್ಮ ಸೋಲಿಗೆ ಕಾರಣವಾಗಿದ್ದ ಜಿ.ಟಿ. ದೇವೇಗೌಡ ವಿರುದ್ಧ ಒಂದು ಮಟ್ಟದ ಸಿಟ್ಟಂತೂ ಸಿದ್ದರಾಮಯ್ಯ ಅವರಿಗೆ ಇದ್ದೇ ಇತ್ತು. ಅದೂ ಅಲ್ಲದೆ, ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಬಗ್ಗೆ ಮಾತುಕತೆ ನಡೆಸಿದ್ದ ಜಿಟಿಡಿ ಕೊನೇ ಘಳಿಗೆಯಲ್ಲಿ ಹಿಂದೇಟು ಹಾಕಿದ್ದೂ ಸಿದ್ದರಾಮಯ್ಯ ಮುನಿಸಿಗೆ ಕಾರಣ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಲ್ಲದೆ, ಚಾಮುಂಡೇಶ್ವರಿ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ತಂತ್ರ ಹೆಣೆಯುತ್ತಿರುವ ಸಿದ್ದರಾಮಯ್ಯ, ಜಿಟಿಡಿ ಅವರನ್ನು ಹಣಿಯಲು ಅಳೆದು ತೂಗಿ ಮಾವಿನಹಳ್ಳಿ ಸಿದ್ದೇಗೌಡ ಅವರನ್ನು ಕಣಕ್ಕಿಳಿಸಲು ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: PM Modi: ಮಾ.12ರಂದು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ರದ್ದು; ಇದು ಮೋದಿ ಭೇಟಿ ಎಫೆಕ್ಟ್
ಕಾಂಗ್ರೆಸ್ ಟಿಕೆಟ್‌ಗಾಗಿ 9 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಕೆ. ಮರಿಗೌಡ ಮನಿಸಿಕೊಂಡಿದ್ದು, ಶಮನಕ್ಕೆ ಸಂಧಾನ ಸೂತ್ರವನ್ನೂ ಸಹ ಸಿದ್ದರಾಮಯ್ಯ ಮಾಡಿದ್ದಾರೆನ್ನಲಾಗಿದೆ. ಜಿಲ್ಲಾಧ್ಯಕ್ಷ ಡಾ.ಬಿ .ಜೆ. ವಿಜಯ ಕುಮಾರ್ ಹೆಸರೂ ಚರ್ಚೆಯಾಗಿತ್ತು. ಒಕ್ಕಲಿಗ ಸಮುದಾಯದ ಅಭ್ಯರ್ಥಿ ಎನ್ನುವ ಕಾರಣಕ್ಕೆ ಸಿದ್ದೇಗೌಡರಿಗೆ ಮಣೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.