ಬೆಂಗಳೂರು: ಸಿದ್ದರಾಮೋತ್ಸವದ ಅಂಗವಾಗಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿರುವ 76 ಅಡಿ ಎತ್ತರದ ಮೂರು ಕಟೌಟ್ ಅಳವಡಿಸಲಾಗಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಈ ಕಟೌಟ್ ನಲ್ಲಿ ಜಾಗ ಕೊಟ್ಟಿಲ್ಲ! ಈ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆಯಲಾರಂಭಿಸಿದೆ.
ಈ ನಡುವೆ, ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸಮ್ಮುಖದಲ್ಲಿ ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್ , ಈಶ್ವರ್ ಖಂಡ್ರೆ, ಧ್ರುವನಾರಾಯಣ್, ಸತೀಶ್ ಜಾರಕಿಹೊಳಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ , ಕೆಪಿಸಿಸಿ ಪ್ರನಾಳಿಕೆ ಸಮಿತಿ ಅಧ್ಯಕ್ಷ ಡಾ ಜಿ ಪರಮೇಶ್ವರ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ದಿನೇಶ್ ಗೂಂಡುರಾವ್, ಎಚ್.ಕೆ ಪಾಟೀಲ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ , ಎಐಸಿಸಿ ಕಾರ್ಯದರ್ಶಿಗಳು, ಮತ್ತಿತರ ಮುಖಂಡರು, ಹಾಲಿ ಮತ್ತು ಮಾಜಿ ಶಾಸಕರು, ಎಂಎಲ್ಸಿಗಳು ಹಾಜರಿದ್ದರು.
ಮುಂದುವರೆದ ಕೆ.ಎಚ್. ಮುನಿಯಪ್ಪ ಮುನಿಸು
ರಾಜಕೀಯ ವ್ಯವಹಾರಗಳ ಸಮಿತಿ ಸಭೆಗೆ ಮುನಿಯಪ್ಪ ಗೈರು ಹಾಜರಾಗಿರುವುದು ಎದ್ದು ಕಂಡಿತು. ರಾಜ್ಯ ನಾಯಕರು ತಮ್ಮನ್ನು ಪರಿಗಣಿಸುತ್ತಿಲ್ಲ ಎಂದು ಮುನಿಯಪ್ಪ ಅಸಮಾಧಾನಗೊಂಡಿದ್ದಾರೆ. ಮುನಿಯಪ್ಪ ಅವರು ಜೆಡಿಎಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ರಾಹುಲ್ ಗಾಂಧಿ ಆಗಮಿಸಿದ ಸಭೆಗೂ ಮುನಿಯಪ್ಪ ಬಾರದಿರುವುದು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ | Siddaramotsava | ಬಣ ತಲ್ಲಣಗಳ ಮಧ್ಯೆ ಅದ್ಧೂರಿತನ; ರಾಜ್ಯದಲ್ಲಿ ಸಿದ್ದರಾಮೋತ್ಸವ ಧ್ಯಾನ!