Site icon Vistara News

ಸಿದ್ದರಾಮೋತ್ಸವ | ಸಿದ್ದರಾಮಯ್ಯಗೆ ವರವೋ? ಶಾಪವೋ?

ಮಾಜಿ ಸಿ.ಎಂ ಸಿದ್ದರಾಮಯ್ಯ

ಯಶವಂತ್ ಕುಮಾರ್.ಎ, ದಾವಣಗೆರೆ
ಕಾಂಗ್ರೆಸ್ ಮಾಸ್‌ ಲೀಡರ್‌ ಹಾಗೂ ಹಿಂದುಳಿದ ವರ್ಗಗಳ ಶಕ್ತಿ ಎಂದೇ ಹೆಸರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಂಗವಾಗಿ ಆಗಸ್ಟ್ 3ರಂದು ಹಮ್ಮಿಕೊಳ್ಳಲಾದ “ಸಿದ್ದರಾಮೋತ್ಸವ” ಕಾರ್ಯಕ್ರಮವು ಪರೋಕ್ಷ ಶಕ್ತಿ ಪ್ರದರ್ಶನ ಎಂದೇ ಹೇಳಲಾಗುತ್ತಿದೆ. ಆದರೆ, ಇದು ನಿಜವಾಗಿಯೂ ಸಿದ್ದರಾಮಯ್ಯ ಅವರಿಗೆ ವರವಾಗಲಿದೆಯೋ? ಶಾಪವಾಗಲಿದೆಯೋ? ಎಂಬ ಚರ್ಚೆಗಳು ನಡೆಯುತ್ತಿವೆ.

ದಾವಣಗೆರೆ ಹೊರವಲಯದ ಡಾ.ಶಾಮನೂರು ಅರಮನೆ ಮೈದಾನದಲ್ಲಿ ಬೃಹತ್‌ ವೇದಿಕೆಯೊಂದು ಸಿದ್ಧವಾಗುತ್ತಿದೆ. ಈ ವೇದಿಕೆ ಸುಮಾರು 50 ಎಕರೆ ಪ್ರದೇಶದಲ್ಲಿ 50 ಅಡಿ ಉದ್ದ, 200 ಅಡಿ ಅಗಲದಲ್ಲಿ ವಿಸ್ತಾರವಾಗಿರಲಿದೆ. ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಸುಮಾರು 6 ಲಕ್ಷಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.

ಮುಂದಿನ ವರ್ಷ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈಗಾಗಲೇ ಎಲ್ಲ ಪಕ್ಷಗಳು ಬಿರುಸಿನ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ. ಆದರೆ, ಕಾಂಗ್ರೆಸ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ “ನಾನು ಮುಂದಿನ ಸಿಎಂ ಆಗಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು “ಒಕ್ಕಲಿಗ ಸಮುದಾಯ ನನ್ನ ಕೈಬಿಡುವುದಿಲ್ಲ” ಎಂದು ಹೇಳಿಕೊಂಡಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಬಣದ ಶಾಸಕರು ಮುಂದಿನ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯ ಆಗುತ್ತಾರೆ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ.

ಈಗಾಗಲೇ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಿರುವ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮತ್ತೊಮ್ಮೆ ಸಿಎಂ ಆಗುವ ಹಂಬಲವನ್ನು ಹೊರಹಾಕಿದ್ದಾರೆ. ಸಿದ್ದರಾಮಯ್ಯ ಕನಸಿಗೆ ಡಿ.ಕೆ.ಶಿವಕುಮಾರ್ ಅಡ್ಡಿಯಾಗಿದ್ದು, ಈ ಬಗ್ಗೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಈ ಮೂಲಕ ಡಿ.ಕೆ.ಶಿವಕುಮಾರ್‌ ಅವರನ್ನು ಬೆರಗಾಗಿಸಬಹುದು. ಅಲ್ಲದೆ, ತಮ್ಮ ಇಷ್ಟು ವರ್ಷದ ರಾಜಕೀಯ ಅನುಭವವನ್ನು ಈ ಕಾರ್ಯಕ್ರಮದಲ್ಲಿ ಧಾರೆ ಎರೆಯಲಿದ್ದಾರೆ ಎಂಬ ಅಭಿಪ್ರಾಯವೂ ಇದೆ.

ಈ ಹಿಂದೆ 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಸಿಎಂ ಆಗಲು ಅವರ ಹೋರಾಟ ಮತ್ತು ತಂತ್ರಗಾರಿಕೆಯೇ ಕಾರಣವಾಗಿತ್ತು.

ಬೆಂಗಳೂರು-ಬಳ್ಳಾರಿ ಪಾದಯಾತ್ರೆ

ಕಾಂಗ್ರೆಸ್ 2013 ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬಳ್ಳಾರಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ತೊಡೆತಟ್ಟಿ ನಿಂತಿದ್ದರು. ಅಕ್ರಮ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಂಡಿದ್ದರು. ಸುಮಾರು 300 ಕಿ.ಮೀ.ಗೂ ಅಧಿಕ ದೂರ ಕಾಲ್ನಡಿಗೆಯಿಂದ ಪ್ರಯಾಣಿಸಿದ್ದರು. ಇದರಿಂದ ಬಿಜೆಪಿ ಮತ್ತು ಗಾಲಿ ಜನಾರ್ದನ ರೆಡ್ಡಿಗೆ ತಲೆನೋವಾಗಿದ್ದರು. ಕಾಂಗ್ರೆಸ್ ಪಕ್ಷದ ಮಾಸ್ ಲೀಡರ್ ಎಂಬ ಖ್ಯಾತಿಯನ್ನು ಪಡೆದಿದ್ದರು. ಯಶಸ್ವಿ ಪಾದಯಾತ್ರೆಯ ಪರಿಣಾಮ 2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರು. ಕಾಂಗ್ರೆಸ್‌ಗೆ ಬಹುಮತ ಬರುತ್ತಿದ್ದಂತೆ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಕೂಡ ಆಗಿದ್ದರು.

ಸಿದ್ದು ಸದೆಬಡಿಯಲು ಕಾಂಗ್ರೆಸ್ “ಬಿ” ಟೀಂ

2005ರಲ್ಲಿ ಧರ್ಮಸಿಂಗ್ ನೇತೃತ್ವದ ಸರ್ಕಾರವಿದ್ದಾಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ರಾಜ್ಯಾದ್ಯಂತ ಅಹಿಂದ ಸಂಘಟನೆ ಹಾಗೂ ಸಮಾವೇಶಗಳನ್ನು ಮಾಡಿದರು. ಆಗ ಹಿಂದುಳಿದ ವರ್ಗಗಳಲ್ಲಿ ಮಾಸ್ ಲೀಡರ್ ಆಗಿ ಗುರುತಿಸಿಕೊಂಡರು. ಈಗ ಪುನಃ ಅದೇ ಮಾದರಿಯ ತಂತ್ರಗಾರಿಕೆಯನ್ನು ರೂಪಿಸಿದ್ದಾರೆ. ಸಿದ್ದರಾಮಯ್ಯ ಅವರು “ಅಮೃತ ಮಹೋತ್ಸವ’’ದ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಶಕ್ತಿಯಾಗಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ಇದು ಕೆಲವು ಕಾಂಗ್ರೆಸ್‌ ಪ್ರಮುಖ ನಾಯಕರ ಕಣ್ಣು ಕೆಂಪಗಾಗಿಸಿದ್ದು, “ಬಿ” ಟೀಂ ರಚಿಸಿಕೊಂಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಠಕ್ಕರ್‌ ಕೊಡಲು ತಯಾರಿ ಮಾಡಿಕೊಂಡಿದ್ದಾರೆನ್ನಲಾಗಿದೆ.

ಮುಯ್ಯಿಗೆ ಮುಯ್ಯಿ ಎನ್ನುತ್ತಿದೆ ಕಾಂಗ್ರೆಸ್ ಮೂಲ

ಸಿದ್ದರಾಮಯ್ಯ ಅವರ ತಂತ್ರಗಾರಿಕೆ ಅವರಿಗೇ ಮುಳುವಾಗಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿದೆ . 2018ರ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ ಎನ್ನುವುದು ಪಕ್ಷದ ಒಳಗಿನ ಚರ್ಚೆಯಾಗಿದೆ. ಅಲ್ಲದೆ, ಮುನಿಯಪ್ಪ ಅವರ ಸೋಲಿಗೆ ಪಕ್ಷದ ಗುಂಪುಗಾರಿಕೆ ಕಾರಣ ಎಂದೂ ಹೇಳಲಾಗಿದೆ. ಮಲ್ಲಿಕಾರ್ಜುನ ಖರ್ಗೆ ವಿಧಾನಸಭೆಯಿಂದ ಸ್ಪರ್ಧಿಸಿದರೆ ತಮಗೆ ಕಷ್ಟ ಆಗುತ್ತದೆ ಎಂದು ಅವರನ್ನು ಕೇಂದ್ರಕ್ಕೆ ಹೋಗುವಂತೆ ನೋಡಿಕೊಂಡಿದ್ದು ಇದೇ ಸಿದ್ದರಾಮಯ್ಯ ಎಂಬ ಮಾತುಗಳೂ ಓಡಾಡುತ್ತಿದ್ದು, ಇದು ದಲಿತ ಸಮುದಾಯದ ಅಸಮಾಧಾನಕ್ಕೂ ಕಾರಣವಾಗಿದೆ ಎಂದು ಹೇಳಲಾಗಿದೆ.

ಇಷ್ಟೆಲ್ಲ ತಂತ್ರಗಾರಿಕೆ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ “ಬಿ” ಟೀಂ ಈ ಬಾರಿ ಶಾಕ್ ಕೊಡಲಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಸಿದ್ದರಾಮಯ್ಯ ಈವರೆಗೂ ಯಾವ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿಲ್ಲ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಅವರನ್ನು ಸೋಲಿಸಲು ತಂತ್ರವನ್ನು ಸಿದ್ಧಪಡಿಸಿದ್ದು, ಈ ಅಮೃತ ಮಹೋತ್ಸವ ಅವರಿಗೆ ಶಾಪ ಆಗುವಂತೆ ಮಾಡಲು ಪಕ್ಷದೊಳಗೆ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ: ಬೀದರ್‌ನಿಂದ ವಿಶೇಷ ರೈಲು ಬಿಟ್ಟ ಇಲಾಖೆ

Exit mobile version