ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಪ್ರಯುಕ್ತ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ (Siddaramotsava) ಆಡಳಿತ ಪಕ್ಷ ಬಿಜೆಪಿ ಸಚಿವರಿಂದ ವಿರೋಧದ ಹೇಳಿಕೆಗಳು ವ್ಯಕ್ತವಾಗಿವೆ. ಈಗ ಸಿದ್ದರಾಮಯ್ಯ ಎದ್ದರಾಮಯ್ಯ, ಮುಂದೆ ಬಿದ್ದರಾಮಯ್ಯ ಆಗುತ್ತಾರೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರೆ, ಇಂದು ಸಿದ್ದರಾಮೋತ್ಸವ, ನಾಳೆ ಶಿವಕುಮಾರೋತ್ಸವ ಎಂದು ಸಚಿವ ಸಿ.ಸಿ.ಪಾಟೀಲ್ ಕಾಲೆಳೆದಿದ್ದಾರೆ.
ಮುಂದೆ ಬಿದ್ದರಾಮಯ್ಯ ಆಗ್ತಾರೆ- ಸಚಿವ ಶ್ರೀರಾಮುಲು
ಸಿದ್ದರಾಮಯ್ಯರವರು ಎದ್ದರಾಮಯ್ಯ ತರ. ಈಗ ಜಿಗಿದಾಡಿದವರು ಮುಂದಿನ ದಿನಗಳಲ್ಲಿ ಬಿದ್ದರಾಮಯ್ಯ ಆಗುತ್ತಾರೆ ಎಂದು ಸಚಿವ ಬಿ.ಶ್ರೀರಾಮುಲು ಸುದ್ದಿಗಾರರಿಗೆ ತಿಳಿಸಿದರು.
ಸಿದ್ದರಾಮಯ್ಯ ಮತ್ತು ಡಿಕೆಶಿ ಪರಸ್ಪರ ಅಪ್ಪಿಕೊಂಡರೆ ಜನರು ಮರಳು ಆಗುವುದಿಲ್ಲ. ಇಡೀ ದೇಶದಲ್ಲಿ ಬಿಜೆಪಿ ಬಿಟ್ಟರೆ ಕಾಂಗ್ರೆಸ್ ಇಲ್ಲ. ಇಬ್ಬರನ್ನು (ಸಿದ್ದರಾಮಯ್ಯ ಮತ್ತು ಡಿಕೆಶಿ) ಒಂದು ಮಾಡಬೇಕೆಂದು ದೆಹಲಿಯಿಂದ ಒಬ್ಬ ಅಂಪೈರ್ ಬಂದಿದ್ದರು. ಯಾರನ್ನು ಇನ್ ಮಾಡಬೇಕು, ಯಾರನ್ನು ಔಟ್ ಮಾಡಬೇಕೆಂಬುದು ಅವರಿಗೆ ಗೊತ್ತಾಗಲಿಲ್ಲ. ಔಟ್ ಆದವರನ್ನು ಇನ್ ಮಾಡಿದ್ದಾರೆ. ಇನ್ ಆಗಿದ್ದವರನ್ನು ಔಟ್ ಮಾಡಿದ್ದಾರೆ. ಅಂಪೈರ್ ನಿರ್ಣಯವನ್ನು ತೆಗೆದುಕೊಳ್ಳದೆ ಗೊಂದಲಕ್ಕೆ ಸಿಲುಕಿಸಿ ಯಾವುದೇ ನಿರ್ಧಾರ ಕೈಗೊಳ್ಳಲಾಗದೆ ಹಿಂದಕ್ಕೆ ತೆರಳಿದ್ದಾರೆ ಎಂದು ರಾಹುಲ್ ಗಾಂಧಿ ಬಗ್ಗೆ ಹೆಸರು ಹೇಳದೆ ಟೀಕಿಸಿದರು.
ಇದನ್ನೂ ಓದಿ | ಸಿದ್ದರಾಮೋತ್ಸವ ಎಫೆಕ್ಟ್ ಕಡೆಗಣಿಸುವಂತಿಲ್ಲ; ಅಮಿತ್ ಶಾಗೆ ಯಡಿಯೂರಪ್ಪ ರಿಪೋರ್ಟ್
ಅಧಿಕಾರದ ಲಾಲಾಸೆಗಾಗಿ ಅಪ್ಪಿಕೊಳ್ಳುವ ಕೆಲಸ ಮಾಡಿದ್ದಾರೆ. ಎಷ್ಟೇ ಜನ ಸೇರಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಇದಕ್ಕಿಂತ ಮೂರುಪಟ್ಟು ಜನರನ್ನು ಸೇರಿಸಿ ಕಾರ್ಯಕ್ರಮವನ್ನು ನಾವು ಮಾಡುತ್ತೇವೆ. ಸಾಮೂಹಿಕ ನಾಯಕತ್ವದ ಮೂಲಕ ಅಧಿಕಾರ ಪಡೆಯುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು ಹರಿಹಾಯ್ದರು.
ನಾಳೆ ಶಿವಕುಮಾರೋತ್ಸವ- ಸಚಿವ ಸಿ.ಸಿ.ಪಾಟೀಲ್
ಇಂದು ಸಿದ್ದರಾಮೋತ್ಸವ, ನಾಳೆ ಶಿವಕುಮಾರೋತ್ಸವ ಮಾಡುತ್ತಾರೆ. ಕಾಂಗ್ರೆಸ್ ಪರ ಅಲೆ ಇದ್ದರೆ, ಜನರನ್ನು ಸೇರಿಸುವುದಕ್ಕೆ ಇಷ್ಟು ತ್ರಾಸು ಏಕೆ ತೆಗೆದುಕೊಳ್ಳಬೇಕಿತ್ತು ಎಂದು ಸಚಿವ ಸಿ.ಸಿ. ಪಾಟೀಲ್ ಲೇವಡಿ ಮಾಡಿದರು.
40% ಕಮಿಷನ್ ಸರ್ಕಾರ ಎನ್ನುವಂತೆ ಮಾತನಾಡುತ್ತಾರೆ. ನಿರ್ದಿಷ್ಟವಾಗಿ ದಾಖಲೆಗಳ ಸಹಿತ ದೂರು ದಾಖಲಿಸಲಿ. ಅದರ ಬಗ್ಗೆ ತನಿಖೆ ಮಾಡುತ್ತೇವೆ. ಈ ಬಗ್ಗೆ ಮಾತನಾಡಿದವರು ಕೂಡ ಸಿಎಂ ಸಭೆಗೆ ಬಂದು ಇಲಾಖೆಯ ವಿಚಾರದ ಬಗ್ಗೆ ಪ್ರಶಂಸೆವುಳ್ಳ ಮಾತುಗಳನ್ನಾಡಿದ್ದಾರೆ ಎಂದರು.
ಬಜೆಟ್‌ನಲ್ಲಿ ಹೇಳಿರುವಂತ ವಿಷಯವನ್ನು ಒಂದೂವರೆ ತಿಂಗಳಲ್ಲಿಯೇ ಕಾರ್ಯರೂಪಕ್ಕೆ ತರುವಂತ ಕೆಲಸವನ್ನು ಪ್ರಥಮ ಬಾರಿಗೆ ಬಸವರಾಜ್ ಬೊಮ್ಮಾಯಿ ಸರ್ಕಾರ ಮಾಡಿದೆ ಎಂದು ಸಿ.ಸಿ. ಪಾಟೀಲ್ ಹೇಳಿದರು.
ಇದನ್ನೂ ಓದಿ | ಸಿದ್ದರಾಮೋತ್ಸವದ ಬಗ್ಗೆ ನಂಗೆ ಆಸಕ್ತಿ ಇಲ್ಲ, ಇದು ಜಲಧಾರೆಯ 50% ಕೂಡಾ ಇಲ್ಲ ಎಂದ ಎಚ್‌ಡಿಕೆ