ಬೆಳಗಾವಿ: ಲಿಂಗಾಯತ ವೀರಶೈವ ಧರ್ಮ ವಿಭಜನೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವ್ಯಕ್ತಪಡಿಸಿರುವ ಪಶ್ಚಾತ್ತಾಪಕ್ಕೆ ಕುಡಚಿಯ ಬಿಜೆಪಿ ಶಾಸಕ ಪಿ. ರಾಜೀವ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಇನ್ನಷ್ಟು ವಿಚಾರಗಳಿಗೆ ಪಶ್ಚಾತ್ತಾಪಪಡುವ ದಿನಗಳು ಬರಲಿವೆ ಎಂದು ಹೇಳಿದ್ದಾರೆ.
ʻʻಸಿದ್ದರಾಮಯ್ಯ ಅವರ ಈ ಧೋರಣೆಯನ್ನು ನಾನು ಸ್ವಾಗತಿಸುತ್ತೇನೆ. ಸಿದ್ದರಾಮಯ್ಯ ಮುಂದೆಯೂ ಹಲವು ವಿಚಾರಗಳಿಗೆ ಹೀಗೇ ಪಶ್ಚಾತ್ತಾಪಪಡುವ ದಿನಗಳು ಬರುತ್ತವೆ. ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ನಿರ್ಲಕ್ಷ್ಯ ಮಾಡಿದೆ ಅಂತ ಪಶ್ಚಾತ್ತಾಪ ಪಡುವ ದಿನಗಳು ಬರುತ್ತದೆ, ವೀರ ಸಾವರ್ಕರ್ ಬಗ್ಗೆ ತಪ್ಪು ಮಾತಾಡಿದೆ ಅಂತ ಪಶ್ಚಾತ್ತಾಪ ಪಡುವ ದಿನ ಬರುತ್ತದೆʼʼ ಎಂದು ಕುಡಚಿ ರಾಜೀವ್ ಹೇಳಿದ್ದಾರೆ.
ʻʻಪಶ್ಚಾತ್ತಾಪಕ್ಕಿಂತ ಮಿಗಿಲಾದ ಪ್ರಾಯಶ್ಚಿತ್ತ ಇಲ್ಲ. ಸಿದ್ದರಾಮಯ್ಯ ಧರ್ಮಕ್ಕೆ ಕೈಹಾಕಿ ತಪ್ಪನ್ನು ಮಾಡಿರುವ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯರಿಗೆ ಜ್ಞಾನೋದಯ ಆಗಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆʼʼ ಎಂದಿದ್ದಾರೆ ರಾಜೀವ್.
ʻʻಸಿದ್ದರಾಮಯ್ಯ ಚುನಾವಣೆಯನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳುತ್ತಾರೆ. ಬಡವರ ಸಮಸ್ಯೆ, ರಾಜ್ಯದ ಸಮಸ್ಯೆ ಅವರ ಕಣ್ಣಿಗೆ ಕಾಣಲ್ಲ. ಅವರ ಕಣ್ಣಿಗೆ ಕಾಣುವುದು ಕೇವಲ ವಿಧಾನಸೌಧದ ಮೂರನೇ ಮಹಡಿ ಮಾತ್ರʼʼ ಎಂದಿದ್ದಾರೆ ಶಾಸಕ ರಾಜೀವ್. ʻʻಸಿದ್ದರಾಮಯ್ಯ ರಾಜಕೀಯಕ್ಕಾಗಿ ಇಂಥ ಗಿಮಿಕ್ ಮಾಡುತ್ತಿರುತ್ತಾರೆ. ರಾಜ್ಯದ ಜನತೆಗೆ ಇದು ಅರ್ಥವಾಗಿದೆʼʼ ಎಂದು ರಾಜೀವ್ ಹೇಳಿದ್ದಾರೆ.
ಇದನ್ನೂ ಓದಿ| ಧರ್ಮ ಒಡೆಯುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಪಶ್ಚಾತ್ತಾಪ: ಜತೆಗಿದ್ದವರು ದಾರಿ ತಪ್ಪಿಸಿದರು ಎಂದ ಮಾಜಿ ಸಿಎಂ?