Site icon Vistara News

Siddheshwar swamiji | 19ನೇ ವಯಸ್ಸಿಗೇ ಮೊದಲ ಪುಸ್ತಕ ಪ್ರಕಟ: ಸಿದ್ಧಾಂತ ಶಿಖಾಮಣಿ ಎಂಬ ಗುರುಪ್ರವಚನದ ಮಹಾ ಸಂಪುಟ

siddheshwara swamiji

ವಿಜಯಪುರ: ಶ್ರೀ ಜ್ಞಾನಯೋಗಾಶ್ರಮದ ಮಹಾಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ೧೯ನೇ ವಯಸ್ಸಿನಲ್ಲೇ ಅದ್ಭುತವಾದ ಪುಸ್ತಕವೊಂದನ್ನು ಪ್ರಕಟಿಸಿದ್ದರು. ಆದರೆ, ಅವರು ಅದನ್ನು ತಮ್ಮ ಹೆಸರಿನಲ್ಲಿ ಪ್ರಕಟಿಸಲಿಲ್ಲ. ಬದಲಾಗಿ ತಮ್ಮ ಗುರುಗಳ ಹೆಸರಿನಲ್ಲಿ ಪ್ರಕಟಿಸಿದರು. ಅಷ್ಟು ಹೊತ್ತಿಗೇ ಅವರಿಗೆ ತಾನಲ್ಲ, ತನದಲ್ಲ ಎಂಬ ಅದ್ಭುತ ಪರಿಕಲ್ಪನೆ ಮನದಟ್ಟಾಯಿತು. ಆವತ್ತು ಅವರು ಪ್ರಕಟಿಸಿದ ಪುಸ್ತಕದ ಹೆಸರು ಸಿದ್ಧಾಂತ ಶಿಖಾಮಣಿ. ಇದು ಅವರ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳ ಪ್ರವಚನಗಳ ಸಂಗ್ರಹ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ಓದಿದ ಸಿದ್ದಗೊಂಡಪ್ಪ ಎಂಬ ಬಾಲಕ ಆಗಲೇ ಮಲ್ಲಿಕಾರ್ಜುನ ಸ್ವಾಮಿಗಳ ಗಮನ ಸೆಳೆದಿದ್ದರು. ಮಲ್ಲಿಕಾರ್ಜುನ ಸ್ವಾಮಿಗಳು ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಈ ಬಾಲಕನನ್ನು ಕರೆದೊಯ್ಯ ತೊಡಗಿದರು. ಹೀಗೆ ಅವರ ಅಧ್ಯಾತ್ಮ ಶಕ್ತಿ ನಿಧಾನಕ್ಕೆ ಪ್ರಜ್ವಲಿಸತೊಡಗಿತ್ತು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು ಮಲ್ಲಿಕಾರ್ಜುನ ಶ್ರೀಗಳು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು.

ಎಂ.ಎ. ಪದವಿಯ ಅಭ್ಯಾಸದ ಸಮಯದಲ್ಲಿ ಶ್ರೀ ಸಿದ್ಧೇಶ್ವರರರು ಕೊಲ್ಹಾಪುರದಲ್ಲಿ ವಿಜಯ ಪಾಟೀಲರ ಮನೆಯಲ್ಲಿ ವಾಸವಿದ್ದರು. ಆ ಅವಧಿಯಲ್ಲಿಯೇ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ ʻಸಿದ್ದಾಂತ ಶಿಖಾಮಣಿʼ ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು. ಆಗ ಅವರಿಗೆ ಕೇವಲ 19 ವರ್ಷ.

ಸಿದ್ದೇಶ್ವರರ ಮಾತು ಎಂದರೆ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಬಲು ಪ್ರೀತಿ. ಆತ ಮಹಾ ಬುದ್ಧಿವಂತ, ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಪರಿಜ್ಞಾನವಿದೆ. ಮುಂದೆ ಜಗತ್ತಿಗೇ ದೊಡ್ಡವನಾಗುತ್ತಾನೆ ಎಂದು ವಿಶ್ವಾಸದಿಂದ ಎಲ್ಲರೆದುರು ಹೇಳುತ್ತಿದ್ದರು.

ಸ್ನಾತಕೋತ್ತರ ಪದವಿ ಪಡೆದು ವಿಜಯಪುರಕ್ಕೆ ಹಿಂದಿರುಗಿದ ನಂತರ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ, ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ವ್ಯಾಖ್ಯಾನವನ್ನು ನೀಡಿ ಅವರ ಜ್ಞಾನ ದಿಗಂತವನ್ನು ವಿಸೃತಗೊಳಿಸಿದರು. ಪೂಜ್ಯರು ಉಪನಿಷತ್ತುಗಳು, ಭಗವದ್ಗೀತೆ, ಯೋಗಸೂತ್ರ, ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಹೇಗೆ ಗುರು ಮುಖೇನ ಕಲಿತ ಜ್ಙಾನವನ್ನು ಬಳಸಿಕೊಂಡು ಬೋದಪ್ರದ ಪ್ರವಚನಗಳನ್ನು ನೀಡುತ್ತಿದ್ದರು. ಗಹನ ವೇದಾಂತಗಳನ್ನು ಜನ ಸಾಮಾನ್ಯರಿಗೆ ಅರ್ಥವಾಗುವ ಹಾಗೆ ಹೇಳಿಕೊಟ್ಟ ಅವರು ಜಗತ್ತಿಗೆ ದೊಡ್ಡ ಸಂದೇಶವನ್ನು ಬಿಟ್ಟು ಹೋಗಿದ್ದಾರೆ.

ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಶ್ರೀಗಳ ಜತೆಗಿನ ಒಡನಾಟ ನನ್ನ ಜೀವನದ ಅಮೃತ ಗಳಿಗೆ ಎಂದ ಸಿಎಂ ಬೊಮ್ಮಾಯಿ

Exit mobile version