Site icon Vistara News

ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ಮುಂದುವರಿಕೆ: ಬೆಂಗಳೂರಲ್ಲೇ ಎಂದ ಪುತ್ರ

siddramaiah new constituency

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಾಯಕರು ನವದೆಹಲಿಯಲ್ಲಿ ಬೀಡುಬಿಟ್ಟು ಎರಡು ದಿನದಿಂದ 2023ರ ವಿಧಾನಸಭೆ ಚುನಾವಣೆಗೆ ಸಿದ್ಧಪಡಿಸಲು ಸಭೆ ನಡೆಸುತ್ತಿದ್ದಾರೆ. ರಾಹುಲ್‌ ಗಾಂಧಿ ಅವರ ಜತೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕೆ.ಸಿ. ವೇಣುಗೋಪಾಲ್‌, ರಣದೀಪ್‌ಸಿಂಗ್‌ ಸುರ್ಜೇವಾಲ ಕಾರ್ಯತಂತ್ರ ಹೆಣೆಯುತ್ತಿರುವಾಗಲೆ, ಸಿದ್ದರಾಮಯ್ಯ ಅವರ ಕ್ಷೇತ್ರದ ಕುರಿತು ಚರ್ಚೆ ಇನ್ನೂ ನಡೆದೇ ಇದೆ.

2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಸಿದ್ದರಾಮಯ್ಯ ನಿರೀಕ್ಷಿಸಿದ್ದಂತೆಯೇ ಚಾಮುಂಡೇಶ್ವರಿಯಲ್ಲಿ ಅತ್ಯಂತ ಹೆಚ್ಚು ಅಂತರದಿಂದ, ಜೆಡಿಎಸ್‌ನ ಜಿ.ಟಿ. ದೇವೇಗೌಡರ ಎದುರು ಸೋತರು. ಬಾದಾಮಿಯಲ್ಲಿ ಜಯಿಸಿದರಾದರೂ ಬಿಜೆಪಿಯ ಶ್ರೀರಾಮುಲು ಅವರ ವಿರುದ್ಧ ಅಲ್ಪ ಮತದ ಮುನ್ನಡೆಯನ್ನಷ್ಟೆ ಪಡೆದು ನಿಟ್ಟುಸಿರು ಬಿಟ್ಟರು.

ಇದೀಗ 2023ರ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿವೆ. ಇದು ತಮ್ಮ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಈಗಾಗಲೆ ಘೋಷಿಸಿದ್ದಾರೆ. ಈ ಬಾರಿಯೂ ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧೀಸುತ್ತಾರೆ ಎನ್ನಲಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಅವರು ಪದೇಪದೆ ಸ್ಪರ್ಧಿಸಿದರೆ ತಮ್ಮ ಭವಿಷ್ಯದ ಕತೆ ಏನು ಎನ್ನುವ ಚಿಂತನೆ ಸ್ಥಳೀಯ ಕಾಂಗ್ರೆಸಿಗರದ್ದು. ನೇರವಾಗಿ ಸಿದ್ದರಾಮಯ್ಯ ಅವರ ಬಳಿ ಇದನ್ನು ಹೇಳಲು ಸಾಧ್ಯವಾಗದಿದ್ದರೂ ಪರೋಕ್ಷವಾಗಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರಿಗೂ ಈ ವಿಚಾರ ತಿಳಿದಿದ್ದು, ಬೇರೆ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ.

ಕರ್ನಾಟಕದಾದ್ಯಂತ ಕ್ಷೇತ್ರಗಳು

ಬಾದಾಮಿಯನ್ನು ತೊರೆದ ನಂತರ ಉತ್ತರ ಕರ್ನಾಟಕದಲ್ಲೆ ಯಾವುದಾರೂ ಒಂದು ಕ್ಷೇತ್ರವನ್ನು ಸಿದ್ದರಾಮಯ್ಯ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಜತೆಗೆ ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳ ಹೆಸರೂ ಓಡಾಡುತ್ತಿವೆ. ಕುರುಬ ಸಮುದಾಯ ಹೆಚ್ಚಿರುವ ಕೊಪ್ಪಳದ ಜತೆಗೆ, ಇತ್ತೀಚೆಗಷ್ಟೆ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಮತ ಚಲಾಯಿಸಿದ ಶ್ರೀನಿವಾಸಗೌಡ ಪ್ರತಿನಿಧಿಸುವ ಕೋಲಾರ, ತಮ್ಮ ಆತ್ಮೀಯ ಮಂಜುನಾಥ್‌ ಪ್ರತಿನಿಧಿಸುತ್ತಿರುವ ಹುಣಸೂರು ಆಯ್ಕೆ ಆಗಬಹುದು ಎನ್ನಲಾಗುತ್ತಿದೆ.

ಇದೆಲ್ಲದರ ಜತೆಗೆ ಈಗ ಸವದತ್ತಿ ಕ್ಷೇತ್ರದ ಹೆಸರೂ ಕೇಳಿಬರುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿರುವ ಸವದತ್ತಿ ವಿಧಾನಸಭೆ ಕ್ಷೇತ್ರವು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನಿಯಂತ್ರಣದಲ್ಲಿದೆ ಎನ್ನಲಾಗುತ್ತದೆ. ರಾಜಕೀಯ ಗುರು ಸಿದ್ದರಾಮಯ್ಯ ಅವರಿಗೆ ಕ್ಷೇತ್ರವನ್ನು ಸತೀಶ್‌ ಸಜ್ಜುಗೊಳಿಸುತ್ತಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಲೋಕಸಭೆ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ಸಿಗೆ ಹೆಚ್ಚಿನ ಲೀಡ್ ಕೊಟ್ಟಿದ್ದ ಕ್ಷೇತ್ರವಾಗಿದ್ದು, ಮುಂದಿನ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಈ ತಂತ್ರ ಉಪಕಾರಿ ಎಂಬ ಅಭಿಪ್ರಾಯವೂ ಇದೆ. ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಸವದತ್ತಿಯ ಹಾಲಿ ಶಾಸಕರಾಗಿದ್ದು, ಸಿದ್ದರಾಮಯ್ಯ ಎದುರಲ್ಲಿ ಆನಂದ ಮಾಮನಿ ಜಯಿಸಲು ಸಾಧ್ಯವಿಲ್ಲ ಎಂಬುದು ಕೈ ನಾಯಕರ ಪ್ಲ್ಯಾನ್.

ಬೆಂಗಳೂರಲ್ಲೆ ಸ್ಪರ್ಧೆ ಎಂದ ಪುತ್ರ

ರಾಜ್ಯದ ವಿವಿಧ ಕ್ಷೇತ್ರಗಳ ಹೆಸರು ಚಾಲ್ತಿಯಲ್ಲಿರುವಾಗಲೆ, ಸಿದ್ದರಾಮಯ್ಯ ಬೆಂಗಳೂರಿನಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಪುತ್ರ ಹಾಗೂ ವರುಣ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ಈದು ತಮ್ಮ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಾದಾಮಿ ಕ್ಷೇತ್ರವನ್ನು ಆಯ್ದುಕೊಂಡರೆ ಪ್ರತಿ ಬಾರಿ ಪ್ರವಾಸ ಮಾಡುವುದು ವಯಸ್ಸಿನ ಕಾರಣಕ್ಕೆ ಕಷ್ಟವಾಗುತ್ತದೆ. ಹೀಗಾಗಿ ಬೆಂಗಳೂರು ಸುತ್ತಮುತ್ತಲಿನ ಕ್ಷೇತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವ ಚಿಂತನೆ ನಡೆದಿದೆ. ಆದರೆ ಕ್ಷೇತ್ರ ಯಾವುದೆಂದು ಇನ್ನೂ ಅಂತಿಮವಾಗಿಲ್ಲ. ತಂದೆಯವರು ಕೇಳಿದರೆ ವರುಣಾ ಕ್ಷೇತ್ರವನ್ನೇ ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

ಚುನಾವಣೆ ಹತ್ತಿರವಾದಂತೆ ಸಿದ್ದರಾಮಯ್ಯ ಕ್ಷೇತ್ರದ ಆಯ್ಕೆ ಚರ್ಚೆಯೂ ನಡೆಯುತ್ತಿದ್ದು, ಕೆಲ ಸಮಯದಲ್ಲೆ ಅಂತಿಮವಾಗುವ ಸಾಧ್ಯತೆಯಿದೆ. ಇದರ ಜತೆಗೆ, ಈಗಾಗಲೆ ರಾಜ್ಯದ ಪ್ರಮುಖ ರಾಜಕಾರಣಿಗಳಾದ ಎಚ್‌.ಡಿ. ದೇವೇಗೌಡರು, ಬಿ.ಎಸ್‌. ಯಡಿಯೂರಪ್ಪ ಸೇರಿ ಎಲ್ಲರಿಗೂ ಭದ್ರವಾದ ತಮ್ಮದೇ ಎಂದು ಹೇಳಿಕೊಳ್ಳುವಂತಹ ಕ್ಷೇತ್ರವಿದೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಈ ರೀತಿ ಕ್ಷೇತ್ರದ ವಿಚಾರದಲ್ಲಿ ಅತಂತ್ರರಾಗಿದ್ದು ಏಕೆ ಎಂಬ ಪ್ರಶ್ನೆಯೂ ರಾಜಕೀಯ ವಲಯುದಲ್ಲಿದೆ.

ಇದನ್ನೂ ಓದಿ | ಬೀದಿಯಲ್ಲಿ ಬಿದ್ದವರನ್ನು ಬಾದಾಮಿಗೆ ತಂದವರಾರು?: ಸಿದ್ದರಾಮಯ್ಯ ಕುರಿತು ಸಿ.ಎಂ. ಇಬ್ರಾಹಿಂ ಪ್ರಶ್ನೆ

Exit mobile version