Site icon Vistara News

ಜೀವನಾಂಶ ಕೇಳಿದ್ದಕ್ಕೆ ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಜೀವವನ್ನೇ ತೆಗೆದ ಪಾಪಿ!

ಹಾಸನ: ಸಂಸಾರ ಬೇಡವಾಗಿ ವಿಚ್ಛೇದನಕ್ಕೆ ಕೋರ್ಟ್‌ ಮೆಟ್ಟಿಲೇರಿದ್ದ ಪತ್ನಿಯು ಜೀವನಾಂಶ ಕೇಳಿದಳು ಎಂಬ ಕಾರಣಕ್ಕೆ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಹೊಳೆನರಸೀಪುರ ಎರಡನೇ ಜೆಎಂಎಫ್‌ಸಿ ಕೋರ್ಟ್ ಆವರಣದಲ್ಲಿ ನಡೆದಿದೆ.

ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್‌ ಕೊಲೆ ಮಾಡಿದ ಆರೋಪಿಯಾಗಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಶನಿವಾರ ನ್ಯಾಯಾಲಯಕ್ಕೆ ಬಂದಿದ್ದ ಪತ್ನಿ ಚೈತ್ರಾಳನ್ನು ಕಾದು ಕುತ್ತಿಗೆಗೆ ಚಾಕು ಇರಿದಿದ್ದಾನೆ. ಸಾವು-ಬದುಕಿನ ಹೋರಾಟ ನಡೆಸುತ್ತಿದ್ದ ಚೈತ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಏನಿದು ಪ್ರಕರಣ?

ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್‌ ಮತ್ತು ಚೈತ್ರ ದಂಪತಿ ವಿವಾಹ ವಿಚ್ಛೇದನ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು. ಈ ವೇಳೆ ಚೈತ್ರ ತನಗೆ ಪತಿ ಶಿವಕುಮಾರ್‌ ಜೀವನಾಂಶ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಶಿವಕುಮಾರ್‌ ಶನಿವಾರ ಹೊಳೆನರಸೀಪುರ ಕೋರ್ಟ್‌ನ ಶೌಚಾಲಯದ ಬಳಿ ಕಾದು ಕುಳಿತಿದ್ದಾನೆ. ಅಲ್ಲಿಗೆ ಪತ್ನಿ ಚೈತ್ರಾ ಬರುತ್ತಿದ್ದಾಗ, ಏಕಾಏಕಿ ದಾಳಿ ನಡೆಸಿ ಅವರ ಕತ್ತು ಕೊಯ್ದಿದ್ದಾನೆ.

ಇದನ್ನೂ ಓದಿ | ಕುಟುಂಬ ಕಲಹ 11 ಮಂದಿಯ ಕೊಲೆಯಲ್ಲಿ ಅಂತ್ಯ

ಗಂಭೀರವಾಗಿ ಗಾಯಗೊಂಡಿದ್ದ ಚೈತ್ರಾ ಅವರನ್ನು ಕೂಡಲೇ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಹೊಳೆನರಸೀಪುರದಿಂದ ಹಾಸನದ ಹಿಮ್ಸ್‌ಗೆ ಶಿಫ್ಟ್ ಮಾಡಲಾಗಿತ್ತು. ಈಗ ನಗರದ ಹಿಮ್ಸ್‌ ಆಸ್ಪ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ದಂಪತಿ ಕಳೆದ ಎರಡು ವರ್ಷದಿಂದ ಡಿವೋರ್ಸ್‌ಗಾಗಿ ನ್ಯಾಯಾಲಯಕ್ಕೆ ಓಡಾಡುತ್ತಿದ್ದರು ಎನ್ನಲಾಗಿದೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bengaluru Crime | ವಿದ್ಯಾರ್ಥಿಯ ಕೊಲೆಯಲ್ಲಿ ಅಂತ್ಯವಾದ ಜಗಳ!

Exit mobile version