ಲಂಡನ್: ಗಾಯಕ ವಿಜಯ್ ಪ್ರಕಾಶ್ ಅವರು ಹಾಡಲು ನಿಂತರೆ ಕರ್ನಾಟಕ ಮಾತ್ರವಲ್ಲ ಇಡೀ ದೇಶವೇ ಕಿವಿಯಾಗುತ್ತದೆ. ಅಷ್ಟರಮಟ್ಟಿಗೆ ಅವರ ಕಂಠ ಸಿರಿಯು ದೇಶಾದ್ಯಂತ ಪಸರಿಸಿದೆ. ಇಷ್ಟು ಖ್ಯಾತಿ ಗಳಿಸಿರುವ ಗಾಯಕ ವಿಜಯ್ ಪ್ರಕಾಶ್ ಅವರು ಲಂಡನ್‌ನಲ್ಲಿರುವ ಬಸವಣ್ಣನ ಪ್ರತಿಮೆಗೆ ಗಾನ ನಮನ ಸಲ್ಲಿಸಿದ್ದಾರೆ. ಕಲಬೇಡ, ಕೊಲಬೇಡ, ಹುಸಿಯ ನುಡಿಯಬೇಡ… ಎಂಬ ಬಸವಣ್ಣನವರ ವಚನವನ್ನು ರಾಗಬದ್ಧವಾಗಿ ಹಾಡಿದ್ದಾರೆ.
ಬಸವ ಸಮಿತಿ ಯುಕೆ ಹಾಗೂ ದಿ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಅನಿವಾಸಿ ಭಾರತೀಯರು ಹಾಗೂ ಕನ್ನಡಿಗರ ಸಮ್ಮುಖದಲ್ಲಿ ಬಸವಣ್ಣನವರ ವಚನ ಹಾಡುವ ಮೂಲಕ ಅವರಿಗೆ ನಮನ ಸಲ್ಲಿಸಿದರು. ಥೇಮ್ಸ್ ನದಿ ತೀರದಲ್ಲಿ ೨೦೧೫ರಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಗಾಯನ ನಮನ ಸಲ್ಲಿಸಿದ ಬಳಿಕ ಮಾತನಾಡಿದ ವಿಜಯ್ ಪ್ರಕಾಶ್, “ಬ್ರಿಟಿಷ್ ಸಂಸತ್ತಿನ ಎದುರು ಬಸವೇಶ್ವರರ ಮೂರ್ತಿ ಪ್ರತಿಷ್ಠಾಪಿಸಿರುವುದು ಸಂತಸ ತಂದಿದೆ. ಅಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಲಂಡನ್‌ನಲ್ಲಿ ನೋಡುವುದೇ ಖುಷಿ ಎನಿಸುತ್ತದೆ. ಕನ್ನಡದ ಸಂಸ್ಕೃತಿ, ಆಚಾರ-ವಿಚಾರಗಳನ್ನು ವಿದೇಶದಲ್ಲಿಯೂ ಪಸರಿಸುತ್ತಿರುವ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್‌ಗೆ ಧನ್ಯವಾದ” ಎಂದರು.
ಕಾರ್ಯಕ್ರಮದಲ್ಲಿ ಕನ್ನಡಿಗರಾದ ಅಭಿಜಿತ್ ಸಾಲಿಮಠ, ಮಿರ್ಜಿ ರಂಗನಾಥ್, ಕಂಠಿ ಪಟೇಲ್, ರಾಜೀವ್ ಮೇತ್ರಿ, ಗಣಪತಿ ಭಟ್, ಡಾ.ಮಧುಸೂದನ್ ಸೇರಿ ಹಲವರು ಉಪಸ್ಥಿತರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೇ ೨೦೧೫ರಲ್ಲಿ ಬಸವೇಶ್ವರರ ಮೂರ್ತಿ ಅನಾವರಣಗೊಳಿಸಿದ್ದರು.
ಇದನ್ನೂ ಓದಿ | ಬಸವಣ್ಣನ ನಾಡಿನಲ್ಲಿ ಜಾತಿ ರಾಜಕಾರಣ ಸಲ್ಲ; ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ