ಶಿರಸಿ: ಕಳೆದ 25 ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿರುವ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಒಂದು ಮಟ್ಟಿನ ಜಿದ್ದಾಜಿದ್ದಿ ಹೋರಾಟ ನಡೆದಿತ್ತು. ಇದೀಗ ಕ್ಷೇತ್ರದ ಫಲಿತಾಂಶ (Sirsi Election Results) ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷದ ಭೀಮಣ್ಣ ನಾಯ್ಕ ಅವರು ಜಯಗಳಿಸಿದ್ದಾರೆ. ಈ ಮೂಲಕ ಇಷ್ಟು ವರ್ಷದ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಂತೆ ಆಗಿದೆ. 5800 ಮತಗಳ ಅಂತರದಿಂದ ಭೀಮಣ್ಣ ಜಯದ ನಗೆ ಬೀರಿದ್ದಾರೆ.
ಮುಗ್ಗರಿಸಿದ ಕಾಗೇರಿ
ಹವ್ಯಕ ಬ್ರಾಹ್ಮಣ ಹಾಗೂ ನಾಮಧಾರಿಗಳ ಮತಗಳು ಇಲ್ಲಿ ನಿರ್ಣಾಯಕರಾಗಿದ್ದು, ಸ್ವಜಾತಿಯ ಹವ್ಯಕರು ಮತ್ತು ಬಿಜೆಪಿ ಅಭಿಮಾನಿ ನಾಮಧಾರಿಗಳು ವಿಶ್ವೇಶ್ವರ ಹೆಗಡೆ ಕಾಗೇರಿಯ ಬೆಂಬಲಕ್ಕೆ ನಿಂತಿದ್ದರು. ಇದು ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದೇ ಕಾಗೇರಿ ಭಾವಿಸಿದ್ದರು. ಕಳೆದ ಚುನಾವಣೆಯಲ್ಲಿ ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತಾ ಸಾವು ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿತ್ತು. ಇದರಿಂದ ಇಡೀ ಶಿರಸಿ ನಗರ ಹೊತ್ತಿ ಉರಿದಿತ್ತು. ಆಗ ನಡೆದ ಚುನಾವಣೆಯಲ್ಲಿ ಕಾಗೇರಿ ನಿರಾಯಾಸವಾಗಿ ಗೆಲವು ಸಾಧಿಸಿದ್ದರು. ಆದರೆ, ಈ ಬಾರಿ ಸಿದ್ದಾಪುರ ಭಾಗದಲ್ಲಿ ಸ್ವಪಕ್ಷದವರೇ ಕಾಗೇರಿ ವಿರುದ್ಧ ತಿರುಗಿ ಬಿದ್ದಿದ್ದರು. ʻಬಿಜೆಪಿ ಬೇಕು, ಕಾಗೇರಿ ಬೇಡʼ ಎಂಬ ಕೂಗು ಕೇಳಿಬಂದಿತ್ತು. ಈ ಎಲ್ಲ ಸಂಗತಿಗಳೂ ಸಹ ಕಾಗೇರಿ ಅವರ ಸೋಲಿಗೆ ಕಾರಣವಾಗಿದೆ.
ಭೀಮಣ್ಣ ನಾಯ್ಕ ಭರ್ಜರಿ ಜಯಭೇರಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 17 ಸಾವಿರ ಮತಗಳ ಅಂತರದಿಂದ ಸೋತಿದ್ದ ಭೀಮಣ್ಣ ನಾಯ್ಕ ಈ ಬಾರಿ ತಮ್ಮ ಸೇಡನ್ನು ತೀರಿಸಿಕೊಂಡಿದ್ದಾರೆ. ಬಿಜೆಪಿ ವಿರುದ್ಧದ ಆಡಳಿತ ಅಲೆಯನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಾಮಧಾರಿ ನಾಯ್ಕ ಸಮುದಾಯದ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಂಡಿದ್ದರಲ್ಲದೆ, ಈ ಬಾರಿ ಬ್ರಾಹ್ಮಣರೂ ಸಹ ಇವರ ಕಡೆ ತಿರುಗಿದ್ದು, ಪ್ಲಸ್ ಆಗಿದೆ.
ಪೈಪೋಟಿ ನೀಡಿದ ಉಪೇಂದ್ರ ಪೈ
ಕ್ಷೇತ್ರದಲ್ಲಿ ಜೆಡಿಎಸ್ ಪರ ತಕ್ಕ ಮಟ್ಟಿನ ಒಲವು ಈ ಹಿಂದಿನಿಂದಲೂ ಇದೆ. ಅಲ್ಲದೆ, ಈ ಬಾರಿಯ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಸಹ ಸಾಕಷ್ಟು ಪ್ರಚಾರವನ್ನು ಮಾಡಿದ್ದರು. ಅಲ್ಲದೆ, ಕ್ಷೇತ್ರದಲ್ಲಿ ಒಂದು ವರ್ಗದ ಜನರು ಇವರ ಪರವಾಗಿ ಒಲವು ತೋರಿದರೂ ಪ್ರಯೋಜನ ಕಾಣಲಿಲ್ಲ.
ಕ್ಷೇತ್ರ ಪುನರ್ ವಿಂಗಡನೆಯ ನಂತರ ಬಿಜೆಪಿಯದ್ದೇ ಪಾರುಪತ್ಯ
2008ರ ಕ್ಷೇತ್ರ ಪುನರ್ ವಿಂಗಡನೆಯ ನಂತರ ಶಿರಸಿ, ಸಿದ್ದಾಪುರ ತಾಲೂಕುನ್ನೊಳಗೊಂಡ ಕ್ಷೇತ್ರದಿಂದ ನಿರಂತರ 3 ಬಾರಿ ಕಾಗೇರಿ ಆಯ್ಕೆಯಾಗಿದ್ದಾರೆ. 2013ರ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ ಕಡಿಮೆಯಾಗಿತ್ತು. ಆದರೆ, 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ಜಿಲ್ಲೆಯಲ್ಲಿ ನಡೆದ ಕೋಮು ಸಂಘರ್ಷದ ಕಾರಣದಿಂದ ಗೆಲುವಿನ ಅಂತರ ಹೆಚ್ಚಿತ್ತು. ಯಾವುದೇ ವಿವಾದಗಳಿಗೆ ಸಿಲುಕದೆ ಕ್ಲೀನ್ ಇಮೇಜ್ ಉಳಿಸಿಕೊಂಡಿರುವುದು, ಕ್ಷೇತ್ರದ ಸಾಮಾನ್ಯರ ಮದುವೆ, ಮುಂಜಿ ಸಮಾರಂಭಗಳಿಗೂ ತೆರಳಿ ಶುಭ ಕೋರುವುದು ಕಾಗೇರಿ ರಾಜಕಾರಣದ ವಿಶೇಷವಾಗಿದೆ. ಆದರೆ, ಈ ಬಾರಿ ಮಾತ್ರ ಇದ್ಯಾವುದೂ ಅವರ ಬೆಂಬಲಕ್ಕೆ ಬರಲಿಲ್ಲ.
ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ
ಕಳೆದ ಬಾರಿಯ ಫಲಿತಾಂಶ ಏನು?
ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ): 70,595 | ಭೀಮಣ್ಣ ನಾಯ್ಕ (ಕಾಂಗ್ರೆಸ್): 53,134 | ಗೆಲುವಿನ ಅಂತರ: 17,461
ಈ ಬಾರಿ ಚುನಾವಣಾ ಫಲಿತಾಂಶ ಇಂತಿದೆ
ಭೀಮಣ್ಣ ನಾಯ್ಕ (ಕಾಂಗ್ರೆಸ್) 76,887 | ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) 68,175 | ಗೆಲುವಿನ ಅಂತರ: 8,712
ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ