Site icon Vistara News

ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿದ್ದ ಆರು ಬಾಂಗ್ಲಾದೇಶ ಪ್ರಜೆಗಳಿಗೆ ಗೇಟ್‌ ಪಾಸ್‌, ರೈಲಿನಲ್ಲಿ ಗಡಿಗೆ ರವಾನೆ

ಬೆಂಗಳೂರು: ಇಲ್ಲಿನ ಮಾದನಾಯಕನ ಹಳ್ಳಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಆರು ಮಂದಿ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ಮರಳಿ ಬಾಂಗ್ಲಾಕ್ಕೆ ಕಳುಹಿಸಿದ್ದಾರೆ. ಮಾದನಾಯಕನಹಳ್ಳಿಯ ಲಕ್ಷ್ಮೀಪುರದಲ್ಲಿ ಅವರು ವಾಸಿಸುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅವರನ್ನು ಗಡಿಯಾಚೆ ಕಳುಹಿಸುವ ಕೆಲಸ ಮಾಡಿದ್ದಾರೆ.

ಈ ಆರೂ ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಶಮೀಮ್‌, ರಿಪ್ಪನ್‌, ಆಶಿಫ್‌, ಸೈಫುಲ್ಲಾ, ಜಮಾಲ್‌, ಶೋಯೆಭ್‌ ಶೇಖ್‌ ಎಂದು ಗುರುತಿಸಲಾಗಿದೆ. ಇವರು ಮಾದನಾಯಕನ ಹಳ್ಳಿಯಲ್ಲಿ ವಾಸವಾಗಿದ್ದು ಗುಜರಿ ಹೆಕ್ಕುವುದು, ಕೂಲಿ-ನಾಲಿ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ವಾಸವಾಗಿದ್ದು ಕೆಲವು ಅಕ್ರಮಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ ಎಲ್ಲರನ್ನೂ ಗುರುತಿಸುವ ಕೆಲಸ ನಡೆಯುತ್ತಿದೆ. ಆದರೆ, ಈಗ ಗುರುತಿಸಲಾಗಿರುವ ವ್ಯಕ್ತಿಗಳ ಮೇಲೆ ಯಾವುದೇ ಇತರ ಕ್ರಿಮಿನಲ್‌ ಆರೋಪಗಳು ಇಲ್ಲ. ಅಕ್ರಮವಾಗಿ ಗಡಿ ದಾಟಿ ಬಂದು ಇಲ್ಲಿ ವಾಸವಾಗಿದ್ದಾರೆ ಎಂಬ ಕೇಸನ್ನಷ್ಟೇ ದಾಖಲಿಸಲಾಗಿದೆ.

ಇವರ ಅಕ್ರಮ ವಾಸದ ಬಗ್ಗೆ ಮಾಹಿತಿ ಕಲೆಹಾಕಿದ್ದ ಮಾದನಾಯಕನಹಳ್ಳಿ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಇದೀಗ ಸೋಮವಾರ ರೈಲಿನಲ್ಲಿ ಅವರನ್ನು ಬಾಂಗ್ಲಾ ಗಡಿ ಭಾಗದವರೆಗೆ ಕರೆದೊಯ್ದು ಬಿಟ್ಟು ಬರಲಿದ್ದಾರೆ. ಸೋಮವಾರ ಮುಂಜಾನೆ ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣದಿಂದ ಆರು ಬಾಂಗ್ಲಾ ವಾಸಿಗಳನ್ನು ರೈಲು ಹತ್ತಿಸಲಾಗಿದೆ, ತುರಂತ್‌ ಎಕ್ಸ್‌ಪ್ರೆಸ್‌ ರೈಲಿನ ಮೂಲಕ ಅವರನ್ನು ಹೌರಾಗೆ ಕರೆದೊಯ್ಯಲಾಗುತ್ತದೆ. ಅಲ್ಲಿಂದ ಅವರನ್ನು ಹರಿದಾಸಪುರಕ್ಕೆ ಬಸ್‌ ಮೂಲಕ ಒಯ್ಯಲಾಗುತ್ತದೆ. ಅಲ್ಲಿಂದ ಬಾಂಗ್ಲಾ ದೇಶದ ಗಡಿ ಭಾಗದಲ್ಲಿರುವ ಪ್ರಾಧಿಕಾರಕ್ಕೆ ಅವರನ್ನು ಒಪ್ಪಿಸಲಾಗುತ್ತದೆ.

ಬಾಂಗ್ಲಾದೇಶಕ್ಕೆ ಹೊರಟಿರುವ ಆರು ಮಂದಿ ಮತ್ತು ಅವರನ್ನು ಕರೆದುಕೊಂಡು ಹೋಗಲು ಸಿದ್ಧವಾಗಿರುವ ಪೊಲೀಸರು

ಕಳೆದ ಬಾರಿಯೂ ಇದೇ ರೀತಿ ಕೆಲವು ಬಾಂಗ್ಲಾದೇಶಿ ಪ್ರಜೆಗಳನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಗಡಿ ಭಾಗಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿನ ಅಧಿಕಾರಿಗಳು ಇವರು ಬಾಂಗ್ಲಾದೇಶಿಯರು ಎಂದು ಹೇಳಲು ಏನು ದಾಖಲೆ ಇದೆ ಎಂದು ಪ್ರಶ್ನಿಸಿ ವಾಪಸ್‌ ಕಳುಹಿಸಿದ್ದರು. ಈ ಬಾರಿ ಆ ರೀತಿ ಆಗದಂತೆ ಅವರನ್ನು ಕುರಿತ ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ ಬಳಿಕ, ಗಡಿ ಭಾಗದ ಅಧಿಕಾರಿಗಳ ಜತೆ ಚರ್ಚೆ ಮಾಡಿದ ಬಳಿಕವಷ್ಟೇ ಕರೆದೊಯ್ಯಲಾಗುತ್ತಿದೆ ಎನ್ನಲಾಗಿದೆ.

Exit mobile version