Site icon Vistara News

Santro Ravi case | ಸ್ಯಾಂಟ್ರೋ ರವಿ ಪತ್ತೆಗಾಗಿ ಮೈಸೂರು, ಬೆಂಗಳೂರು ಪೊಲೀಸರಿಂದ 6 ತಂಡಗಳ ರಚನೆ, ಆದ್ರೂ ಸಿಕ್ತಿಲ್ಲ ಖದೀಮ!

santro ravi

ಬೆಂಗಳೂರು: ಕುಖ್ಯಾತ ಕ್ರಿಮಿನಲ್‌, ರಾಜಕಾರಣಿಗಳು, ಅಧಿಕಾರಿಗಳ ಆಪ್ತ ಸಖ ಸ್ಯಾಂಟ್ರೋ ರವಿ (Santro Ravi case) ವಿರುದ್ಧ ದಲಿತ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆ ಕೇಸು ದಾಖಲಿಸಿ ಮಂಗಳವಾರಕ್ಕೆ ಎಂಟು ದಿನಗಳಾಗಿವೆ. ಆದರೆ ಸ್ಯಾಂಟ್ರೋ ರವಿಯನ್ನು ಪತ್ತೆ ಹಚ್ಚಿ ಬಂಧಿಸಲು ಇನ್ನೂ ಸಾಧ್ಯವಾಗಿಲ್ಲ. ಕಳೆದ ಹಲವು ದಿನಗಳಿಂದ ಮೌನವಾಗಿದ್ದ ಪೊಲೀಸರು ಈಗ ಸಾಮಾಜಿಕವಾಗಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೂ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದಾರೆ. ಇದೀಗ ಸ್ಯಾಂಟ್ರೋ ರವಿ ಪತ್ತೆಯಾಗಿ ಪೊಲೀಸರು ಆರು ತಂಡಗಳನ್ನು ರಚಿಸಿದ್ದಾರೆ.

ಬೆಂಗಳೂರು ಮತ್ತು ಮೈಸೂರು ಪೊಲೀಸರು ಜಂಟಿಯಾಗಿ ಸ್ಯಾಂಟ್ರೋ ರವಿ ಪತ್ತೆಗೆ ಮುಂದಾಗಿದ್ದು, ಆರು ತಂಡಗಳನ್ನು ರಚಿಸಿಕೊಂಡು ಬೆಂಗಳೂರು ಹೊರವಲಯದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಬೆಂಗಳೂರು ಮತ್ತು ಮೈಸೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಸ್ಯಾಂಟ್ರೋ ರವಿ ಎರಡೂ ನಗರಗಳಲ್ಲಿ ಸಾಕಷ್ಟು ಖತರ್ನಾಕ್‌ ಕೃತ್ಯಗಳನ್ನು ನಡೆಸುತ್ತಿದ್ದ. ಇದನ್ನು ಹೊರತುಪಡಿಸಿದರೆ ಬೆಂಗಳೂರು ಹೊರವಲಯವೇ ಸದ್ಯ ಆತನ ದಂಧೆಯ ಪ್ರಮುಖ ಹಾಟ್ ಸ್ಪಾಟ್ ಎಂದು ಹೇಳಲಾಗಿದೆ. ಹೀಗಾಗಿ ಬೆಂಗಳೂರು ಇಲ್ಲವೇ ಬೆಂಗಳೂರು ಗ್ರಾಮಾಂತರದಲ್ಲಿ ಆತ ಅಡಗಿರುವ ಸಾಧ್ಯತೆ ಇದ್ದು, ಇದನ್ನು ಆಧರಿಸಿ ಅಲ್ಲಿ ಹುಡುಕಾಟ ನಡೆಯುತ್ತಿದೆ.

ಸ್ವಿಚ್‌ ಆಫ್‌ ಆಗಿದೆ ಮೊಬೈಲ್‌
ತನ್ನ ಮೇಲೆ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಸ್ಯಾಂಟ್ರೋ ರವಿ ತಲೆ ಮರೆಸಿಕೊಂಡಿದ್ದು, ಬಳಿಕ ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಆದರೂ ಆತ ತನ್ನ ವಕೀಲರ ಜತೆ ಸತತ ಸಂಪರ್ಕದಲ್ಲಿದ್ದಾನೆ ಎನ್ನಲಾಗಿದ್ದು, ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾನೆ.

ಪೊಲೀಸರು ಆತನ ಸಿಡಿಆರ್, ಲೊಕೇಷನ್ ಮತ್ತಿತರ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅವೆರಡೂ ಮೈಸೂರಿನಲ್ಲೇ ಇರುವಂತೆ ತೋರಿಸುತ್ತಿದೆ. ಸಿಮ್ ತೆಗೆದು ಕೇವಲ ಕಾಂಟ್ಯಾಕ್ಟರ್‌ ನಂಬರ್‌ಗಳನ್ನು ಮಾತ್ರ ಆತ ಈಗ ಬಳಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರು ಪೊಲೀಸರ ಸಹಕಾರ ಕೇಳಿದ ಮೈಸೂರು ಪೊಲೀಸರು
ಪ್ರಕರಣದ ಪ್ರಧಾನ ತನಿಖೆಯನ್ನು ಮೈಸೂರು ಪೊಲೀಸರು ನಡೆಸುತ್ತಿದ್ದಾರೆ. ಅವರು ಬೆಂಗಳೂರಿನ ಪೊಲೀಸರ ಸಹಾಯವನ್ನು ಕೋರಿದ್ದಾರೆ. ಮೈಸೂರು ಪೊಲೀಸರೊಂದಿಗೆ ಸಿಸಿಬಿಯ ಒಂದು ತಂಡ ಸ್ಯಾಂಟ್ರೋ ರವಿ ಪತ್ತೆ ಕಾರ್ಯದಲ್ಲಿ ಕೆಲಸ ಮಾಡುತ್ತಿದೆ.

ಕೆಲವು ಪೊಲೀಸರ ಮೇಲೂ ನಿಗಾ
ನಿಜವೆಂದರೆ, ಸ್ಯಾಂಟ್ರೋ ರವಿಗೆ ಹಲವು ಪೊಲೀಸರು ಹಾಗೂ ರಾಜಕಾರಣಿಗಳ ಮೇಲೆ ನೇರ ಸಂಪರ್ಕವಿದೆ. ಅವರು ಪೊಲೀಸ್‌ ಕಾರ್ಯಾಚರಣೆಯ ಮಾಹಿತಿಗಳನ್ನು ಸ್ಯಾಂಟ್ರೋ ರವಿಗೆ ನೀಡಿ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರ ಮೇಲೆಯೂ ನಿಗಾ ಇಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ | Santro Ravi case | ಹಣದ ತನಿಖೆ ಮಾಡಿಸಿ: ಸ್ಯಾಂಟ್ರೋ ರವಿ ವಿರುದ್ಧ ಪ್ರಧಾನಿ ಮೋದಿ ಅಮಿತ್‌ ಶಾಗೆ ಒಡನಾಡಿ ದೂರು

Exit mobile version