ಬೆಂಗಳೂರು: ತೀವ್ರ ಜ್ವರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೨೫ರಂದು ಆಸ್ಪತ್ರೆಗೆ ದಾಖಲಾಗಿದ್ದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರ ಆರೋಗ್ಯ ಸುಧಾರಿಸಿದ್ದು, ಲವಲವಿಕೆಯಿಂದ ಇದ್ದಾರೆ.
ಸೆ. ೨೪ರ ರಾತ್ರಿ ಅವರಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಮೊದಲು ವೈದೇಹಿ ಆಸ್ಪತ್ರೆಗೆ ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೂಡಲೇ ಕೋವಿಡ್ ಮತ್ತು ಇನ್ನಿತರ ಪರೀಕ್ಷೆ ಮಾಡಲಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದರು. ಆಸ್ಪತ್ರೆ ಸೇರಿದ್ದ ಎರಡೇ ದಿನದಲ್ಲಿ ಅವರು ಪೂರ್ತಿಯಾಗಿ ಚೇತರಿಸಿಕೊಂಡಿದ್ದರು. ಆದರೂ ಇನ್ನೂ ಒಂದೆರಡು ದಿನ ಆರೋಗ್ಯದ ಮೇಲೆ ನಿಗಾ ಇಡುವುದಕ್ಕೆ ಅವರನ್ನು ಅಲ್ಲೇ ಉಳಿಸಿಕೊಳ್ಳಲಾಗಿತ್ತು.
೯೦ ವರ್ಷದ ಮಾಜಿ ಕಾಂಗ್ರೆಸ್ ನಾಯಕ, ಹಾಲಿ ಬಿಜೆಪಿಯಲ್ಲಿರುವ ಎಸ್.ಎಂ. ಕೃಷ್ಣ ಅವರು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದು, ಯಾವುದೇ ದೊಡ್ಡ ಸಮಸ್ಯೆಗಳು ಎದುರಾಗಿಲ್ಲ. ಆಸ್ಪತ್ರೆಗೆ ಸೇರಿದ ಎರಡೇ ದಿನದಲ್ಲಿ ಅವರು ಎದ್ದು ಪತ್ರಿಕೆಗಳನ್ನು ಓದುತ್ತಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಅವರನ್ನು ಭೇಟಿ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದರು.