Site icon Vistara News

ಕೆಂಪೇಗೌಡರು ಯಾರೊಬ್ಬರ ಸ್ವತ್ತಲ್ಲ: ಮಾಜಿ ಸಿಎಂ ಎಸ್‌.ಎಂ. ಕೃಷ್ಣ

Kempegowda award

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರು ಯಾರೊಬ್ಬರ ಸ್ವತ್ತಲ್ಲ. ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿರುವಂತೆ ಕೆಂಪೇಗೌಡರು ಇಡೀ ಕರ್ನಾಟಕಕ್ಕೆ ಸೇರಿದವರು ಎಂದು ಮಾಜಿ ಸಿಎಂ ಎಸ್‌.ಎಂ. ಕೃಷ್ಣ ತಿಳಿಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ ೫೧೩ ನೇ ಜಯಂತಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಇದೇ ವರ್ಷದಿಂದ ಆರಂಭಿಸಿರುವ ಪ್ರಶಸ್ತಿಯನ್ನು ಎಸ್‌.ಎಂ. ಕೃಷ್ಣ, ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಹಾಗೂ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ ಪಡುಕೋಣೆ ಅವರಿಗೆ ಘೋಷಣೆ ಮಾಡಲಾಗಿತ್ತು. ಎಸ್‌.ಎಂ. ಕೃಷ್ಣ ಖುದ್ದು ಪ್ರಶಸ್ತಿ ಸ್ವೀಕರಿಸಿದರೆ, ನಾರಾಯಣಮೂರ್ತಿ ಪರವಾಗಿ ಸುಧಾ ಮೂರ್ತಿ ಹಾಗೂ ಪ್ರಕಾಶ್‌ ಪಡುಕೋಣೆ ಪರವಾಗಿ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಹಾಗೂ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿ ಕೋಚ್‌ ವಿಮಲ್‌ ಕುಮಾರ್‌ ಪ್ರಶಸ್ತಿ ಸ್ವೀಕರಿಸಿದರು.

ಕೆಂಪೇಗೌಡರು ಯಾರೊಬ್ಬರ ಸ್ವತ್ತಲ್ಲ. ಕೆಂಪೇಗೌಡರು ಇಡೀ ಸಮುದಾಯಕ್ಕೆ, ಕರ್ನಾಟಕಕ್ಕೆ ಸೇರಿದವರು. ಕೆಂಪೇಗೌಡರು ಕಟ್ಟಿದ ನಗರವನ್ನು ಬೆಳೆಸುವಲ್ಲಿ ಅನೇಕರ ಪಾತ್ರವಿದೆ. ಇಂದು ಭಾರತದ ಅಭಿವೃದ್ಧಿಯನ್ನು ಬೆಂಗಳೂರಿನ ಮೂಲಕ ನೋಡಲಾಗುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಹಾಗೂ ಹೈದರಾಬಾದ್‌ ನಡುವೆ ಪೈಪೋಟಿ ಇತ್ತು. ಈ ಪೈಪೋಟಿಯಿಂದ ನಮಗೆ ಉತ್ತಮ ಫಲಿತಾಂಶ ಸಿಕ್ಕಿತು. ಬೆಂಗಳೂರು ನಗರ ಸಿಲಿಕಾಣ್‌ ಹಬ್‌ ಆಗಿ ಬದಲಾಯಿತು. ಬೆಂಗಳೂರು ನಗರವನ್ನು ಸಿಲಿಕಾನ್‌ ಹಬ್‌ ಆಗಿ ಬದಲಾವಣೆ ಮಾಡುವಲ್ಲಿ ಎನ್‌.ಆರ್‌. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ಸಲಹೆ ಬಹುಮುಖ್ಯವಾಗಿದೆ ಎಂದು ಶ್ಲಾಘಿಸಿದರು.

ಬೆಂಗಳೂರು ರೀತಿಯಲ್ಲೆ ಹುಬ್ಬಳ್ಳಿ ಧಾರವಾಡ, ಕಲಬುರ್ಗಿ, ರಾಯಚೂರು, ಮೈಸೂರು ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ಕೆಲಸ ಆಗಲಿ. ಇದಕ್ಕೆ ಬೇಕಾದ ಬದ್ಧತೆ ಸಿಎಂ ಹಾಗೂ ಅವರ ಸಚಿವ ಸಂಪುಟ ಸದಸ್ಯರಲ್ಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಪ್ರಶಸ್ತಿಯ ಜತೆಗೆ ನೀಡಿರುವ 5 ಲಕ್ಷ ರೂ. ಮೊತ್ತವನ್ನು ನನ್ನ ವಿಧ್ಯಾಭ್ಯಾಸಕ್ಕೆ ಅಡಿಪಾಯ ಹಾಕಿದ್ದ ವಿವೇಕಾನಂದ ಆಶ್ರಮಕ್ಕೆ ಕಳಿಸಿಕೊಡುತ್ತೇನೆ ಎಂದು ಎಸ್‌.ಎಂ. ಕೃಷ್ಣ ಘೋಷಿಸಿದರು.

ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಎನ್‌.ಆರ್‌. ನಾರಾಯಣಮೂರ್ತಿ, ಕೆಂಪೇಗೌಡರ ಪ್ರಶಸ್ತಿ ನನಗೆ ಪ್ರಮುಖ ಹಾಗೂ ಇದರಿಂದ ಬಹಳ ಆನಂದವಾಗಿದೆ. ಈ ಪ್ರಶಸ್ತಿಯ ಮೌಲ್ಯವನ್ನು ಅಳೆಯುವುದು ಬಹಳ ಕಷ್ಟ. ಈ ಗೌರವಕ್ಕಾಗಿ ನಾನು ಕರ್ನಾಟಕದ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 3 ಲಕ್ಷ ಇನ್ಫೋಸಿಸ್ ಸಿಬ್ಬಂದಿ ಈ ಪ್ರಶ್ತಿಯನ್ನು ಸ್ವೀಕಾರ ಮಾಡುತ್ತಿದ್ದಾರೆ ಎಂದು ಧನ್ಯವಾದ ಸಮರ್ಪಿಸಿದರು.

ವಿಡಿಯೋ ಸಂದೇಶ ನೀಡಿದ ಪ್ರಕಾಶ್‌ ಪಡುಕೋಣೆ, ಕೆಂಪೇಗೌಡ ಪ್ರಶಸ್ತಿ ಪಡೆದಿರುವ ನನಗೆ ಬಹಳ ಸಂತೋಷವಾಗಿದೆ. ತಮ್ಮದೇ ಆದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎಸ್. ಎಂ. ಕೃಷ್ಣ, ನಾರಾಯಣ ಮೂರ್ತಿ ಅವರಿಗೂ ಪ್ರಶಸ್ತಿ ಸಿಕ್ಕಿರುವುದು ಇನ್ನೂ ಸಂತಸವಾಗಿದೆ. ಈ ಗೌರವಕ್ಕೆ ಆಯ್ಕೆ ಮಾಡಿದ ಸರ್ಕಾರಕ್ಕೆ ಧನ್ಯವಾದಗಳು ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಸಂಸ್ಥಾನದ ನಂಜಾವಧೂತ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಸಚಿವರಾದ ಡಾ. ಸಿ. ಎನ್. ಅಶ್ವತ್ಥ ನಾರಾಯಣ, ಆರ್. ಅಶೋಕ, ಕೆ. ಗೋಪಾಲಯ್ಯ, ವಿ. ಸುನಿಲ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಮುನಿರತ್ನ ಮತ್ತಿತರರು ಉಪಸ್ಥಿತರಿದ್ದರು.

Exit mobile version