ಆನೇಕಲ್: ಪುಡಿ ರೌಡಿಯೊಬ್ಬರ ಹವಾ ಮೆಂಟೇನ್ ಗೀಳಿಗೆ ಅಮಾಯಕ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಇನ್ನೂ ೨೫-೨೦ರ ಆಸುಪಾಸಿನಲ್ಲಿರುವ ಈ ದುಷ್ಟನ ದುಷ್ಕೃತ್ಯದಿಂದ, ಅಟ್ಟಹಾಸದಿಂದ ಇಡೀ ಕುಟುಂಬವೇ ಈಗ ಭಯದಿಂದ ನಡುಗುತ್ತಿದೆ. ಕ್ರಿಮಿನಲ್ ಕೃತ್ಯಗಳ ಹಿನ್ನೆಲೆ ಹೊಂದಿರುವ ಈತನನ್ನು ಇನ್ನು ಹೊರಗೆ ಬರಲಾಗದಂತೆ ಜೈಲಿಗೆ ಅಟ್ಟಿ ಎಂದು ಊರಿನ ನಾಗರಿಕರು ಒತ್ತಾಯಿಸುತ್ತಿದ್ದಾರೆ.
ಇಂಥಹುದೊಂದು ಭಯಾನಕ ಕೃತ್ಯ ನಡೆದಿರುವುದು ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ. ಪವನ್ ಎಂಬ ಪುಡಿ ರೌಡಿಯ ದುಷ್ಕೃತ್ಯಕ್ಕೆ ಸೀತಪ್ಪ ಎಂಬ ೬೮ ವರ್ಷದ ವ್ಯಕ್ತಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೇಮಂತ್ ಎಂಬ ಯುವಕನಿಗೆ ಧಮ್ಕಿ ಹಾಕಿದ್ದ ಪವನ್ ಇದನ್ನು ಪ್ರಶ್ನಿಸಿದ ಅವನ ಕುಟುಂಬದ ಮೇಲೇ ದಾಳಿ ಮಾಡಿದ್ದಾನೆ. ಈ ವೇಳೆ ಆ ಮನೆಯ ಸೀತಪ್ಪ ಮೃತಪಟ್ಟಿದ್ದಾರೆ.
ಏನಿದು ಪುಡಿ ರೌಡಿಯ ಹವಾ ಮೆಂಟೇನ್
ಸರ್ಜಾಪುರದಲ್ಲಿ ಪವನ್ ಎಂಬಾತನಿಗೆ ರೌಡಿಯಾಗುವ ಗೀಳು ಹುಟ್ಟಿತ್ತು. ಅವರಿವರಿಗೆ ಬೆದರಿಕೆ ಹಾಕುತ್ತಾ ತಾನೊಬ್ಬ ರೌಡಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ. ಈ ನಡುವೆ ಆತ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದಿದ್ದ. ಇದಕ್ಕಾಗಿ ಜೈಲು ಸೇರಿದ್ದ. ಜೈಲು ಸೇರಿದ್ದರಿಂದ ಆತನ ಹಾವಳಿ ತಪ್ಪಿತು ಎಂದು ಜನ ನೆಮ್ಮದಿಯಿಂದ ಇದ್ದರು. ಆದರೆ, ಕೆಲವೇ ಸಮಯದಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದ.
ಈಗಲಾದರೂ ಆತ ಸುಧಾರಿಸಿದ್ದಾನು ಎಂದು ಜನರು ಆಶಿಸಿದ್ದರು. ಅಥವಾ ಜೈಲಿಗೆ ಹೋಗಿದ್ದರಿಂದಲಾದರೂ ಆತನಿಗೆ ಬುದ್ಧಿ ಬಂದಿರಬಹುದು ಎಂದು ಭಾವಿಸಿದ್ದರು. ಆದರೆ, ಜೈಲಿನಿಂದ ಬಂದ ಬಳಿಕ ಆತನ ಅಟ್ಟಹಾಸ ಇನ್ನೂ ಜೋರಾಯಿತು. ಜೈಲಿಗೆ ಹೋಗಿದ್ದೇ ಅವನಿಗೆ ಒಂದು ಪ್ರಮಾಣಪತ್ರವಾಯಿತು. ನೋಡಿದ್ದೀಯಲ್ಲಾ.. ಒಬ್ಬನಿಗೆ ಇರಿದು ಜೈಲಿಗೆ ಹೋಗಿ ಬಂದಿದ್ದೇನೆ… ಹುಷಾರು ಎಂದು ಹೇಳಿಕೊಂಡೇ ರೋಲ್ ಕಾಲ್ ಶುರು ಮಾಡಿದ್ದ.
ಜೈಲಿನಿಂದ ಬಳಿಕವಂತೂ ಬಂದವನೇ ಏರಿಯಾದಲ್ಲಿ ನಂದೆ ಹವಾ ಇರಬೇಕು ಎಂದು ರೌಡಿಸಂನ್ನು ಜಾಸ್ತಿ ಮಾಡಿದ್ದ. ಸಿಕ್ಕ ಸಿಕ್ಕವರಿಗೆ ಹೊಡೆದು ಏರಿಯಾದಲ್ಲಿ ಡಾನ್ ಆಗಲು ಹೊರಟಿದ್ದ. ಆಗಸ್ಟ್ ೨೯ರಂದು ಪಕ್ಕದ ಮನೆ ಯುವಕ ಹೇಮಂತ್‌ನಿಗೆ ಥಳಿಸಿದ್ದ. ಕರೆದಾಗ ಬರಲಿಲ್ಲ ಎನ್ನುವುದೇ ಅವನ ಸಿಟ್ಟಿಗೆ ಕಾರಣ.
ʻʻನನ್ನ ಬಗ್ಗೆ ಗೊತ್ತು ತಾನೇ? ಈಗಾಗಲೇ ಒಬ್ಬನಿಗೆ ಚುಚ್ಚಿದ್ದೀನಿ. ನೀನು ನನ್ನ ಶಿಷ್ಯನಾಗಬೇಕು, ಇಲ್ಲದಿದ್ದರೆ ನಿನ್ನ ಕಥೆ ಗೊತ್ತಲ್ಲ.. ಕರೆದಾಗ ಬರಬೇಕು, ಕೇಳಿದ್ದು ಕೊಡಿಸಬೇಕು, ಹೇಳಿದ್ದು ಮಾಡಬೇಕುʼʼ ಎಂದು ಹೇಳಿದ್ದಲ್ಲದೆ, ಇಷ್ಟಿದ್ದರೂ ಯಾಕೆ ಬಂದಿಲ್ಲ ಎಂದು ಕೇಳಿ ಹಲ್ಲೆ ಮಾಡಿದ್ದ.
ಈ ಘಟನೆಯನ್ನು ಹೇಮಂತನ ಮನೆಯವರು ಪ್ರಶ್ನಿಸಿದ್ದರು. ಇವನನ್ನು ಕಂಟ್ರೋಲ್ ಮಾಡುವವರು ಯಾರೂ ಇಲ್ವಾ ಎಂದು ಕೇಳಿದ್ದರು. ರೊಚ್ಚಿಗೆದ್ದ ಪವನ್ ಇಡೀ ಕುಟುಂಬದ ಮೇಲೆ ದಾಳಿ ಮಾಡುವ ಧಮ್ಕಿ ಹಾಕಿದ್ದ. ಮಾತ್ರವಲ್ಲ ಆವತ್ತೇ ಸಂಜೆ ತಾನುಹೇಳಿದಂತೆಯೇ ಹೇಮಂತ್ ಕುಟುಂಬದ ಮೇಲೆ ದಾಳಿ ಮಾಡಿದ್ದ. ಆತನ ಜತೆಗೆ ಇನ್ನೂ ಕೆಲವು ಹುಡುಗರು ಇದ್ದರು.
ಕೇವಲ ಹಲ್ಲೆ ಮಾಡಿದ್ದಲ್ಲ, ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿತ್ತು. ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಕುಟುಂಬದ ಹಿರಿ ಜೀವ ಸೀತಪ್ಪನ ಸೊಂಟವನ್ನೇ ಮುರಿದಿದ್ದರು ಕಿರಾತಕರು. ಆಗ ಅಕ್ಕಪಕ್ಕದ ಮನೆಯವರು ನೆರವಿಗೆ ಧಾವಿಸಿ ಕುಟುಂಬವನ್ನು ರಕ್ಷಿಸಿದ್ದರು.
ಆಶ್ಚರ್ಯಕರ ಸಂಗತಿ ಎಂದರೆ, ಸರ್ಜಾಪುರ ಪೊಲೀಸ್ ಠಾಣೆ ಹಿಂಭಾಗದಲ್ಲೇ ಈ ಮನೆ ಇದೆ. ಪೊಲೀಸ್ ಠಾಣೆಯ ಕೂಗಳತೆಯನ್ನೇ ಘಟನೆ ನಡೆದರೂ ಯಾರೂ ರಕ್ಷಣೆಗೆ ಬಂದಿರಲಿಲ್ಲ. ದೂರು ನೀಡಿದಾಗ ನೆಪ ಮಾತ್ರಕ್ಕೆ ಪ್ರಕರಣ ದಾಖಲಿಸಿ ಸುಮ್ಮನಿದ್ದರು. ಈ ನಡುವೆ ಪವನ್ ಮತ್ತು ಗ್ಯಾಂಗ್‌ನ ಅಟ್ಟಹಾಸದಿಂದ ನಲುಗಿದ್ದ ಸೀತಪ್ಪ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ಸಾವಿನೊಂದಿಗೇ ಪ್ರಕರಣ ಮುಕ್ತಾಯವಾಗುವಂತೆ ಕಾಣುತ್ತಿಲ್ಲ. ಈ ರೌಡಿ ಮತ್ತೆ ಮನೆಗೆ ಬರಬಹುದು, ತಮ್ಮ ಮೇಲೆ ದಾಳಿ ಮಾಡಬಹುದು, ಕೊಲ್ಲಬಹುದು ಎಂಬ ಆತಂಕದಲ್ಲಿ ಕುಟುಂಬ ತತ್ತರಿಸುತ್ತಿದೆ. ನ್ಯಾಯ ಮತ್ತು ರಕ್ಷಣೆಗಾಗಿ ಮೃತ ಸೀತಪ್ಪನ ಕುಟುಂಬ ಮೊರೆ ಹೊಕ್ಕಿದೆ. ಸರ್ಜಾಪುರ ಪೊಲೀಸರು ಈಗಲಾದರೂ ನ್ಯಾಯ ಕೊಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.