ಮೈಸೂರು: ಹಾವುಗಳ ಜಗತ್ತು ಕೆಲವೊಮ್ಮೆ ನಿಗೂಢ (Snake News) ಅನಿಸುತ್ತದೆ, ಕೆಲವೊಮ್ಮೆ ಇವುಗಳು ಕೂಡಾ ಚಿಲ್ಲರೆಯಾಗಿ ವರ್ತಿಸುತ್ತವೆ ಅಂತ ಗೊತ್ತಾಗುತ್ತದೆ. ಇಲ್ಲಿ ಮೂರು ವಿಡಿಯೊಗಳಿವೆ. ಅದರಲ್ಲಿ ಮೂರು ಹಾವುಗಳ ವಿಚಿತ್ರ ನಡವಳಿಕೆಗಳು (Behaviours of snake) ನಿಮ್ಮನ್ನು ಬೆಚ್ಚಿ ಬೀಳಿಸುತ್ತವೆ. ನಾಗರಹಾವೊಂದು (Indian Cobra) ಮಂಡಲ ಹಾವನ್ನು (Wiper) ನುಂಗುತ್ತಿರುವ ದೃಶ್ಯವಂತೂ ಅಬ್ಬಾ ಅನಿಸುತ್ತಿದೆ.
ಮಂಡಲ ಹಾವನ್ನೇ ನುಂಗಿದ ನಾಗರ ಹಾವು
ದೊಡ್ಡ ಮೀನು ಸಣ್ಣ ಮೀನನ್ನು ನುಂಗಿ ನೀರು ಕುಡಿದ ಹಾಗೆ ಕೆಲವು ಹಾವುಗಳು ಸಣ್ಣ ಹಾವುಗಳನ್ನು ತಿಂದು ಬದುಕೋದು ಸಹಜ ಧರ್ಮ. ಕಾಳಿಂಗ ಸರ್ಪಕ್ಕೆ ಕೇರೆ ಹಾವುಗಳೇ ಪ್ರಧಾನ ಆಹಾರ ಇದ್ದ ಹಾಗೆ.. ಆಹಾರ ಚಕ್ರದಲ್ಲಿ ಹಾವುಗಳಿಗೆ ಹಾವುಗಳು ಆಹಾರವಾಗುವುದು ವಿಚಿತ್ರ ಏನಲ್ಲ. ಆದರೆ, ಸಣ್ಣ ನಾಗರಹಾವೊಂದು ದೊಡ್ಡ ಮಂಡಲ ಹಾವನ್ನು ನುಂಗಿದೆ ಅಂದರೆ ನಂಬುತ್ತೀರಾ?
ಇದು ಅಮೆಜಾನ್ ಕಾಡು, ದಕ್ಷಿಣ ಆಫ್ರಿಕಾದ ಎಲ್ಲೋ ನಡೆದ ಘಟನೆಯಲ್ಲ. ಡಿಸ್ಕವರಿ ಚಾನೆಲ್‌ನಲ್ಲಿ ದಿನಗಟ್ಟಲೆ ಕಾದು ಶೂಟ್ ಮಾಡಿದಂಥ ಸೀನ್ ಕೂಡಾ ಅಲ್ಲ. ಇದು ಪಕ್ಕಾ ಲೋಕಲ್ ದೃಶ್ಯ.
ಅರಮನೆ ನಗರಿ ಮೈಸೂರಿನಲ್ಲೇ ಈ ಅಪರೂಪದ ಘಟನೆ ನಡೆದಿದೆ. ಇಲ್ಲಿನ ಬೋಗಾದಿ ಮೂರನೇ ಹಂತದಲ್ಲಿ ಮಂಡಲ ಹಾವನ್ನೇ ನಾಗರಹಾವು ನುಂಗಿದ ದೃಶ್ಯ ಕಂಡುಬಂದಿದೆ. ಮಂಡಲ ಹಾವು ಎಂದರೆ ಸಾಮಾನ್ಯವಾಗಿಯೇ ನಾಗರಹಾವಿಗಿಂತ ಮೂರ್ನಾಲ್ಕು ಪಟ್ಟು ದೊಡ್ಡದಿರುತ್ತದೆ. ಅಂಥ ಮಂಡಲವನ್ನು ಗಬಗಬನೆ ನುಂಗಿ ಹಾಕುವ ದೃಶ್ಯವನ್ನು ನೋಡಿದರೆ ನೀವೂ ಬೆಚ್ಚಿ ಬೀಳುತ್ತೀರಾ?
ನಾಗಪ್ಪನಿಗೆ ಅದೇನು ಹಸಿವಾಗಿತ್ತೋ, ಅದೇನು ಸಿಟ್ಟು ಬಂದಿತ್ತೋ ಗೊತ್ತಿಲ್ಲ. ಮಂಡಲ ಹಾವನ್ನು ಬಾಯಿಯ ಭಾಗದಿಂದಲೇ ತಿಂದು ಹಾಕಿದೆ. ಅದು ಮಂಡಲ ಹಾವಿನ ಬಹುತೇಕ ಅರ್ಧ ಭಾಗ ತಿಂದ ಬಳಿಕದ ವಿಡಿಯೋ ಇಲ್ಲಿದೆ. ನಾಗರಹಾವು ಗಬಗಬನೆ ನುಂಗುವ ದೃಶ್ಯ ನೋಡಿದರೆ ಭಯ ಹುಟ್ಟಿಸುವಂತಿದೆ.
ಮಂಡಲ ಹಾವುಗಳಲ್ಲಿ ಸಾಮಾನ್ಯ ಮಂಡಲ, ಕೊಳಕು ಮಂಡಲ, ಗರಗಸ ಮಂಡಲ ಸೇರಿದಂತೆ ಬೇರೆ ಬೇರೆ ಪ್ರಬೇಧಗಳಿವೆ. ಇವುಗಳು 25 ಸೆಂ.ಮೀ.ನಿಂದ ಐದು ಅಡಿಯ ವರೆಗೂ ಇರುತ್ತವೆ. ಇವುಗಳು ವಿಷಕಾರಿ ಹಾವುಗಳು.
ಅಂದ ಹಾಗೆ, ನಾಗರಹಾವು ಈ ಕೊಳಕು ಮಂಡಲವನ್ನು ಕೊಂದು ಹಾಕಿ ನುಂಗಿದೆಯಾ ಅಥವಾ ಸತ್ತಿದ್ದನ್ನು ನುಂಗಿದೆಯಾ ಎನ್ನುವುದು ಗೊತ್ತಾಗಿಲ್ಲ.
ಚಪ್ಪಲಿ ನುಂಗಿದ ನಾಗರಹಾವು
ಒಂದು ಕಡೆಗೆ ನಾಗರ ಹಾವು ಮಂಡಲ ಹಾವನ್ನು ನುಂಗಿದರೆ ಇನ್ನೊಂದು ಕಡೆಯಲ್ಲಿ ಚಪ್ಪಲಿ ನುಂಗುವ ಮೂಲಕ ಚಿಲ್ಲರೆ ಬುದ್ಧಿ ತೋರಿಸಿದೆ. ಬಹುಶಃ ಬಾಯಿ ತುರಿಕೆ ಬಂದಿತ್ತೋ ಗೊತ್ತಿಲ್ಲ. ಮನೆ ಬಾಗಿಲಿನಲ್ಲಿ ಇಟ್ಟಿದ್ದ ಚಪ್ಪಲಿಯನ್ನೇ ನುಂಗಿದೆ. ಅದು ಅರ್ಧ ನುಂಗಿದ ದೃಶ್ಯ ಸೆರೆಯಾಗಿದೆ.
ಮನೆಯವರು ಹೊರಗೆ ಬಂದು ನೋಡಿದರೆ ಈ ಹಾವು ಚಪ್ಪಲಿ ನುಂಗುತ್ತಿರುವುದು ಕಂಡಿತು. ಮೈಸೂರಿನ ಜೆ.ಪಿ ನಗರದಲ್ಲಿ ಈ ಘಟನೆ ನಡೆದಿದೆ.
ಬಟ್ಟೆ ತುಂಡು ತಿನ್ನುತ್ತಿರುವ ಕೇರೆ ಹಾವು
ಇದಿಷ್ಟೇ ಅಲ್ಲ, ಮೈಸೂರಿನ ದಡದ ಹಳ್ಳಿಯಲ್ಲಿ ಕೇರೆ ಹಾವೊಂದು ಬಟ್ಟೆ ತುಂಡನ್ನು ನುಂಗಿದೆಯಂತೆ! ಕೇರೆ ಹಾವು ಇಲಿಗಳನ್ನು ಓಡಿಸಿಕೊಂಡು ಹೋಗಿ ಹಿಡಿಯೋದು ಸಾಮಾನ್ಯ. ತಿನ್ನಲು ಏನೂ ಸಿಕ್ಕಿಲ್ಲ ಅಂತ ಈ ಬಟ್ಟೆಗೆ ಬಾಯಿ ಹಾಕಿದೆಯಾ? ಗೊತ್ತಿಲ್ಲ.
ಅಂತೂ ಹಾವುಗಳು ಕೂಡಾ ವಿಚಿತ್ರ ವರ್ತನೆ ತೋರಿಸುತ್ತಿರುವುದಂತೂ ನಿಜ.
ಇದನ್ನೂ ಓದಿ: Snake News : ಮತ್ತೆ ಮಂಚಕ್ಕೆ ಬಂದ ಬುಸ್ ಬುಸ್ ನಾಗಪ್ಪ; ಯುವಕನ ಪಕ್ಕ ತಣ್ಣಗೆ ಮಲಗಿದ್ದ!