Site icon Vistara News

Social Media Post : ವಿದ್ಯಾರ್ಥಿನಿಯರ ಅಶ್ಲೀಲ‌ ಫೋಟೊ ಅಪ್ಲೋಡ್ ಮಾಡಿದ ಯುವಕ ಅರೆಸ್ಟ್; ಅವನ ಟಾರ್ಗೆಟೇ ವಿಚಿತ್ರ!

Accused Rajanikanth

ಪರಶುರಾಮ್‌ ತಹಶೀಲ್ದಾರ್‌ ವಿಸ್ತಾರ ನ್ಯೂಸ್‌, ಹುಬ್ಬಳ್ಳಿ

ಹುಬ್ಬಳ್ಳಿಯ ಸಮರ್ಥ ಕಾಲೇಜಿನ (Samarth College hubballi) ಹಿಂದು ವಿದ್ಯಾರ್ಥಿನಿಯರ (hindu students) ಫೋಟೋ ದುರ್ಬಳಕೆ ಮಾಡಿ ಆಶ್ಲೀಲ ಪೋಸ್ಟ್ (Social Media post) ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ದುಷ್ಕೃತ್ಯ ಮಾಡಿದ್ದು ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿಯ ಕುತಂತ್ರ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇನ್‌ಸ್ಟಾಗ್ರಾಂ‌ನಲ್ಲಿ ವಿದ್ಯಾರ್ಥಿನಿಯರ ಫೊಟೋಗಳನ್ನು ಅಶ್ಲೀಲವಾಗಿ ಬಿಂಬಿಸಿದ್ದ ಕಿಡಿಗೇಡಿಯನ್ನು ಹೆಡೆಮುರಿ ಕಟ್ಟಿದ (student arrested) ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹುಬ್ಬಳ್ಳಿಯ ಶಿರೂರ ಪಾರ್ಕ್ ಬಳಿ ಇರೋ ಸಮರ್ಥ ಕಾಲೇಜ್‌ನಲ್ಲಿ ಕಿಡಿಗೇಡಿಯೊಬ್ಬ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿದ್ದ. ಇನ್‌ಸ್ಟಾಗ್ರಾಂನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಕಾಲೇಜು ಹುಡಗಿಯರ ಫೋಟೊ ಬಳಸಿ ಅವಾಚ್ಯ ಶಬ್ದಗಳನ್ನು ಬರೆದಿದ್ದ.

ಕಾಶ್ಮೀರನ1990_0 ನೇಮ್‌ನ ಇನ್‌ಸ್ಟಾ ಅಕೌಂಟ್ ನಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋಗಳು ಹರಿದಾಡುತ್ತಿದ್ದವು. ಅಕೌಂಟ್ ನಲ್ಲಿ ಸಮರ್ಥ ಕಾಲೇಜ್‌ನ ಲೋಗೋ ಕೂಡಾ ಬಳಸಲಾಗಿತ್ತು. ಕಾಲೇಜ್ ಹುಡುಗಿಯರ ಫೋಟೊ ಹೇಗೆ ಬೇಕೋ ಹಾಗೇ ಅಶ್ಲೀಲವಾಗಿ ಎಡಿಟ್ ಮಾಡಿದ್ದ ಕಿಡಗೇಡಿ ಅದನ್ನೇ ಇನ್‌ಸ್ಟಾ ಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದ.

ಕೇವಲ ಫೋಟೋ ಮಾತ್ರವಲ್ಲ ಕೆಟ್ಟದಾಗಿ ಬರೆದಿದ್ದ. ಧಮ್ ಇದ್ರೆ ಹುಡಕಿ ಎಂದು ಪೊಲೀಸರಿಗೂ ಚಾಲೆಂಜ್ ಮಾಡಿದ್ದ. ಇಷ್ಟೇ ಅಲ್ಲ ನೆಕ್ಸ್ಟ್ ಟಾರ್ಗೆಟ್ ಯಾರು ಅಂತಾ ಹಲವು ವಿದ್ಯಾರ್ಥಿನಿಯರ ಫೋಟೊಗಳನ್ನು ಕೂಡ ಪೋಸ್ಟ್ ಮಾಡಿದ್ದ. ಕಾಲೇಜ್ ವಿದ್ಯಾರ್ಥಿಗಳು ಗಾಬರಿಯಾಗಿ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ನಾಲ್ವರು ವಿದ್ಯಾರ್ಥಿಗಳು ಹುಬ್ಬಳ್ಳಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು‌ ನೀಡಿದ್ದರು. ಯಾವಾಗ ವಿದ್ಯಾರ್ಥಿಗಳು ದೂರು ನೀಡಿದರೋ ತಕ್ಷಣ ಅಲರ್ಟ್ ಆದ‌ ಖಾಕಿಪಡೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳನ್ನ ವಿಚಾರಣೆ ಮಾಡಿತ್ತು. ಫೀಲ್ಡ್‌ಗೆ ಇಳಿದ ಪೊಲೀಸರು ಕೊನೆಗೂ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ಸಮರ್ಥ ಕಾಲೇಜಿನ ಹಳೇ ವಿದ್ಯಾರ್ಥಿ ರಜನಿಕಾಂತ್ ಬಂಧಿತ ಆರೋಪಿ. ಕಳೆದ ವರ್ಷ ಹಾಜರಾತಿ ಕಡಿಮೆ ಇರೋ ಕಾರಣಕ್ಕೆ ರಜನಿಕಾಂತ್‌ಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿರಲಿಲ್ಲ. ಈ ವರ್ಷ ಅಡ್ಮಿಷನ್ ಕೂಡ ಕೊಟ್ಟಿರಲಿಲ್ಲ. ಹೀಗಾಗಿ ಕಾಲೇಜಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಕುತಂತ್ರ ಮಾಡಿದ್ದ ಎನ್ನಲಾಗಿದೆ.

ಜೊತೆಗೆ ಸಮರ್ಥ ಕಾಲೇಜಿಗೆ ಆಗಾಗ ಬಂದು ವಿದ್ಯಾರ್ಥಿನಿಯರ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದ. ಯಾರು ತನ್ನ ಜೊತೆ ಮಾತಾಡಲ್ವೋ ಅವರ ಫೋಟೋ ಬಳಸಿ ಅಶ್ಲೀಲವಾಗಿ ಬಿಂಬಿಸಿ ಅಪ್ಲೋಡ್ ಮಾಡುತ್ತಿದ್ದ‌. ಬಾಯ್‌ಫ್ರೆಂಡ್ ಇರೋ ಹುಡ್ಗೀರನ್ನು ಟಾರ್ಗೆಟ್ ಮಾಡುತ್ತಿದ್ದನಂತೆ. ಕಿಡಿಗೇಡಿತನ ಮಾಡಿ ಸಿಕ್ಕಿ ಹಾಕಿಕೊಂಡಿರುವ ರಜನೀಕಾಂತ್‌ನನ್ನು ಬಂಧಿಸಿರುವ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈತನ ಜೊತೆ ಇನ್ನೂ ಹಲವರು ಇರಬಹುದು ಅನ್ನೋ ಸಂಶಯದ ಕಾರಣ ಬ್ರೇನ್ ಮ್ಯಾಪಿಂಗ್‌ಗೆ ಮುಂದಾಗಿದ್ದಾರೆ.

ಹಿಂದಿನ ಸುದ್ದಿ : Social Media Post : ಹುಬ್ಬಳ್ಳಿಯ ಹಿಂದು ವಿದ್ಯಾರ್ಥಿನಿಯರ ಅಶ್ಲೀಲ ಫೋಟೊ ಪ್ರಕರಣ; ಪೋಸ್ಟ್‌ ಡಿಲೀಟ್‌ ಮಾಡಿದ ಕಿಡಿಗೇಡಿ

ಆರೋಪಿಯನ್ನು ಬಂಧಿಸುವಂತೆ ಎಬಿವಿಪಿ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕಾಲೇಜ್ ವಿದ್ಯಾರ್ಥಿಗಳ ಮಾನ ಹರಾಜು ಆಗುತ್ತಿದ್ದರೂ ಕಾಲೇಜ್ ಆಡಳಿತ ಮಂಡಳಿ ದೂರು ಕೊಡದೆ ನಿರ್ಲಕ್ಷ್ಯ ವಹಿಸಿತ್ತು. ದೂರು ನೀಡಲು ತಡವಾದ ಕಾರಣ ಆರೋಪಿಗೆ ಮತ್ತಷ್ಟು ವಿಕೃತವಾಗಿ ನಡೆದುಕೊಳ್ಳಲು ಸಮಯ ಸಿಕ್ಕಿದೆ. ಸೂಕ್ತ ತನಿಖೆ ನಡೆಸಿ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪಾಲಕರು ಆಗ್ರಹಿಸುತ್ತಿದ್ದಾರೆ.

ಆರಂಭದಲ್ಲಿ ಈ ಘಟನೆಯಲ್ಲಿ ಮುಸ್ಲಿಂ ಹುಡುಗರು ಇದ್ದಾರೆ ಎಂದು ಸುದ್ದಿಯಾಗಿತ್ತು. ಉಡುಪಿ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲೂ ಅದೇ ರೀತಿಯ ಘಟನೆ ನಡೆದಿದೆ ಎಂದು ಆರೋಪ ಮಾಡಲಾಗಿತ್ತು. ಇದೀಗ ಸೈಕೊ ಯುವಕನ ಅರೆಸ್ಟ್‌ನಿಂದ ಕೆಲವು ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

Exit mobile version