ಧಾರವಾಡ/ಶಿವಮೊಗ್ಗ/ಹೊಸಪೇಟೆ: ಒಂದು ಕಡೆ ಗ್ರಹಣವನ್ನು ಧಾರ್ಮಿಕ ಮತ್ತು ಭಕ್ತಿಯ ನೆಲೆಯಲ್ಲಿ ನೋಡಿದರೆ ಇನ್ನು ಕೆಲವರು ಮೌಢ್ಯಾಚರಣೆ ಬೇಡ ಎಂಬ ಬಗ್ಗೆ ಜಾಗೃತಿ ಮೂಡಿಸಿದರು.
ಧಾರವಾಡದ ಕಲಾಭವನದ ಎದುರು ಸಮಾನ ಮನಸ್ಕರ ವೇದಿಕೆ ಸದಸ್ಯರು ಗ್ರಹಣದ ವೇಳೆ ಪಲಾವ್ ಮಾಡಿ ತಿಂದರು. ಶಂಕರ್ ಹಲಗತ್ತಿ ನೇತೃತ್ವದಲ್ಲಿ ಪಲಾವ್ ಸಿದ್ಧಪಡಿಸಿ ಅದನ್ನು ಅಲ್ಲಿದ್ದವರಿಗೆ ಹಂಚಲಾಯಿತು. ಗ್ರಹಣದ ವೇಳೆ ಉಪಹಾರ ಸೇರಿದಂತೆ ಭೋಜನ ನಿಷೇಧದ ಹಿನ್ನೆಲೆಯಲ್ಲಿ ಸಮಾನ ಮನಸ್ಕರರು ಗ್ರಹಣದ ವೇಳೆಯಲ್ಲೇ ಪಲಾವ್ ಸವಿದು ಮೌಢ್ಯ ಆಚರಣೆ ಮಾಡದಂತೆ ಕರೆ ನೀಡಿದರು.
ಶಿವಮೊಗ್ಗದಲ್ಲಿ
ಶಿವಮೊಗ್ಗದಲ್ಲಿ ಮೌಢ್ಯ ತೊರೆದು ಗ್ರಹಣ ವೀಕ್ಷಿಸಲು ವಿಜ್ಞಾನ ಪರಿಷತ್ ಮನವಿ ಮಾಡಿತ್ತು. ಹವ್ಯಾಸಿ ಖಗೋಳ ವೀಕ್ಷಕರಾದ ಹಾರೋನಹಳ್ಳಿ ಸ್ವಾಮಿ ನೇತೃತ್ವದಲ್ಲಿ ಗ್ರಹಣ ವೀಕ್ಷಣೆ ಮಾಡಲಾಯಿತು. ಗ್ರಹಣ ಸಮಯದಲ್ಲಿ ಖಾರ, ಮಂಡಕ್ಕಿ, ಸ್ವೀಟ್ ತಿಂದು ಮೌಢ್ಯ ಬಿಡಲು ಮನವಿ ಮಾಡಲಾಯಿತು.
ಹೊಸಪೇಟೆಯಲ್ಲಿ ಒಗ್ಗರಣೆ ಮಿರ್ಚಿ!
ವಿಜಯ ನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾನವ ಬಂಧುತ್ವ ವೇದಿಕೆ, ಅಂಬೇಡ್ಕರ್ ಸಂಘಟನೆ, ವಿಜ್ಞಾನ ಪರಿಷತ್ ವತಿಯಿಂದ ವಿಚಾರವಾದಿಗಳು ಸೂರ್ಯಗ್ರಹಣದ ಸಮಯದಲ್ಲಿ ಒಗ್ಗರಣೆ- ಮಿರ್ಚಿ ಸವಿದರು.
ನಾನಾ ಪ್ರಗತಿಪರ ಸಂಘಟನೆಗಳ ನಾಯಕರಿಂದ ಜಾಗೃತಿಯ ಮಾತುಗಳು ಕೇಳಿಬಂದವು. ʻʻಮೌಢ್ಯ ಬಿತ್ತುವ ಕೆಲಸ ಮಾಡಲಾಗುತ್ತಿದೆ, ಇದೊಂದು ವೈಜ್ಞಾನಿಕ ವಿಸ್ಮಯ. ಅದನ್ನ ನೋಡಬೇಕು, ಎಲ್ಲರೂ ಆನಂದಿಸಬೇಕು. ಮನುವಾದಿಗಳ ಕುತಂತ್ರದಿಂದ ಮೌಢ್ಯ ಬಿತ್ತಲಾಗುತ್ತಿದೆʼʼ ಎಂದು ಆರೋಪಿಸಲಾಯಿತು.