ಬೆಂಗಳೂರು: ಅಧಿಕಾರ ವಿಕೇಂದ್ರಿಕರಣ ಎಂಬ ಪಂಚಾಯತ್ ರಾಜ್ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಮೇಲಿನ ಹಂತದ ಅಧಿಕಾರಿಗಳಿಂದ ಅಸಹಕಾರ ಎದುರಾಗಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಮದ್ದೂರು ಗ್ರಾಮ ಪಂಚಾಯಿತಿ ಸದಸ್ಯರ ತಾಲೂಕು ಒಕ್ಕೂಟವು ಪ್ರತಿಭಟನೆ ನಡೆಸುತ್ತಿದ್ದು, ಗ್ರಾಪಂ ಸದಸ್ಯರಿಗೆ ಕೂಡಲೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಕೋರಿದ್ದಾರೆ.
ಮೇಲಿನ ಹಂತದ ಅಧಿಕಾರಿಗಳಿಂದ ಸಹಕಾರ ಸಿಗುತ್ತಿಲ್ಲ. ವಿಕೇಂದ್ರಿಕರಣ ಪರ ಬದ್ಧತೆ ಕೊರತೆಯಿಂದಾಗಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಗ್ರಾಮ ಪಂಚಾಯಿತಿ ಸದಸ್ಯರು ಸಕಾಲಿಕವಾಗಿ ಗ್ರಾಮ ಪಂಚಾಯಿತಿಯ ವಿವಿಧ ಕ್ರಿಯಾಯೋಜನೆಗಳ ಪಟ್ಟಿಯನ್ನು ನಿಯಮಾನುಸಾರ ಕಳುಹಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂಬುದು ಗ್ರಾಪಂ ಸದಸ್ಯರ ಆರೋಪವಾಗಿದೆ.
ಗ್ರಾಮಗಳಲ್ಲಿನ ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳ ವಿಷಯದಲ್ಲಿ ಸಂಬಂಧಪಟ್ಟ ಇಲಾಖೆಗಳೊಡನೆ ಸಮನ್ವಯ ಸಾಧಿಸಿ ಪಂಚಾಯಿತಿಗಳಿಗೆ ಸಂಪರ್ಕ ಸಂವಹನ ಮಾಡುವಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ವಿಫಲವಾಗಿರುವುದು ದುರದೃಷ್ಟಕರ. ಇದರಿಂದ ಗ್ರಾಮ ಪಂಚಾಯಿತಿ ಸದಸ್ಯರು ಜನತೆಯ ಆಶೋತ್ತರಗಳಿಗೆ ಸ್ಪಂದಿಸಲು ತೊಂದರೆಯಾಗುತ್ತಿದೆ ಎಂಬುದು ಗ್ರಾಪಂ ಸದಸ್ಯರ ಅಳಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಾದ ತಾವುಗಳು ಮಧ್ಯ ಪ್ರವೇಶ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಮಾಡಬೇಕು. ಆ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | 40% ಕಮಿಷನ್ | ಬಿಜೆಪಿ ಸರಕಾರದ ಮೇಲೆ 15,00,00,00,00,000 ರೂ. ಲೂಟಿ ಆರೋಪ, ಕಾಂಗ್ರೆಸ್‌ನಿಂದ ಲಂಚದ ಮೆನು!