Site icon Vistara News

Karnataka Election 2023: ಚಾಮರಾಜನಗರ ಬಂಡಾಯ ಶಮನಗೊಳಿಸಿದ ಬಿ.ಎಲ್‌. ಸಂತೋಷ್‌; ಸೋಮಣ್ಣಗೆ ಬೆಂಬಲ ಘೋಷಿಸಿದ ನಾಗಶ್ರೀ

Somanna succeeds in quelling chamarajanagar rebellion Nagashree announces support Karnataka Election 2023 updates

ಚಾಮರಾಜನಗರ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಎಲ್ಲ ಪಕ್ಷಗಳಿಗೂ ಬಂಡಾಯದ್ದೇ ಒಂದು ಚಿಂತೆಯಾಗಿದೆ. ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಪ್ರಕಟ ಮಾಡುತ್ತಿದ್ದಂತೆ ವಂಚಿತ ಟಿಕೆಟ್‌ ಆಕಾಂಕ್ಷಿಗಳು ಬಂಡಾಯ ಏಳುತ್ತಿದ್ದಾರೆ. ಇದೇ ವೇಳೆ ಚಾಮರಾಜನಗರದಲ್ಲಿ ಸಚಿವ ವಿ. ಸೋಮಣ್ಣ ಅವರಿಗೆ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಅಲ್ಲಿನ ಪ್ರಮುಖ ಟಿಕೆಟ್‌ ಆಕಾಂಕ್ಷಿಗಳಾದ ನಾಗಶ್ರೀ ಪ್ರತಾಪ್‌ ಹಾಗೂ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಆಪ್ತ ಎಂ.ಆರ್. ರುದ್ರೇಶ್‌ ಬಂಡಾಯ ಎದ್ದಿದ್ದರು. ಈಗ ನಾಗಶ್ರೀ ಅವರ ಮನವೊಲಿಸುವಲ್ಲಿ ಸೋಮಣ್ಣ ಯಶಸ್ವಿಯಾಗಿದ್ದಾರೆ.

ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗಶ್ರೀ ಪ್ರತಾಪ್‌ ಅವರು ಪಕ್ಷದ ತೀರ್ಮಾನದಿಂದ ಮುನಿಸಿಕೊಂಡಿದ್ದರು. ಸದ್ಯ ನಾಗಶ್ರೀ ಪ್ರತಾಪ್ ಜತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತುಕತೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ನಿಮ್ಮನ್ನು ಗುರುತಿಸುತ್ತದೆ. ಸೂಕ್ತ ಸ್ಥಾನಮಾನಗಳನ್ನು ಕೊಡಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆನ್ನಲಾಗಿದೆ.

ಇದನ್ನೂ ಓದಿ: BJP Karnataka: ಶೆಟ್ಟರ್‌, ಸವದಿ ವಾಪಸಾದರೆ ಸ್ವಾಗತ: ಈ ಹಿಂದೆ ನಾನೂ ಅಕ್ಷಮ್ಯ ಅಪರಾಧ ಮಾಡಿದ್ದೆ ಎಂದ ಬಿ.ಎಸ್‌. ಯಡಿಯೂರಪ್ಪ

ಈ ಹಿನ್ನೆಲೆಯಲ್ಲಿ ಬಂಡಾಯ ಎದ್ದಿದ್ದ ನಾಗಶ್ರೀ ಪ್ರತಾಪ್‌ ತುಸು ಶಾಂತಗೊಂಡಿದ್ದು, ಇದೀಗ ನಾಗಶ್ರೀ ಪ್ರತಾಪ್ ಬೆಂಬಲಿಗರ ಸಭೆ ಕರೆದು ಸೋಮಣ್ಣ ಅವರಿಗೆ ಬೆಂಬಲ ಸೂಚಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನಾನು ಬಿಜೆಪಿಯಿಂದ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಸಹಜವಾಗಿಯೇ ಟಿಕೆಟ್ ಕೈ ತಪ್ಪಿದಾಗ ನೋವಾಗಿತ್ತು. ಈ ವಿಚಾರವಾಗಿ ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದರು. 15 ವರ್ಷದಿಂದ ಕ್ಷೇತ್ರದಲ್ಲಿ ನಮ್ಮ ಶಾಸಕರು ಇಲ್ಲ. ನಮ್ಮದು ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ತತ್ವ ಇದೆ. ಈ ಕಾರಣದಿಂದ ನನ್ನ ಬೆಂಬಲಿಗರು ಹಿತೈಷಿಗಳು ಎಲ್ಲರೂ ಸೇರಿ ಈಗ ಪಕ್ಷ ಘೋಷಣೆ ಮಾಡಿರುವ ಅಭ್ಯರ್ಥಿ ವಿ. ಸೋಮಣ್ಣ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಘೋಷಿಸಿದರು.

ಇದನ್ನೂ ಓದಿ: Karnataka Election 2023: ಪಕ್ಷ ಸ್ಥಾನಮಾನ ಕೊಟ್ಟಿದ್ದರೂ ಯಡಿಯೂರಪ್ಪ ಏಕೆ ಕೆಜೆಪಿ ಕಟ್ಟಿದ್ದರು: ಬಿಎಸ್‌ವೈಗೆ ಶೆಟ್ಟರ್‌ ತಿರುಗೇಟು

ಪಕ್ಷ ಯಾವುದೇ ಭರವಸೆ ಕೊಟ್ಟಿಲ್ಲ

ನನಗೆ ಯಾವುದೇ ಭರವಸೆಯನ್ನು ಬಿಜೆಪಿ ವತಿಯಿಂದ ಕೊಟ್ಟಿಲ್ಲ. ಈ ವಿಚಾರವಾಗಿ ಬಿ.ಎಲ್.‌ ಸಂತೋಷ್ ಅವರು ಕರೆ ಮಾಡಿ ಮಾತನಾಡಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡುವಂತೆ ಅವರು ಕೋರಿಕೊಂಡರು. ನಿನಗೆ ನೋವಾಗಿದೆ ಎಂಬ ವಿಚಾರ ನನಗೆ ಗೊತ್ತಿದೆ. ಸಮಯ ತೆಗೆದುಕೊಂಡು ನಿರ್ಧಾರ ತಿಳಿಸು ಅಂತ ಅವರು ಹೇಳಿದರು. ಅದರಂತೆ ಎರಡು ದಿನದ ಸಮಯಾವಕಾಶ ತೆಗೆದುಕೊಂಡಿದ್ದೆ. ಆ ಬಳಿಕ ನಂತರ ಎಲ್ಲರ ಅಭಿಪ್ರಾಯವನ್ನು ಪಡೆದು ನಾನು ನಿರ್ಧಾರಕ್ಕೆ ಬಂದಿದ್ದೇನೆ‌. ಅದರಂತೆ ನಾನು‌ ಚಾಮರಾಜನಗರ ಅಭ್ಯರ್ಥಿಯಾಗಿರುವ ಸೋಮಣ್ಣ ಅವರ ಪರ ಕೆಲಸ ಮಾಡುತ್ತೇನೆ ಎಂದು ನಾಗಶ್ರೀ ಪ್ರತಾಪ್ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ. ಇನ್ನು ಸಿಎಂ ಬಿ.ಎಸ್.‌ ಯಡಿಯೂರಪ್ಪ ಆಪ್ತ ಎಂ.ಆರ್. ರುದ್ರೇಶ್‌ ಅವರನ್ನು ಸಮಾಧಾನಪಡಿಸುವ ಕೆಲಸವೊಂದು ಬಾಕಿ ಇದೆ.

Exit mobile version