Site icon Vistara News

Karnataka Election 2023: ವರುಣದಲ್ಲಿ ಸೋಮಣ್ಣಗೆ ಕಾಂಗ್ರೆಸ್‌ ಕಾರ್ಯಕರ್ತರ ಮುತ್ತಿಗೆ; ಸಿದ್ದರಾಮಯ್ಯ ಪರ ಘೋಷಣೆ

Somanna's car attacked by Congress workers in Varuna village, Mysore. Karnataka Election updates.

#image_title

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಹೈ ವೋಲ್ಟೇಜ್‌ ಕ್ಷೇತ್ರಗಳಲ್ಲಿ ವರುಣ ಕೂಡ ಒಂದಾಗಿದೆ. ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸೋಮಣ್ಣ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ತಾಲೂಕಿನ ಭುಗತಹಳ್ಳಿಯಲ್ಲಿ ಸೋಮಣ್ಣ ಕಾಂಗ್ರೆಸ್‌ ಕಾರ್ಯಕರ್ತರು ಮುತ್ತಿಗೆ ಹಾಕಿ, ಸಿದ್ದರಾಮಯ್ಯ ಪರ ಘೋಷಣೆಗಳನ್ನು ಕೂಗಿರುವುದು ಕಂಡುಬಂದಿದೆ.

ಭುಗತಗಳ್ಳಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಚ್ಪಾರ್ಚನೆ ಮಾಡಿ ಸೋಮಣ್ಣ ಭಾಷಣ ಮಾಡುತ್ತಿದ್ದಾಗ ಯುವಕನೊಬ್ಬ ಅವರನ್ನು ಪ್ರಶ್ನೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಭಾಷಣ ಮುಗಿಯುವವರೆಗೂ ಕಾಯುವಂತೆ ಸಚಿವರು ಮನವಿ ಮಾಡಿದ್ದಾರೆ. ಭಾಷಣ ಮುಗಿಯುತ್ತಿದ್ದಂತೆ ನಿರ್ಗಮಿಸಲು ಮುಂದಾದಾಗ ಸೋಮಣ್ಣಗೆ ಕೈ ಕಾರ್ಯಕರ್ತರು ಘೇರಾವ್‌ ಹಾಕಿದರು. ನಂತರ ಅವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು. ಇದರಿಂದ ಸಚಿವರು ಮುಜುಗರಕ್ಕೆ ಒಳಗಾಗುವಂತಾಯಿತು.

ಇದೇ ವೇಳೆ ಮತ್ತೊಂದು ಯುವಕರ ಗುಂಪಿನಿಂದ ಸೋಮಣ್ಣ ಹಾಗೂ ಬಿಜೆಪಿ ಪರ ಘೋಷಣೆಗಳು ಮೊಳಗಿದವು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ನಂತರ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಬಳಿಕ ಅಲ್ಲಿಂದ ಮತ್ತೊಂದು ಊರಿಗೆ ವಿ.ಸೋಮಣ್ಣ ಪ್ರಚಾರಕ್ಕೆ ತೆರಳಿದರು.

ಇದನ್ನೂ ಓದಿ | Karnataka Election 2023: ಶೃಂಗೇರಿಯಲ್ಲಿ ಚಂಡಿಕಾ ಯಾಗ ನೆರವೇರಿಸಿದ ಡಿ.ಕೆ. ಶಿವಕುಮಾರ್;‌ ಅಧಿಕಾರಕ್ಕಾಗಿ ಪ್ರಾರ್ಥನೆ

ಮೈಸೂರು ತಾಲೂಕಿನ ಭುಗತಗಳ್ಳಿಯ ಶ್ರೀ ಪಾತಾಳೇಶ್ವರ ದೇವರ ಸನ್ನಿಧಿಯಿಂದ ವಿ.ಸೋಮಣ್ಣ ಪ್ರಚಾರ ಶುರು ಮಾಡಿದರು. ಅವರಿಗೆ ಸಂಸದ ಪ್ರತಾಪ್ ಸಿಂಹ, ಕೋಟೆ ಶಿವಣ್ಣ ಸೇರಿ ಸ್ಥಳೀಯ ಜನಪ್ರತಿನಿಧಿಗಳು ಸಾಥ್‌ ನೀಡಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಈ ಬಾರಿ ವರುಣದಲ್ಲಿ‌ ದೊಡ್ಡ ಸಂಚಲನ ಕಾಣಿಸುತ್ತಿದೆ. 15 ವರ್ಷಗಳಿಂದ ವರುಣ ಜನ ಒಳ್ಳೆಯ ಅಭ್ಯರ್ಥಿಯನ್ನು ಕೇಳಿದ್ದರು. ಒಳ್ಳೆಯ ಅಭ್ಯರ್ಥಿ ಇಲ್ಲ ಎಂದು ಎರಡು ಬಾರಿ ಅಪ್ಪ, ಒಂದು‌ ಬಾರಿ ಮಗ ಗೆದ್ದಿದ್ದು, ಈಗ ಉತ್ತರಾಧಿಕಾರಿಯಾಗಿ ಮೊಮ್ಮಗನನ್ನು ಕರೆತಂದಿದ್ದಾರೆ. ಒಂದು ದಿನ ಪ್ರಚಾರಕ್ಕೆ ಬರುತ್ತೇನೆ ಎಂದವರು ಈಗ ಹೆದರಿದ್ದಾರೆ. ಸೋಮಣ್ಣ ಹೆಸರು ಘೋಷಣೆ ಆಗುತ್ತಿದ್ದಂತೆ ನಾಮಪತ್ರ ಸಲ್ಲಿಕೆಗೆ ಒಂದು ದಿನ ಮುಂಚಿತವಾಗೇ ಬಂದು ಕುಳಿತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಟೀಕಿಸಿದರು.

ಎಲ್ಲ ಜಾತಿ ಜನಾಂಗದವರು ಸೋಮಣ್ಣ ಬೆನ್ನಿಗಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಬೆಂಗಳೂರಿನಿಂದ ರಿವರ್ಸ್‌ ಗೇರಲ್ಲಿ ಬಂದಿದ್ದಾರೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಕನಸು ಕಾಣುತ್ತಿದ್ದೀರಿ. ನಿಮ್ಮ ಹೆಸರಲ್ಲಿ 30-40 ಜನರನ್ನು ಗೆಲ್ಲಿಸಬೇಕು. ಅವರನ್ನು ಗೆಲ್ಲಿಸುವುದು ಬಿಡಿ, ನೀವು ಗೆಲ್ಲುತ್ತೀರೋ ಇಲ್ಲವೋ ಎನ್ನುವ ಭಯ ಕಾಡುತ್ತಿದೆ. ಅದಕ್ಕಾಗಿ ವಾಪಸ್ ವರುಣಕ್ಕೆ ಬಂದಿದ್ದೀರಿ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯಗೆ ಚಾಮುಂಡೇಶ್ವರಿಯಂತೆ ವರುಣ ಕಾಣುತ್ತಿದೆ

ಸಿದ್ದರಾಮಯ್ಯಗೆ 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಹೇಗೆ ಕಾಣುಸುತ್ತಿತ್ತೋ ಹಾಗೆಯೇ ಈಗ ವರುಣ ಕಾಣುತ್ತಿದೆ. ಅವರಿಗೆ ಸೋಲಿನ ಭಯ ಕಾಣುತ್ತಿದೆ. ಅದಕ್ಕಾಗಿ ಏನೇನೋ ಮಾತನಾಡುತ್ತಿದ್ದಾರೆ. ಬಸವಣ್ಣನ ಅನುಯಾಯಿಯಾದ ಮುಖ್ಯಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಮಾತನಾಡುತ್ತಿದ್ದಾರೆ. ವೀರೇಂದ್ರ ಪಾಟೀಲ್, ನಿಜಲಿಂಗಪ್ಪ, ಜೆ.ಎಚ್‌. ಪಟೇಲ್ ಅವರಂತಹ ಲಿಂಗಾಯತ ಸಿಎಂಗಳಿದ್ದರು. ಅತ್ಯಂತ ಅಭಿವೃದ್ಧಿ ಕಾರ್ಯ ಮಾಡಿದ ನಮ್ಮ ಯಡಿಯೂರಪ್ಪ ಸಾಹೇಬರು ಇದ್ದರು. ಈಗ ಬಸವರಾಜ ಬೊಮ್ಮಾಯಿ ಇದ್ದಾರೆ. ಬಸವಾನುಯಾಯಿಗಳ ಬಗ್ಗೆ ಸಿದ್ದರಾಮಯ್ಯ ತುಚ್ಚವಾಗಿ ಮಾತನಾಡಲು ಶುರುಮಾಡಿದ್ದಾರೆ. ಇದು ಬೇರೆ ಸಮುದಾಯಗಳ ಬಗ್ಗೆ ಅವರಿಗಿರುವ ತುಚ್ಚ ಭಾವನೆ ತೋರಿಸುತ್ತದೆ. ಇಂತಹ ದುರಂಹಕಾರಿ ಸಿದ್ದರಾಮಯ್ಯಗೆ ವರುಣ ಜನ ಪಾಠ ಕಲಿಸಬೇಕು ಎಂದು ಪ್ರತಾಪ್‌ ಸಿಂಹ ಹೇಳಿದರು.

ಇದನ್ನೂ ಓದಿ | Karnataka Election: ಹಿಜಾಬ್‌, ಹಲಾಲ್‌ ಚುನಾವಣೆ ವಿಷಯವೇ ಅಲ್ಲ; ಎಲ್ಲ ಮುಗಿದು ಹೋಗಿದೆ: ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು ಮಹಾರಾಜರ ಊರು. ಎಲ್ಲರಿಗೂ ಗೌರವ ಕೊಟ್ಟ ಊರು. ಅಂತಹ ಊರಲ್ಲಿ‌ ಹನುಮ ಜಯಂತಿಗೆ ಹೋದರೆ ಹನುಮ ಎಲ್ಲಿ ಹುಟ್ಟಿದ ಎಂದು ಕೇಳುತ್ತಾರೆ. ಅದ್ಧೂರಿ ದಸರಾಗೆ ಮತ್ತೊಂದು ದಸರಾ (ಮಹಿಷ ದಸರಾ) ಹುಟ್ಟುಹಾಕಿದ ವ್ಯಕ್ತಿಗೆ ಪಾಠ ಕಲಿಸುವ ಕಾಲ ಬಂದಿದೆ. ಅದಕ್ಕಾಗಿ ಸೋಮಣ್ಣ ಅವರನ್ನು ಕಳುಹಿಸಿದ್ದಾರೆ. ಮಾದಪ್ಪ, ಚಾಮುಂಡೇಶ್ವರಿಯ ಭಕ್ತ ಸೋಮಣ್ಣಗೆ ಜನರು ಮತ ಹಾಕಬೇಕು. ಮೈಸೂರು ಜಿಲ್ಲೆಯಲ್ಲಿ ಜನರು ಚಾಮುಂಡಿ ಭಕ್ತನನ್ನು ಗೆಲ್ಲಿಸುತ್ತಾರೆ ಎಂಬುವುದನ್ನು ಸಾಬೀತು ಮಾಡಿ ಎಂದು ಕರೆ ನೀಡಿದರು.

Exit mobile version