Site icon Vistara News

ಸಿದ್ದರಾಮೋತ್ಸವದಿಂದ ಕಾಂಗ್ರೆಸ್‌ ವಿಭಜನೆಯತ್ತ ಸಾಗುತ್ತಿದೆಯೇ?: ದೊರಕುತ್ತಿವೆ ಮುನ್ಸೂಚನೆಗಳು

Siddaramaiah vs DK shivakumar

ರಮೇಶ ದೊಡ್ಡಪುರ, ಬೆಂಗಳೂರು
ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಪ್ರಯುಕ್ತ ಆಯೋಜನೆಯಾಗಿರುವ ಅಮೃತಮಹೋತ್ಸವ ಕಾರ್ಯಕ್ರಮದಿಂದಾಗಿ ರಾಜ್ಯ ಕಾಂಗ್ರೆಸ್‌ ವಿಭಜನೆ ಆಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಸಿದ್ದರಾಮಯ್ಯ ಆಪ್ತರು ಆಯೋಜನೆ ಮಾಡಿರುವ ಕಾರ್ಯಕ್ರಮ ಈಗಾಗಲೆ ಸಿದ್ದರಾಮೋತ್ಸವ ಎಂದೇ ಪ್ರಸಿದ್ಧವಾಗಿದ್ದು, ರಾಜ್ಯದ ವಿವಿಧೆಡೆ ಕಾಂಗ್ರೆಸ್‌ ಕಾರ್ಯಕರ್ತರು ಪರಸ್ಪರರ ವಿರುದ್ಧ ಸಂಘರ್ಷಕ್ಕಿಳಿದಿದ್ದಾರೆ.

ಸಿದ್ದರಾಮೋತ್ಸವ ಆಚರಣೆಗೆ ಮೂಲ ಕಾಂಗ್ರೆಸಿಗರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬೆಂಬಲಿಗರ ವಿರೋಧ ವ್ಯಕ್ತವಾಗುತ್ತಲೇ ಇದೆ. ಈ ಹಿಂದೆ ಡಿ.ಕೆ ಶಿವಕುಮಾರ್ ಬೆಂಬಲಿಗ ಜೆ.ಸಿ ರಾಜು ಅವರು ಸಿದ್ದರಾಮೋತ್ಸವ ಆಯೋಜನೆ ಸಮಿತಿಗೆ ಪತ್ರ ಬರೆದು, ಡಿ.ಕೆ ಶಿವಕುಮಾರ್ ಅವರಿಗೆ 60 ವರ್ಷಗಳು ಆಗಿದೆ. ಪಕ್ಷಕ್ಕಾಗಿ ಚಿಕ್ಕ ವಯಸ್ಸಿನಿಂದ ದುಡಿದಿದ್ದಾರೆ. ಅವರ ಪಕ್ಷ ನಿಷ್ಠೆ ನೋಡಿ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ‌. ಆದ್ದರಿಂದ ಶಿವಕುಮಾರೋತ್ಸವ ಕಾರ್ಯಕ್ರಮ ಮಾಡಬೇಕು. ಇಂದಿನ ಸಿದ್ದರಾಮೋತ್ಸವ ಸಿದ್ಧತೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ, ತೀರ್ಮಾನಿಸಬೇಕು ಎಂದು ಜೆ.ಸಿ ರಾಜು ಮನವಿ ಮಾಡಿದ್ದರು.

ಈ ಕಾರ್ಯಕ್ರಮಕ್ಕೆ ಅರವತ್ತಕ್ಕೂ ಹೆಚ್ಚು ಜನರ ಸಮಿತಿ ರಚನೆ ಮಾಡಲಾಗಿದ್ದು, ಸಿದ್ದರಾಮಯ್ಯ ಆಪ್ತರು ಎಂದೇ ಗುರುತಿಸಿಕೊಂಡ ಆರ್‌.ವಿ. ದೇಶಪಾಂಡೆ, ಕೆ.ಎನ್‌. ರಾಜಣ್ಣ, ಎಚ್‌.ಸಿ. ಮಹದೇವಪ್ಪ, ಬಸವರಾಜ ರಾಯರಡ್ಡಿ, ಭೈರತಿ ಸುರೇಶ್‌ ಪ್ರಮುಖರಾಗಿದ್ದಾರೆ. ಉಳಿದಂತೆ ಡಿ.ಕೆ. ಶಿವಕುಮಾರ್‌ ಅವರ ಬೆಂಬಲಿಗರು ಎಂದು ಹೆಸರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್‌, ಪ್ರಿಯಾಂಕ್‌ ಖರ್ಗೆ ಮುಂತಾದವರು, ಡಿ.ಕೆ. ಶಿವಕುಮಾರ್‌ ಸಹೋದರ ಡಿ.ಕೆ. ಸುರೇಶ್‌ ಅವರನ್ನೂ ಸ್ವಾಗತ ಸಮಿತಿಗೆ ಸೇರಿಸಿಕೊಳ್ಳಲಾಗಿತ್ತು. ಶಿವಕುಮಾರ್‌ ಅವರನ್ನು ಯಾವ ಸಮಿತಿಗೂ ಸೇರಿಸಿರಲಿಲ್ಲ ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ಪತ್ರಿಕೆ ನೀಡುವ ಮೂಲಕ ಇದು ಸ್ಪಷ್ಟವಾಗಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಎಂದು ತಿಳಿಸಲಾಗಿತ್ತು. ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಸಹ ಸಿದ್ದರಾಮಯ್ಯ ಅವರ ಕಾರಣಕ್ಕೆ ಮುನಿಸಿಕೊಂಡಿದ್ದಾರೆ.

ಇದನ್ನೂ ಓದಿ | ಸಿದ್ದರಾಮೋತ್ಸವ | ಸಿದ್ದರಾಮಯ್ಯಗೆ ವರವೋ? ಶಾಪವೋ?

ಕೋಲಾರದಲ್ಲಿ ಸ್ಪರ್ಧೆ ಮಾಡಲು ಚಿಂತನೆ ನಡೆಸುತ್ತಿರುವ ಸಿದ್ದರಾಮಯ್ಯ, ಜಿಲ್ಲೆಯಲ್ಲಿ ತಮ್ಮನ್ನು ಯಾವುದಕ್ಕೂ ಸಂಪರ್ಕಿಸುತ್ತಿಲ್ಲ ಎಂದು ಆರೋಪಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್‌ಗೆ ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್‌ ಹಾಗೂ ಸುಧಾಕರ್‌ ಸೇರ್ಪಡೆಗೊಂಡಿದ್ದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಸೇರಿದಂತೆ ಇತರೆ ಶಾಸಕರು ಭಾಗಿಯಾಗಿದ್ದರು. ಆದರೆ ಕಳೆದ 50 ವರ್ಷಗಳಿಂದ ಕಾಂಗ್ರೆಸ್‌ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿದ ನನಗೆ ಒಂದು ಮಾತನ್ನು ಕೇಳದೇ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಇವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರ ಬಗ್ಗೆ ನನಗೆ ಸ್ಪಷ್ಟೀಕರಣ ನೀಡಬೇಕು ಎಂದು ಮುನಿಯಪ್ಪ ತಾಕೀತು ಮಾಡಿದ್ದರು.

ಕೋಲಾರದಲ್ಲಿ ಘರ್ಷಣೆ

ನಾಯಕರ ಮಟ್ಟದಲ್ಲಿ ಪರೋಕ್ಷ ಯುದ್ಧದಂತೆಯೇ ಇದ್ದ ಭಿನ್ನಾಭಿಪ್ರಾಯ ಇದೀಗ ಕಾರ್ಯಕರ್ತರ ಮಟ್ಟಕ್ಕೆ ಇಳಿದಿದೆ. ಕಾರ್ಯಕರ್ತರನ್ನು ಸಂಘಟಿಸುವ ಸಲುವಾಗಿ ಕೋಲಾರದ ಕಾಂಗ್ರೆಸ್‌ ಭವನದಲ್ಲಿ ಸಭೆಯನ್ನು ಶುಕ್ರವಾರ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾಜಿ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಹಾಗೂ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಬೆಂಬಲಿಗರ ನಡುವೆ ತಿಕ್ಕಾಟ ನಡೆದಿದೆ. ಗದ್ದಲ ಹೆಚ್ಚಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿದೆ. ಈ ವೇಳೆ ಕೆಲ ಕಾರ್ಯಕರ್ತರು ವೇದಿಕೆಯ ಮೇಲೇರಿ ಪ್ರತಿಭಟನೆ ನಡೆಸಿದ್ದಾರೆ.

ಹಾಸನದಲ್ಲಿ ಸ್ವಾತಂತ್ರೋತ್ಸವ ತಡೆದ ಸಿದ್ದರಾಮಯ್ಯ ಅಭಿಮಾನಿಗಳು

ಕಾಂಗ್ರೆಸ್‌ನ ಕಾರ್ಯಕರ್ತರು ಎರಡು ಬಣಗಳಾಗಿರುವುದರ ಪರಿಣಾಮ ಹಾಸನದಲ್ಲೂ ಕಾಣಿಸಿಕೊಂಡಿದೆ. ರಾಜ್ಯದೆಲ್ಲೆಡೆ ಸ್ವಾತಂತ್ರೋತ್ಸವ ಪಾದಯಾತ್ರೆ ಆಯೋಜಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈಗಾಗಲೆ ಎಲ್ಲರಿಗೂ ಸೂಚನೆ ನೀಡಿದ್ದಾರೆ. ಅದರಂತೆ ಹಾಸನದಲ್ಲಿ ಪಾದಯಾತ್ರೆ ನಡೆಸಲು ಕಾಂಗ್ರೆಸ್‌ ಕಾರ್ಯಕರ್ತರು ಮುಂದಾಗಿದ್ದರು. ಹೊಳೆನರಸೀಪುರ ತಾಲೂಕಿನ ಅರಕಲಗೂಡು ವಿದಾನಸಭಾ ಕ್ಷೇತ್ರದ ಶ್ರವಣೂರಿನಿಂದ ಪಾದಯಾತ್ರೆ ಆರಂಭವಾಗಿತ್ತು. ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿ ಶ್ರೀಧರ್ ಗೌಡ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿತ್ತು. ದೊಡ್ಡಳ್ಳಿಗೆ ಪಾದಯಾತ್ರೆ ಬಂದಾಗ ಸಿದ್ದರಾಮಯ್ಯ ಅಭಿಮಾನಿಗಳು ಆಗಮಿಸಿ ತಡೆದಿದ್ದಾರೆ.

ಸಿದ್ದರಾಮಯ್ಯ ಅವರ ಅಮೃತಮಹೋತ್ಸವಕ್ಕೆ ಅಡ್ಡಿಪಡಿಸಲು ಪಾದಯಾತ್ರೆ ಹೊರಟಿದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆ ಉದ್ದೇಶ ವಿವರಿಸಲು ಹೊರಟ ನಾಯಕರ ಜತೆ ವಾಗ್ವಾದ ನಡೆದಿದೆ. ಕೂಡಲೆ ಪಾದಯಾತ್ರೆ ನಿಲ್ಲಿಸಿ ವಾಪಸ್ ತೆರಳಿ ಎಂದು ಸಿದ್ದರಾಮಯ್ಯ ಅಭಿಮಾನಿಗಳು ಆಗ್ರಹಿಸಿದ್ದಾರೆ. ಆಕ್ರೋಶದಲ್ಲಿದ್ದ ಯುವಕರ ಗುಂಪು ಸಮಾಧಾನ ಮಾಡಲಾಗದೆ ಮುಖಂಡರು ಸ್ಥಳದಿಂದ ವಾಪಸಾಗಿದ್ದಾರೆ.

ಮುನ್ಸೂಚನೆಗಳು

ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಹೆಚ್ಚಾದಂತೆ, ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಮೇರೆ ಮೀರುತ್ತಿದೆ. ಸಿದ್ದರಾಮೋತ್ಸವದ ಪ್ರಯುಕ್ತ ಜಿಲ್ಲೆ ಹಾಗೂ ಕೆಲವೆಡೆ ತಾಲೂಕು ಮಟ್ಟದಲ್ಲೂ ಸಮಿತಿಗಳನ್ನು ರಚನೆ ಮಾಡಲಾಗಿದೆ. ಸಿದ್ದರಾಮೋತ್ಸವ ಕಾರ್ಯಕ್ರಮದ ದಿನಕ್ಕಷ್ಟೆ ಇವು ಸೀಮಿತವಾಗಿಲ್ಲ. ಮುಂದಿನ ಚುನಾವಣೆವರೆಗೂ ಈ ಸಮಿತಿಗಳು ಮುಂದುವರಿಯುವ ಮುನ್ಸೂಚನೆ ಲಭಿಸಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನೊಳಗೊಂದು ಸಿದ್ದರಾಮಯ್ಯ ಅವರ ಬಣವನ್ನು ಸೃಷ್ಟಿಸುವತ್ತ ಸಿದ್ದರಾಮೋತ್ಸವ ಮುಂದಾಗಿದೆ ಎಂದು ಕಾಂಗ್ರೆಸಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಯಾರು?

ಸಿದ್ದರಾಮಯ್ಯ ಅವರ ಆಪ್ತರ ಪ್ರಕಾರ, ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಮಾತ್ರ ಕಾಂಗ್ರೆಸ್‌ಗೆ ಜಯ ಲಭಿಸುತ್ತದೆ. ಸಿದ್ದರಾಮಯ್ಯ ಅವರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ಪ್ರಬಲರಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಮ್ಮ ತಮ್ಮ ಸಮುದಾಯವನ್ನು ಹೊರತುಪಡಿಸಿ ಅಹಿಂದ ಸಮುದಾಯಗಳು ಬೆಂಬಲ ನೀಡುತ್ತವೆ. ಉತ್ತರ ಕರ್ನಾಟಕದಲ್ಲಿ ಜನತಾದಳದ ಪ್ರಾಬಲ್ಯವಿಲ್ಲ. ಅಲ್ಲಿ ಬಿಜೆಪಿಯೊಂದಿಗೆ ನೇರ ಹಣಾಹಣಿ ಕಾಂಗ್ರೆಸ್‌ನದ್ದು. ಅಲ್ಲಿ ಬಿಜೆಪಿಯನ್ನು ಸೋಲಿಸಲು ಸಿದ್ದರಾಮಯ್ಯ ಅವರಿಂದ ಮಾತ್ರವೇ ಸಾಧ್ಯ. ಶಿವಕುಮಾರ್‌ ಅವರಿಗೆ ಇನ್ನೂ ರಾಜ್ಯಾದ್ಯಂತ ಪ್ರಭಾವ ಇಲ್ಲ ಎಂದು ವಾದಿಸುತ್ತಾರೆ.

ಶಿವಕುಮಾರ್‌ ಕರ್ನಾಟಕದ ಮುಖ್ಯಮಂತ್ರಿ ಆಗುವ ಮಹತ್ವಾಕಾಂಕ್ಷೆ ಹೊಂದಿರುವವರೇ ಆದ್ಧರಿಂದ ಅವರಿಗೆ ಇದು ಸವಾಲಿನ ಸಮಯ. ಈ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಪಕ್ಷವನ್ನು ವಿಧಾನಸಭೆ ಚುನಾವಣೆಯಲ್ಲಿ ಎರಡೂ ಬಣಗಳನ್ನು ಒಟ್ಟಿಗೆ ಕೊಂಡೊಯ್ಯುವ ಹೊಣೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಬಂದೊದಗಿದೆ.

ಇದನ್ನೂ ಓದಿ | ಸಿದ್ದರಾಮೋತ್ಸವ ಬ್ಯಾನರ್‌, ಕಾರ್‌ನಲ್ಲಿ ಸುರಪುರದ ಬಿಜೆಪಿ ಶಾಸಕನ ಚಿತ್ರ! ರಾಜೂಗೌಡ ಹೇಳಿದ್ದೇನು?

Exit mobile version