Site icon Vistara News

ಗಳಗಳನೆ ಅತ್ತ ಅಭ್ಯರ್ಥಿ, ಕುದುರೆ ಏರಿ ಬಂದು ನಾಮಪತ್ರ ಸಲ್ಲಿಕೆ; ಇವು ದಿನದ ಇಂಟರೆಸ್ಟಿಂಗ್‌ ಘಟನೆಗಳು

Karnataka Election 2023

Karnataka Election 2023

ಕೊಪ್ಪಳ/ವಿಜಯನಗರ/ಚಿತ್ರದುರ್ಗ: ಕರ್ನಾಟಕ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಗುರುವಾರ ಪೂರ್ಣಗೊಂಡಿದ್ದು, ನೂರಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಹೀಗೆ, ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಹಲವು ಕುತೂಹಲಕಾರಿ ಘಟನೆಗಳು, ಅಭ್ಯರ್ಥಿ ಕಣ್ಣೀರು ಹಾಕಿದ ಪ್ರಸಂಗ ನಡೆದಿವೆ. ಇಡೀ ದಿನದ ಕುತೂಹಲಕಾರಿ ಘಟನೆಗಳು ಇಲ್ಲಿವೆ.

ಕುದುರೆ ಸವಾರಿ ಮೂಲಕ ನಾಮಪತ್ರ ಸಲ್ಲಿಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಕುದುರೆ ಸವಾರಿಯಲ್ಲಿ ತೆರಳಿ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರು. ದೇವನಹಳ್ಳಿ ಆಪ್‌ ಅಭ್ಯರ್ಥಿ ಬಿ.ಕೆ.ಶಿವಪ್ಪ ಅವರು ಕುದುರೆ ಮೇಲೆ ಸವಾರಿ ನಡೆಸಿದರು. ಇದಾದ ಬಳಿಕ ಎತ್ತಿನ ಬಂಡಿಯಲ್ಲಿ ಖಾಲಿ ಸಿಲಿಂಡರ್‌ಗಳ ಮಧ್ಯೆ ಕೂತು ಮೆರವಣಿಗೆ ಸಾಗಿದರು. ಪಟ್ಟಣದ ಕೋಟೆ ಗೋಪಾಲಸ್ವಾಮಿ ದೇವಾಲಯದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ಸಾಗಿದರು. ಇವರಿಗೆ ಮುಖ್ಯಮಂತ್ರಿ ಚಂದ್ರು ಸಾಥ್‌ ನೀಡಿದರು.

ಬಂಡಿಯಿಂದ ಮುಗ್ಗರಿಸಿ ಬಿದ್ದ ಜನ

ಕೊಪ್ಪಳದಲ್ಲಿ ಜೆಡಿಎಸ್‌ ಅಭ್ಯರ್ಥಿ ಸಿ.ವಿ.ಚಂದ್ರಶೇಖರ್‌ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಭರ್ಜರಿ ಮೆರವಣಿಗೆ ನಡೆಸಿದ್ದಾರೆ. ಇದೇ ವೇಳೆ ಮೆರವಣಿಗೆಯಲ್ಲಿ ಯುವಕರು, ಮಹಿಳೆಯರು ಹಾಗೂ ಮಕ್ಕಳು ಎತ್ತಿನಬಂಡಿಯಲ್ಲಿ ಸಾಗಿದ್ದಾರೆ. ಆದರೆ, ಮೆರವಣಿಗೆ ಸಾಗುವಾಗ ಡಿಜೆ, ಹಲಗೆ ಸೌಂಡ್‌ಗೆ ಎತ್ತುಗಳು ಬೆದರಿದ್ದು, ಓಡಿಹೋಗಿವೆ. ಹಾಗಾಗಿ, ಗಾಡಿಯಲ್ಲಿದ್ದವರು ಮುಗ್ಗರಿಸಿ ಬಿದ್ದಿದ್ದಾರೆ.

ಸ್ವಾಮೀಜಿ ಎದುರು ಕಣ್ಣಿರು ಹಾಕಿದ ಜೆಡಿಎಸ್‌ ಅಭ್ಯರ್ಥಿ

ಕೊಪ್ಪಳ ಜೆಡಿಎಸ್‌ ಅಭ್ಯರ್ಥಿ ಸಿ.ವಿ.ಚಂದ್ರಶೇಖರ ಅವರು ನಾಮಪತ್ರ ಸಲ್ಲಿಸುವ ಮುನ್ನ ಗವಿಮಠಕ್ಕೆ ತೆರಳಿ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಇದೇ ವೇಳೆ ಸ್ವಾಮಿಜಿ ಎಂದು ಸಿ.ವಿ.ಚಂದ್ರಶೇಖರ ಕಣ್ಣೀರು ಹಾಕಿದರು. ಇವರು ಕಣ್ಣೀರು ಹಾಕುತ್ತಿದ್ದಂತೆ, ಇವರ ಪತ್ನಿಯೂ ಕಣ್ಣೀರು ಹಾಕಿದರು. ಬಳಿಕ ಇವರನ್ನು ಸ್ವಾಮೀಜಿಯವರು ಸಮಾಧಾನಪಡಿಸಿದರು. ಇದುವರೆಗೆ ಸಿ.ವಿ.ಚಂದ್ರಶೇಖರ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರು. ಆದರೆ, ಟಿಕೆಟ್‌ ಸಿಗದ ಕಾರಣ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಇದೇ ವೇಳೆ ಅವರು ಭಾವುಕರಾಗಿದ್ದಾರೆ.

ಎಚ್‌.ಆಂಜನೇಯ ನಾಮಪತ್ರ ಸಲ್ಲಿಕೆ ವೇಳೆ ನೀತಿ ಸಂಹಿತೆ ಉಲ್ಲಂಘನೆ

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಆಂಜನೇಯ ಅವರು ನಾಮಪತ್ರ ಸಲ್ಲಿಸುವ ವೇಳೆ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ನಾಮಪತ್ರ ಸಲ್ಲಿಸುವಾಗ ತಾಲೂಕು ಕಚೇರಿ ಒಳಗೆ ನಾಲ್ವರು ಮಾತ್ರ ತೆರಳಲು ಅವಕಾಶವಿದೆ. ಆದರೆ, ಎಚ್‌.ಆಂಜನೇಯ ಅವರ ಜತೆ 15ಕ್ಕೂ ಅಧಿಕ ಜನ ತೆರಳಿದರು. ಎಲ್ಲರನ್ನೂ ಪೊಲೀಸರು ಒಳಗೆ ಬಿಟ್ಟು ಮೂಕ ಪ್ರೇಕ್ಷಕರಾಗಿ ನಿಂತರು.

ಇದನ್ನೂ ಓದಿ: Karnataka Election 2023: ಬಿಟಿಎಂ ಲೇಔಟ್ ಬಿಜೆಪಿ ಅಭ್ಯರ್ಥಿಯಾಗಿ ಶ್ರೀಧರರೆಡ್ಡಿ ನಾಮಪತ್ರ ಸಲ್ಲಿಕೆ, ಭರ್ಜರಿ ರೋಡ್‌ ಶೋ

Exit mobile version