ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ಶನಿವಾರ ಹುಬ್ಬಳ್ಳಿಗೆ ಆಗಮಿಸಿ, ಜಗದೀಶ್ ಶೆಟ್ಟರ್ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದರು. ಈ ಬಗ್ಗೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಕಿಡಿ ಕಾರಿದ್ದಾರೆ. ಸೋನಿಯಾ ಗಾಂಧಿ ಅವರೇ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ಇಂಡಿಯನ್ ಮಜ್ಲೀಸ್ ಇ ಇತ್ತೇಹಾದುಲ್ ಮುಸ್ಲೀಮೀ(AIMIM) ಮುಖ್ಯಸ್ಥರಾಗಿರುವ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ವಂಚಿತರಾದ ಜಗಜೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಅವರು ಶೆಟ್ಟರ್ ಪರ ಮತಯಾಚನೆ ಮಾಡಿದ್ದರು.
ಇದು ನಿಮ್ಮ ಜಾತ್ಯತೀತ ನೀತಿಯೇ. ಈ ರೀತಿಯಾಗಿ ನೀವು ಮೋದಿ ಅವರ ವಿರುದ್ಧ ಹೋರಾಟ ಮಾಡುತ್ತೀರಾ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
ಮೇಡಂ ಸೋನಿಯಾ ಗಾಂಧಿ ಅವರೇ, ನೀವು ಆರೆಸ್ಸೆಸ್ ವ್ಯಕ್ತಿಯ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತೀರಿ ಎಂದು ನಾನು ಭಾವಿಸಿರಲಿಲ್ಲ. ಜಗದೀಶ್ ಶೆಟ್ಟರ್ ಅವರು ಆರೆಸ್ಸೆಸ್ ವ್ಯಕ್ತಿಯಾಗಿದ್ದಾರೆ. ಸೈದ್ದಾಂತಿಕ ಹೋರಾಟಲ್ಲಿ ಕಾಂಗ್ರೆಸ್ ಸೋಲನ್ನು ಕಂಡಿದೆ. ಆದರೆ, ಕಾಂಗ್ರೆಸ್ ಪಕ್ಷದ ಸೇವಕರು, ಜೋಕರ್‌ಗಳು ಮತ್ತು ಗುಲಾಮರು ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ ಎಂದು ಅಸಾದುದ್ದೀನ್ ಓವೈಸಿ ಅವರು ಹೇಳಿದರು. ಸಾಮಾನ್ಯವಾಗಿ ಕಾಂಗ್ರೆಸ್‌ನವರು, ಅಸಾದುದ್ದೀನ್ ಓವೈಸಿ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಜರಿಯುತ್ತಾರೆ. ಈ ಆರೋಪಕ್ಕೆ ಅವರು ತಿರುಗೇಟು ನೀಡಿದ್ದಾರೆ.
Karnataka Election 2023: ಸೋನಿಯಾ ಗಾಂಧಿ ಭಾಷಣದಲ್ಲೇ ಹೇಳಿದ್ದೇನು?
ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election) ಕೆಲವೇ ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕೂಡ ಪ್ರಚಾರ ಕೈಗೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿಯನ್ನು ಕಟು ಪದಗಳಿಂದ ಟೀಕಿಸಿದರು. “ರಾಜ್ಯದಲ್ಲಿ ಲೂಟಿ ಸರ್ಕಾರವನ್ನು ಬಿಡಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಅಧಿಕಾರ ನೀಡಿ” ಎಂದು ಮನವಿ ಮಾಡಿದರು.
“ಕರ್ನಾಟಕದ ಜನತೆಗೆ ಕಾಂಗ್ರೆಸ್ ಹಲವು ಗ್ಯಾರಂಟಿಗಳನ್ನು ನೀಡಿದೆ. ನಾವು ಅಧಿಕಾರಕ್ಕೆ ಬಂದಕೂಡಲೇ, ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಜನರ ಹಣವನ್ನು ಲೂಟಿ ಮಾಡುವ ಪಕ್ಷವನ್ನು ಸೋಲಿಸಿ. ರಾಜ್ಯದ ಪ್ರತಿಯೊಬ್ಬರ ಏಳಿಗೆಗಾಗಿ ಕಾಂಗ್ರೆಸ್‌ಅನ್ನು ಗೆಲ್ಲಿಸಿ” ಎಂದು ಮನವಿ ಮಾಡಿದರು. ಹಾಗೆಯೇ, “ಇಂದಿರಾ ಗಾಂಧಿ ಅವರ ಜತೆ ಚಿಕ್ಕಮಗಳೂರು ಜನ ನಿಂತಿದ್ದರು. ನಾನು ಕೂಡ ಬಳ್ಳಾರಿಯಿಂದ ಸ್ಪರ್ಧಿಸಿದ್ದಾಗ ಜನ ನನ್ನ ಜತೆ ನಿಂತರು” ಎಂಬುದನ್ನು ಸ್ಮರಿಸಿದರು.
ಜನರ ವಿರೋಧಿ ಸರ್ಕಾರ, ಮೋಸ, ವಂಚನೆ ವಿರುದ್ಧ ಭಾರತ್ ಜೋಡೋ ಯಾತ್ರೆ ಕೈಗೊಳ್ಳಲಾಯಿತು. ದೇಶದಲ್ಲಿ ಪ್ರಗತಿ ಎಂಬುದು ಮರೀಚಿಕೆಯಾಗಿದೆ. ಇದೇ ಕಾರಣಕ್ಕಾಗಿ, ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ್ ಜೋಡೋ ಯಾತ್ರೆ ಕೈಗೊಂಡರು. ಜನರು ಕೂಡ ದೇಶದ ನಾಲ್ಕು ಸಾವಿರಕ್ಕೂ ಅಧಿಕ ಕಿ.ಮೀ ಪಾದಯಾತ್ರೆಗೆ ಸಾಥ್ ನೀಡಿದರು. ಕರ್ನಾಟಕದ ಜನರು ಕೂಡ ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದರು ಎಂದು ಸೋನಿಯಾ ಗಾಂಧಿ ಹೇಳಿದರು.
ಇದನ್ನೂ ಓದಿ: Asaduddin Owaisi | ಮೋದಿ ಅವರನ್ನು ಚೀತಾಗೆ ಹೋಲಿಸಿದ ಅಸಾದುದ್ದೀನ್ ಓವೈಸಿ, ಕಾರಣವೇನು?
40% ಸರ್ಕಾರ ಎಂದು ಟೀಕಿಸಿದ ಸೋನಿಯಾ
“ಕರ್ನಾಟಕದಲ್ಲಿ ಶೇ.40ರಷ್ಟು ಕಮಿಷನ್ ಹೊಡೆಯಲಾಗಿದೆ ಎಂದು ಸೋನಿಯಾ ಗಾಂಧಿ ಅವರು ಕೂಡ ಬಿಜೆಪಿಯನ್ನು ಟೀಕಿಸಿದರು. ದೇಶದ ನಾಯಕ ಎನಿಸಿಕೊಂಡವರು ಯಾವ ಪ್ರಶ್ನೆಗಳಿಗೂ ಉತ್ತರ ನೀಡುವುದಿಲ್ಲ, ಯಾವುದಕ್ಕೂ ಅವರು ಉತ್ತರದಾಯಿಗಳಲ್ಲ. ನಮಗೆ ಇಂತಹ ಸರ್ಕಾರ ಏಕೆ ಬೇಕು? ಬಿಜೆಪಿಯನ್ನು ಗೆಲ್ಲಿಸದಿದ್ದರೆ ಕರ್ನಾಟಕಕ್ಕೆ ಮೋದಿ ಆಶೀರ್ವಾದ ಇರುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ, ಬಿಜೆಪಿ ನಾಯಕರು ಒಂದು ಮಾತನ್ನು ತಿಳಿದುಕೊಳ್ಳಬೇಕು. ಕರ್ನಾಟಕದ ಜನರು ಸ್ವಾಭಿಮಾನಿಗಳಾಗಿದ್ದಾರೆ. ರಾಜ್ಯದ ಜನ ಭಯಪಡುವುದಿಲ್ಲ. ಅಷ್ಟಕ್ಕೂ, ರಾಜ್ಯದ ಜನ ಪರಿಶ್ರಮದಿಂದ ಏಳಿಗೆ ಹೊಂದಿದ್ದಾರೆ. ಹಾಗಾಗಿ, ಬಿಜೆಪಿಯವರು ಕರ್ನಾಟಕವನ್ನು ಹಗುರವಾಗಿ ತಿಳಿಯಬಾರದು” ಎಂದು ಹೇಳಿದರು.