Site icon Vistara News

Karnataka Election 2023: ಸೋನಿಯಾ ಗಾಂಧಿ ವಿಷಕನ್ಯೆ, ರಾಹುಲ್ ಹುಚ್ಚ: ಬಿಜೆಪಿ ನಾಯಕ ಯತ್ನಾಳ್ ವಿವಾದಾತ್ಮಕ ಹೇಳಿಕೆ

Sonia Gandhi is Poison Maiden and Rahul Gandhi is Mad person, Says Basangouda Patil Yatnal

ಕೊಪ್ಪಳ, ಕರ್ನಾಟಕ: ಪ್ರಧಾನಿ ನರೇಂದ್ರ ಮೋದಿ ಅವರು ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ವಿಷದ ಹಾವು ಎಂದು ಹೇಳಿ, ಮತ್ತೆ ಅದಕ್ಕೆ ವಿಷಾದ ವ್ಯಕ್ತಪಡಿಸಿಯೂ ಆಗಿದೆ. ಆದರೆ, ಪ್ರಚಾರ ಅಖಾಡದಲ್ಲಿ ಈ ವಿಷಯ ಇನ್ನೂ ನಿಂತಿಲ್ಲ. ವಿಜಯಪುರ ನಗರ ಬಿಜೆಪಿ ಅಭ್ಯರ್ಥಿಯೂ ಆಗಿರುವ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (basangouda patil yatnal) ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಿಷದ ಹಾವು ಎಂದಾದರೆ, ಸೋನಿಯ ಗಾಂಧಿಯೇನು ವಿಷ ಕನ್ಯೆಯೇ ಎಂದು ಪ್ರಶ್ನಿಸುವ ಮೂಲಕ ಸಭ್ಯತೆಯ ಗೆರೆಯನ್ನು ದಾಟಿದ್ದಾರೆ. ಅಲ್ಲದೇ ರಾಹಲ್ ಗಾಂಧಿ ಹುಚ್ಚ ಎಂದು ಜರಿದಿದ್ದಾರೆ. ಜತೆಗೆ, ಮೌನ್‌ಸಿಂಗ್(ಡಾ.ಮನಮೋಹನ್ ಸಿಂಗ್) ಅವರು ಪ್ರಧಾನಿಯಾಗಿದ್ದೇ ದುರಂತ ಎಂದು ಹೇಳಿದ್ದಾರೆ(Karnataka Election 2023).

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಮತಯಾಚನೆ ಮಾಡಿ ಮಾತನಾಡಿದ ಬಸನಗೌಡ ಪಾಟೀಲ್‌ ಯತ್ನಾಳ್‌, ”ಅಲ್ಲಿ ಹುಚ್ಚ ರಾಹುಲ್ ಗಾಂಧಿ, ಇಲ್ಲಿ ಟಿಕ್ಕ ರಾಯರೆಡ್ಡಿ. ನಮ್ಮ ಸಮಾಜಕ್ಕೆ ಸಿಗುವುದನ್ನು ವಿರೋಧ ಮಾಡಿದ್ದಕ್ಕೆ ರಾಯರೆಡ್ಡಿ ಬಗ್ಗೆ ನನಗೆ ಸಿಟ್ಟು. ರಾಹುಲ್‌ ಗಾಂಧಿ ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಪ್ರೂಫ್‌ ಕೇಳುತ್ತಾರೆ. ದಿಲ್ಲಿ ಸಿಎಂ, ಪಶ್ಚಿಮಬಂಗಾಳದಲ್ಲಿ ಒಂದು ಐತಿ. 50 ವರ್ಷ ದೇಶದಲ್ಲಿ ಹಿಂದೂಗಳಿಗೆ ಗೌರವವೇ ಇಲ್ಲದಂತಾಗಿತ್ತು. ರಾಮನ ಮೆರವಣಿಗೆ ಅಲ್ಲಿ ಹೋಗಬಾರದು, ಇಲ್ಲಿ ಹೋಗಬಾರದು ಅನ್ನೋದಕ್ಕೆ ಇದೇನ್‌ ಪಾಕಿಸ್ತಾನ ಐತೋ ಅಥವಾ ಪಾಕಿಸ್ತಾನ ಐತೋ ಎಂದು ಪ್ರಶ್ನಿಸಿದರು.

ಇದು ಹಿಂದುಸ್ತಾನ ಇದೆ. ಇಲ್ಲಿ ಗಣೇಶ ಕೂಡಿಸೋರೆ, ಡಿಜೆ ಹಚ್ಚೋರೆ. ಇದಕ್ಕೆ ಯಾರ ಪರ್ಮಿಷನ್‌ ಬೇಕಿಲ್ಲ. ಹಿಂದೂಗಳು ಗಣಪತಿ, ದೇವತೆ ಕೂಡಿಸಲು ಪರ್ಮಿಷನ್‌ ತಗೋಬೇಕು ಅಂದ್ರ ಹಿಂದೂಸ್ತಾನ ಯಾಕ? ನಾವು ನೆಮ್ಮದಿಯಿಂದ ದೇಶದಲ್ಲಿ ಜೀವನ ಮಾಡುತ್ತಿದ್ದೇವೆ ಅಂದ್ರೆ ನಮ್ಮ ದೇಶದ ಪ್ರಧಾನಿ ಮೋದಿ ಅವರು ಸುರಕ್ಷತೆ ನೀಡಿದ್ದಾರೆ. ವಾಜಪೇಯಿ ಸರಕಾರವಿದ್ದಾಗ ಮೂವರು ಕುಮಾರಿಯರಿದ್ದರು. ಇವರು ಸಾಕಷ್ಟು ಟೆನ್ಷನ್‌ ಕೊಡುತ್ತಿದ್ದರು. ಮೌನಸಿಂಗ್‌ (ಮನಮೋಹನಸಿಂಗ್)‌ ಅವರು ಈ ದೇಶದ ಪ್ರಧಾನಿಯಾಗಿದ್ದೆ ದುರಂತ. ಏನೂ ನಡೆಯುತ್ತಿದ್ದಿಲ್ಲ. ಮೋದಿಯವರ ಬಗ್ಗೆ ಖರ್ಗೆ ಮಾತನಾಡಿಯೇ ಗುಲಬುರ್ಗಾ ಚುನಾವಣೆಯಲ್ಲಿ ಔಟ್‌ ಆದರು. ಇಡೀ ಜಗತ್ತೆ ಮೋದಿ ಅವರನ್ನು ಒಪ್ಪಿಕೊಂಡಿದೆ ಎಂದರು.

ನಮ್ಮ ಪ್ರಧಾನಿಗಳನ್ನು ಕೆಂಪು ಹಾಸಿಗೆ ಹಾಕಿ ಸ್ವಾಗತಿಸಲಾಗುತ್ತಿದೆ. ಇಂತಹ ನಾಯಕರನ್ನು ಖರ್ಗೆ ನಾಗರ ಹಾವಿಗೆ ಹೋಲಿಸುತ್ತಾರೆ. ನಿಮ್ಮ ಪಾರ್ಟಿಯ ಸೋನಿಯಾ ಗಾಂಧಿ ವಿಷಕನ್ಯೆಯೇ? ಚೀನಾ ಮತ್ತು ಪಾಕಿಸ್ತಾನದ ಏಜೆಂಟರಾಗಿ ಕೆಲಸ ಮಾಡುತ್ತಾರೆ ಎಂದ ಯತ್ನಾಳ್ ಆಪಾದಿಸಿದರು.‌

ಸಿದ್ದರಾಮಯ್ಯ ಲಿಂಗಾಯತರು ಭ್ರಷ್ಟರು ಅಂತರು ಹೇಳುತ್ತಾರೆ. ಇಡೀ ಸಮುದಾಯಕ್ಕೆ ಹೋಲಿಸುವುದು ಸರಿಯಲ್ಲ. ಕಾಂಗ್ರೆಸ್ ನವರೇ ನಿಮಗೆ ಧಮ್‌ ಇದ್ದರೆ ಲಿಂಗಾಯತ ಸಿಎಂ ಘೋಷಣೆ ಮಾಡಿ. ಲಿಂಗಾಯತರಿಗೆ ಮೀಸಲಾತಿ ರದ್ದು ಮಾಡ್ತೀನಿ ಎಂದವರು ಡಿಪಾಸಿಟ್ ಕಳಕೋಬೇಕು. ಬಿಜೆಪಿ ಸ್ಟಾರ್ ಕ್ಯಾಂಪೇನೇರ್ ಎಂದರೆ ರಾಹುಲ್ ಗಾಂಧಿ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಎಕ್ಸಫೈಯರ್ ಆಗಿದೆ. ಇನ್ನು ಇವರ ಗ್ಯಾರಂಟಿ ಸ್ಥಿತಿ ಏನು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: Karnataka Election 2023: ಮೋದಿ ವಿಷದ ಹಾವು ಹೇಳಿಕೆ; ವಿವಾದದ ಬೆನ್ನಲ್ಲೇ ಖರ್ಗೆ ವಿಷಾದ

ಯತ್ನಾಳ್‌ಗೆ ಶಾ ಸ್ಫೂರ್ತಿಯಾಗಿರಬೇಕು: ಬಿ ಕೆ ಹರಿಪ್ರಸಾದ್

ಬಸನಗೌಡ ಪಾಟೀಲ್ ಯತ್ನಾಳ್ ಅವರು ಸೋನಿಯಾ ಗಾಂಧಿ ಅವರನ್ನು ವಿಷ ಕನ್ಯೆ ಎಂದು ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಅವರು, ಯತ್ನಾಳ್ ತರದವರಿಗೆ ಬಿಜೆಪಿಯವರು ತರಬೇತಿ ಕೊಟ್ಟಿರೋದೇ ಹಾಗೆ. ಅವರವರ ಭಾಷೆ ಅವರವರಿಗೆ ಅದಕ್ಕೆ ಏನೂ ಮಾಡುವುದಕ್ಕೆ ಆಗುವುದಿಲ್ಲ. ಯತ್ನಾಳ್ ಪದೇ ಪದೇ ಅಮಿತ್ ಶಾನ ನೋಡ್ತಿರ್ತಾರೆ. ಅದಕ್ಕೆ ಅವರಿಗೆ ಆ ಪದ ನೆನಪಾಗಿರಬಹುದು ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಮತ್ತೊಂದೆಡೆ, ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Exit mobile version