Site icon Vistara News

Soraba Election Results: ಸೊರಬದಲ್ಲಿ ಅಣ್ಣನ ವಿರುದ್ಧ ಗೆದ್ದು ಬೀಗಿದ ತಮ್ಮ; ಮಧು ಬಂಗಾರಪ್ಪಗೆ ವಿಜಯಮಾಲೆ

Soraba Election results winner Madhu Banagarappa

ಶಿವಮೊಗ್ಗ: ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಸತತ ಏಳು ಬಾರಿ ಗೆದ್ದು ಮೂರು ದಶಕಗಳ ಕಾಲ ಶಾಸಕರಾಗಿದ್ದವರು. ದೀವರು ಮತ್ತು ಲಿಂಗಾಯತರು ಬಹುಸಂಖ್ಯೆಯಲ್ಲಿರುವ ಈ ಕ್ಷೇತ್ರವು ಆರಂಭದಿಂದಲೂ ಬಂಗಾರಪ್ಪ ಕುಟುಂಬದ ಹಿಡಿತದಲ್ಲಿಯೇ ಇದ್ದು, ಈ ಬಾರಿ ಚುನಾವಣೆಯಲ್ಲಿ (Soraba Election Results) ಅವರ ಕುಡಿಯಾದ ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ ಪಕ್ಷದಿಂದ ಆರಿಸಿಬಂದಿದ್ದಾರೆ.

ಮಧು ಬಂಗಾರಪ್ಪ ಅವರು 62818 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದಾರೆ. ಅವರ ಸಮೀಪ ಸ್ಪರ್ಧಿಯಾಗಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಕುಮಾರ್ ಬಂಗಾರಪ್ಪ ಅವರು 34315 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ. ಜೆಡಿಎಸ್‌ನ ಬಸೂರು ಚಂದ್ರೇಗೌಡ ಅವರು 5295 ಮತಗಳನ್ನಷ್ಟೇ ಪಡೆದುಕೊಂಡಿದ್ದಾರೆ. ಅಲ್ಲದೆ, 597 ನೋಟಾ ಮತಗಳೂ ಬಿದ್ದಿರುವುದು ಇಲ್ಲಿ ಸ್ಪಷ್ಟವಾಗಿದೆ.

ಕುಮಾರ್‌ ಬಂಗಾರಪ್ಪ ಸೋಲಿಗೇನು ಕಾರಣ?

ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಕುಮಾರ್ ಬಂಗಾರಪ್ಪ ಅವರು ಮೂಲ ಬಿಜೆಪಿಗರಿಂದ ಆರಂಭದಿಂದಲೂ ಅಂತರ ಕಾಪಾಡಿಕೊಂಡಿರುವುದೇ ಈ ಸೋಲಿಗೆ ಕಾರಣವಾಗಿದೆ. ಇವರ ವಿರುದ್ಧವಾಗಿ ಸ್ಥಾಪನೆಯಾಗಿರುವ ʻನಮೋ ವೇದಿಕೆʼ ಸಹ ಕುಮಾರ್ ಅವರನ್ನು ಸೋಲಿಸಲು ಸಾಕಷ್ಟು ಕೆಲಸ ಮಾಡಿತ್ತು. ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇರುವುದರಿಂದ ಕುಮಾರ್‌ ಸೋಲು ಕಂಡಿದ್ದಾರೆ.

ಮಧು ಗೆಲ್ಲಲು ಏನು ಕಾರಣ?

ಕುಮಾರ್‌ ಬಂಗಾರಪ್ಪ ಅವರಿಗೆ ಆಡಳಿತ ವಿರೋಧ ಅಲೆ ಇರುವುದೂ ಸಹ ಮಧು ಬಂಗಾರಪ್ಪ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಅಲ್ಲದೆ, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳೂ ಇವರಿಗೆ ಒಲಿದಿದೆ. ಈ ಹಿಂದೆ ಅವರು ಜೆಡಿಎಸ್‌ನಿಂದ ಗೆದ್ದು ಬಂದಿದ್ದರು. ಜೆಡಿಎಸ್‌ನ ಸ್ಥಳೀಯ ನಾಯಕರೊಂದಿಗೂ ಅವರು ನಿಕಟ ಸಂಪರ್ಕ ಹೊಂದಿದ್ದರಿಂದ ಅವರೂ ಸಹ ಕೈಜೋಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಜೆಡಿಎಸ್‌ನಿಂದ ಚಂದ್ರೇಗೌಡ ಬಾಸೂರು ಸ್ಪರ್ಧೆಯಲ್ಲಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನೇರ ಸ್ಪರ್ಧೆ ನಡೆದಿರುವುದು ಈ ಫಲಿತಾಂಶದಿಂದ ಎದ್ದು ಕಾಣುತ್ತದೆ.

ಕಳೆದ ಬಾರಿಯ ಫಲಿತಾಂಶ ಏನು?
ಎಸ್. ಕುಮಾರ್ ಬಂಗಾರಪ್ಪ (ಬಿಜೆಪಿ): 54650 | ಎಸ್. ಮಧು ಬಂಗಾರಪ್ಪ (ಜೆಡಿಎಸ್): 98912 | ಗೆಲುವಿನ ಅಂತರ:
44262

ಬಂಗಾರಪ್ಪ ಪುತ್ರದ್ವಯರ ಸೆಣಸಾಟ

2004ರಲ್ಲಿ ಸೊರಬ ಕ್ಷೇತ್ರ ಮೊದಲ ಬಾರಿಗೆ ಬಂಗಾರಪ್ಪ ಪುತ್ರದ್ವಯರ ಸೆಣಸಾಟಕ್ಕೆ ಸಾಕ್ಷಿಯಾಯಿತು. ಅಲ್ಲಿಂದ ಪುತ್ರದ್ವಯರ ಜುಗಲ್‌ಬಂದಿ ನಡೆಯುತ್ತಲೇ ಬಂದಿದೆ. ಈ ಬಾರಿಯೂ ಸಹೋದರರ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದ್ದು, ಕೊನೆಗೂ ಮಧು ಬಂಗಾರಪ್ಪ ಅವರು ಜಯಗಳಿಸುವಲ್ಲಿ ಸಫಲರಾಗಿದ್ದಾರೆ.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version