Site icon Vistara News

Soujanya muder case : ಧರ್ಮಸ್ಥಳದ ಸೌಜನ್ಯ ಕೊಲೆ, ಅತ್ಯಾಚಾರ ಪ್ರಕರಣ; ಸಂತೋಷ್‌ ರಾವ್‌ ಖುಲಾಸೆ

Soujanya murder case

#image_title

ಬೆಂಗಳೂರು/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಸದ್ದು ಮಾಡಿದ್ದ ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ (Soujanya Murder case) ಪ್ರಕರಣದಲ್ಲಿ ಆರೋಪಿ ಸಂತೋಷ್‌ ರಾವ್‌ನನ್ನು ಸಿಬಿಐ ವಿಶೇಷ ನ್ಯಾಯಾಲಯ (CBI Special court) ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದೆ. ಕೊಲೆಗಾರ ಎನ್ನುವುದಕ್ಕೆ ಸೂಕ್ತವಾದ ಸಾಕ್ಷ್ಯಾಧಾರಗಳು ಇಲ್ಲದೆ ಇರುವುದರಿಂದ ಆತನನ್ನು ಬಿಡುಗಡೆ ಮಾಡಲಾಡುತ್ತಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಸಿ.ಬಿ ಅವರು ನೀಡಿರುವ ತೀರ್ಪಿನಲ್ಲಿ ತಿಳಿಸಲಾಗಿದೆ.

ಆತ್ಯಾಚಾರ ಹಾಗೂ ಕೊಲೆಯಾದ ವೇಳೆ ಆರೋಪಿ ಸ್ಥಳದಲ್ಲಿ ಇರಲಿಲ್ಲ. ಅತ್ಯಾಚಾರ ಮಾಡಿರುವ ಬಗ್ಗೆ ವೈದ್ಯಕೀಯ ವರದಿಯಲ್ಲಿ ಉಲ್ಲೇಖವಿಲ್ಲ. ಎರಡು ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆರೋಪಿ ಸಂತೋಷ್ ರಾವ್ ಪರ ವಕೀಲ ಮೋಹಿತ್ ಕುಮಾರ್ ವಾದ ಮಾಡಿದ್ದರು. ಇದೂ ಸೇರಿದಂತೆ ಇನ್ನೂ ಹಲವು ಅಂಶಗಳನ್ನು ಪರಿಗಣಿಸಿ ಕೋರ್ಟ್‌ ಆರೋಪಿಯನ್ನು ಬಂಧಮುಕ್ತಗೊಳಿಸಿದೆ.

ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿ ಇರುವ ಪಾಂಗಾಳ ನಿವಾಸಿಗಳಾದ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿಯಾಗಿರುವ ಸೌಜನ್ಯಳ ಕೊಲೆ 2012ರ ಅಕ್ಟೋಬರ್‌ 9ರಂದು ಸಂಜೆ ನಡೆದಿತ್ತು. ಉಜಿರೆ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಆಕೆ ಅಂದು ಸಂಜೆ ಕಾಲೇಜಿನಿಂದ ಬಂದು ನೇತ್ರಾವತಿ ಸ್ನಾನ ಘಟ್ಟದ ಬಳಿ ಇಳಿದು ಮನೆ ಕಡೆಗೆ ಹೋಗಿದ್ದಳು.

ಆದರೆ, ಆಕೆ ಮನೆ ತಲುಪಿರಲಿಲ್ಲ. ರಾತ್ರಿಯಾದರೂ ಮಗಳು ಮನೆಗೆ ಬರಲಿಲ್ಲ ಎಂದು ಮನೆ ಮಂದಿ ಆತಂಕದಿಂದ ಹುಡುಕಾಡಿದ್ದರು. ಆಕೆ ಪಾಂಗಾಳದ ಮನೆ ಕಡೆ ಹೋಗಿರುವುದನ್ನು ಹಲವರು ಗಮನಿಸಿದ್ದರು. ಹೀಗಾಗಿ ಮನೆಗೆ ಹೋಗುವ ದಾರಿಯಲ್ಲಿ ಏನೋ ಅವಘಡ ನಡೆದಿದೆ ಎಂಬ ಸಂಶಯದಲ್ಲಿ ಹುಡುಕಾಟ ನಡೆಸಿದ್ದರು. ಇಡೀ ರಾತ್ರಿ ಹುಡುಕಾಡಿದರೂ ಆಕೆ ಸಿಕ್ಕಿರಲಿಲ್ಲ. ಆದರೆ ಮರುದಿನ ರಾತ್ರಿ ಮಣ್ಣಸಂಕ ಎಂಬಲ್ಲಿ ವಿದ್ಯಾರ್ಥಿನಿ ಸೌಜನ್ಯಳ ಮೃತದೇಹ ಸಿಕ್ಕಿತ್ತು. ಬೆಳ್ತಂಗಡಿಯ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಕೇಸ್ ದಾಖಲಾಗಿತ್ತು.

ಈ ನಡುವೆ, ಈ ಕೊಲೆಯ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂದೆಲ್ಲ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಆಕೆ ನಾಪತ್ತೆಯಾದ ದಿನ ವಿಪರೀತ ಮಳೆ ಬಂದಿದ್ದು, ಅದರ ನಡುವೆಯೇ ಸಾವಿರಾರು ಮಂದಿ ಆಕೆಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಅವರೆಲ್ಲರೂ ಹುಡುಕಾಡಿದ ಪ್ರದೇಶದ ಅನತಿ ದೂರದಲ್ಲೇ ಆಕೆಯ ಶವ ಪತ್ತೆಯಾಗಿದ್ದು ಹಲವು ರೀತಿಯ ಸಂಶಯಕ್ಕೆ ಕಾರಣವಾಗಿತ್ತು.

ಈ ನಡುವೆ, ಎರಡು ದಿನಗಳ ಬಳಿಕ ಧರ್ಮಸ್ಥಳದ ಬಾಹುಬಲಿ ಬೆಟ್ಟದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಒಬ್ಬ ಯುವಕ ಸಿಕ್ಕಿಬಿದ್ದಿದ್ದು, ಆತನನ್ನು ಬೆನ್ನಟ್ಟಿ ಬಂಧಿಸಲಾಗಿತ್ತು. ಆತನ ಮೇಲೆ ಸಂಶಯದಲ್ಲಿ ವಿಚಾರಿಸಲಾಗಿತ್ತು. ಅಂತಿಮವಾಗಿ ಕುಕ್ಕುಂದೂರು ಮೂಲದ ಆತನೇ ಸೌಜನ್ಯಳನ್ನು ಕೊಲೆ ಮಾಡಿದ್ದಾಗಿ ಪೊಲೀಸರು ತೀರ್ಮಾನಕ್ಕೆ ಬಂದಿದ್ದರು.

ಆದರೆ, ಸಂತೋಷ್‌ ರಾವ್‌ ಕೊಲೆಗಾರನಲ್ಲ. ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪ್ರಭಾವಿಗಳ ಕೈವಾಡವೇ ಇದರಲ್ಲಿ ಮುಖ್ಯವಾಗಿರುವುದು. ಅವರನ್ನು ಬಂಧಿಸಬೇಕು ಎಂಬ ಕೂಗು ಕೇಳಿಬಂದಿತ್ತು. ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದ್ದವು. ಈ ಬೇಡಿಕೆ ಜೋರಾಗುತ್ತಿದ್ದಂತೆಯೇ ಆಗ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು.

ಸೌಜನ್ಯಗೆ ನ್ಯಾಯ ಕೋರಿ ನಡೆದ ಪ್ರತಿಭಟನೆಯ ದೃಶ್ಯ

ಸಿಬಿಐ ಅಧಿಕಾರಿಗಳು ಹಲವಾರು ಮಂದಿಯ ವಿಚಾರಣೆಯನ್ನು ನಡೆಸಿದ್ದು, ಹಲವು ಹಂತಗಳಲ್ಲಿ ತನಿಖೆಯನ್ನು ನಡೆಸಿತ್ತು. ಅಂತಿಮವಾಗಿ ಇದೀಗ ಸಂತೋಷ್‌ ರಾವ್‌ನನ್ನು ದೋಷಮುಕ್ತನೆಂದು ಸಿಬಿಐ ನ್ಯಾಯಾಲಯ ಹೇಳಿದೆ. ಹಾಗಿದ್ದರೆ ಇದರ ತನಿಖೆ ಮುಂದುವರಿಯುತ್ತದಾ? ಇಲ್ಲಿಗೇ ಮುಕ್ತಾಯವಾಗುತ್ತದಾ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಹಿಂದು ಯುವಕನ ಕೊಲೆ; ಆರೋಪಿ ಶಬ್ಬೀರನ ಮನೆಗೆ ಬೆಂಕಿ ಹಚ್ಚಿದ ಜನ

Exit mobile version