ಮೈಸೂರು: ವಿಧಾನ ಪರಿಷತ್‌ನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಇನ್ನೂ ಮುಂದುವರಿದಿದೆ. ಈಗ ನಡೆದಿರುವ ಎಣಿಕೆ ಪ್ರಕಾರ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆಲ್ಲುವುದು ಖಚಿತವಾಗಿದೆ. ಮತ ಎಣಿಕೆ ಮುಗಿದ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ, ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಹನುಮಂತ ನಿರಾಣಿ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ಭರ್ಜರಿ ಜಯ ಗಳಿಸಿದ್ದಾರೆ. ನಾಲ್ಕು ಸ್ಥಾನಗಳ ಪೈಕಿ ಎರಡನ್ನು ಬಿಜೆಪಿ ಮತ್ತು ಎರಡನ್ನು ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಒಟ್ಟಾರೆ ಫಲಿತಾಂಶದ ನಂತರ ವಿಧಾನ ಪರಿಷತ್‌ನ 75 ಸ್ಥಾನಗಳ ಪೈಕಿ ಬಿಜೆಪಿ 39 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ಪಡೆದಂತಾಗುತ್ತದೆ.
ದಕ್ಷಿಣ ಪದವೀಧರ ಕ್ಷೇತ್ರದ ಸ್ಥಿತಿಗತಿ
ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ಮುಂದುವರಿದಿದ್ದು, ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಕಾಂಗ್ರೆಸ್‌ನ ಮಧು ಮಾದೇಗೌಡ ಅವರು ಮುನ್ನಡೆ ಸಾಧಿಸಿದ್ದರೂ ಗೆಲ್ಲಲು ನಿಗದಿಯಾಗಿರುವ ೪೬,೦೦೦ ಮತಗಳನ್ನು ಪಡೆಯಲು ಸಾಧ್ಯವಾಗದೆ ಇರುವುದರಿಂದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಲೆಕ್ಕ ಹಾಕಲಾಗುತ್ತಿದೆ. ಈ ಪ್ರಕ್ರಿಯೆ ನಿಧಾನವಾಗುತ್ತಿರುವುದರಿಂದ ಫಲಿತಾಂಶ ವಿಳಂಬವಾಗುತ್ತಿದೆ.
ಕ್ಷೇತ್ರದಲ್ಲಿ ಒಟ್ಟು ೯೯೬೨೧ ಮತಗಳು ಚಲಾವಣೆಯಾಗಿದ್ದು, ಒಟ್ಟು ೭೩೦೨ ಮತಗಳು ತಿರಸ್ಕೃತಗೊಂಡಿವೆ. ಹೀಗಾಗಿ ಸಿಂಧು ಮತಗಳಲ್ಲಿ ಅರ್ಧದಷ್ಟು ಅಂದರೆ ೪೬೦೦೦ ಮತಗಳನ್ನು ಪಡೆದವರು ಗೆಲುವು ಸಾಧಿಸುತ್ತಾರೆ.
ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಮಧು ಮಾದೇಗೌಡ ಅವರು ೩೨,೫೯೨, ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರು ೨೬,೬೮೭, ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು ಅವರು ೧೭,೦೦೨ ಮತಗಳನ್ನು ಪಡೆದಿದ್ದಾರೆ. ರೈತ ಸಂಘದ ಅಭ್ಯರ್ಥಿ ಪ್ರಸನ್ನ ಎನ್. ಗೌಡ ೬೬೦೯ ಮತ ಪಡೆದಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಪ್ತ ಸಹಾಯಕರಾಗಿದ್ದ ಎನ್.ಎಸ್. ವಿನಯ್ ೩೪೭೨ ಹಾಗೂ ಪಕ್ಷೇತರ ಡಾ.ಬಿ.ಎಚ್. ಚನ್ನಕೇಶವಮೂರ್ತಿ ೨೬೨೧ ಮತಗಳನ್ನು ಪಡೆದಿದ್ದಾರೆ.
ಬೆಳಗ್ಗೆ ಮತದಾನ ಮುಂದುವರಿದಾಗ ನಾಲ್ಕನೇ ಸ್ಥಾನದಲ್ಲಿದ್ದ ರೈತ ಸಂಘದ ಪ್ರಸನ್ನ ಎನ್. ಗೌಡ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಬಳಿಕ ಉಳಿದ ಮೂವರಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆಯಲ್ಲಿದೆ.
ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಅವರು ೩೮,೧೬೯, ಬಿಜೆಪಿ ೨೯೬೧೪, ಜೆಡಿಎಸ್ ೧೯೬೩೦ ಮತಗಳನ್ನು ಪಡೆದಿದೆ. ಕಾಂಗ್ರೆಸ್ ೮೫೫೫ ಮತಗಳ ಮುನ್ನಡೆಯಲ್ಲಿದೆ. ಇಲ್ಲಿ ಕಾಂಗ್ರೆಸ್ ಗೆಲುವು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ| MLC election | ದಕ್ಷಿಣ ಪದವೀಧರರ ಕ್ಷೇತ್ರ ಪ್ರತಿಷ್ಠೆಯ ಕಣ, ಎಲ್ಲ ಪಕ್ಷಗಳದ್ದೂ ಅಸ್ಪಷ್ಟ ಚಿತ್ರಣ