ವಿಧಾನ ಸಭೆ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಸದನದ(Assembly Session) ಕಡೆಗೆ ಆಗಮಿಸುವುದನ್ನೇ ಮರೆತಿರುವ ಶಾಸಕರ ವರ್ತನೆಗೆ ಬೇಸರ ವ್ಯಕ್ತಪಡಿಸಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಭಾವನಾತ್ಮಕವಾಗಿ ಪರಿಗಣಿಸಿಯಾದರೂ ಮಂಗಳವಾರದಿಂದ ಬನ್ನಿ ಎಂದು ಮನವಿ ಮಾಡಿದರು.
ಕೊನೆಯ ಸದನ ಅಂತ ಭಾವನಾತ್ಮಕವಾಗಿ ಪರಿಗಣಿಸಿ ಬನ್ನಿ. ಯಾವುದೇ ಕಾರ್ಯಕ್ರಮ ಇದ್ರೂ ರದ್ದು ಮಾಡಿ ಸದನಕ್ಕೆ ಬನ್ನಿ. ಶಾಸಕರಾಗಲು ಹೋರಾಟ ಮಾಡಿ ಬರ್ತೀರ. ಆದರೆ ಶಾಸಕರಾದ ನಂತರ ಈ ರೀತಿ ಗೈರಾದರೆ ಚೆನ್ನಾಗಿರಲ್ಲ. ಮಂಗಳವಾರದಿಂದ ಎಲ್ಲರೂ ಆಗಮಿಸಿ ಎಂದರು. ಸ್ಪೀಕರ್ ಮಾತಿಗೆ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ದನಿಗೂಡಿಸಿದರು. ಸದನವನ್ನು ಮಂಗಳವಾರ ಬೆಳಗ್ಗೆ 11ಕ್ಕೆ ಮುಂದೂಡಲಾಯಿತು.
ಇದನ್ನೂ ಓದಿ: Motivational story : ಸಮಯವಿಲ್ಲ ಅಂತೀವಲ್ಲಾ.. ಹೊಂದಿಸಿಕೊಂಡರೆ ಎಷ್ಟೊಂದು ಸಮಯವಿದೆ ಅಂತ ಹೇಳಿಕೊಟ್ರು ಪ್ರೊಫೆಸರ್!
ಇದಕ್ಕೂ ಮುನ್ನ ಭೋಜನದ ವಿರಾಮದ ನಂತರ ಸದನ ಸೇರಿದಾಗಲೂ ಬಹಳಷ್ಟು ಶಾಸಕರು ಉಪಸ್ಥಿತಿ ಇರಲಿಲ್ಲ. ಈ ಬಗ್ಗೆ ಬಿಜೆಪಿಯ ಆರ್. ಅಶೋಕ್ ಹಾಗೂ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಾರ್ಟಿ ಖಾಲಿಯಾಗಿದೆ ಎಂದು ಆರ್. ಅಶೋಕ್ ವ್ಯಂಗ್ಯ ಮಾಡಿದರೆ, ವಿಧಾನಸಭೆ ಪ್ರವೇಶಿಸಲು ಆಸಕ್ತಿ ಇಲ್ಲದವರಿಗೆ ಜನರು ಮತ ಹಾಕಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.