ಶಿರಸಿ: ಪರೇಶ್ ಮೇಸ್ತಾ ಸಾವು ಕೊಲೆಯಲ್ಲ, ಆಕಸ್ಮಿಕ ಎಂದು ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ್ದರೂ ಪ್ರಕರಣವನ್ನು ಸಿಬಿಐ ಮೂಲಕ ಮರು ತನಿಖೆ ಮಾಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರವು ಪರೇಶ್ ಮೇಸ್ತಾ ಪ್ರಕರಣವನ್ನು ಮರು ತನಿಖೆ ಮಾಡುವ ಅಗತ್ಯವಿದೆ. ಇದು ಮೇಲ್ನೋಟಕ್ಕೆ ಕಂಡಂತೆ ಬಿ ರಿಪೋರ್ಟ್ ಸಲ್ಲಿಸುವ ಘಟನೆಯಲ್ಲ. ಘಟನೆಯ ಕುರಿತು ಮುಖ್ಯಮಂತ್ರಿಗಳ ಬಳಿ, ಗೃಹ ಸಚಿವರ ಬಳಿ ಮಾತನಾಡಿದ್ದೇನೆ. ಹಿಂದೆಯೂ ಅನೇಕ ಪ್ರಕರಣಗಳು ಮರು ಪರಿಶೀಲನೆ ಬಳಿಕ ಆರೋಪಿಗಳು ಶಿಕ್ಷೆಗೆ ಒಳಗಾದ ಉದಾಹರಣೆಯಿದೆ. ಕಾರಣ ಇದನ್ನೂ ಸಿಬಿಐ ಮರು ತನಿಖೆಗೆ ಒಳಪಡಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ | ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಜೀವ ಬೆದರಿಕೆ ಪ್ರಕರಣ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು
ಸಾಕ್ಷ್ಯ ನಾಶವಾಗಿದೆ ಎಂದು ಮೇಸ್ತಾ ಅವರ ತಂದೆ ಹೇಳಿದ್ದಾರೆ. ಸಾರ್ವಜನಿಕರ ಅಭಿಪ್ರಾಯವೂ ಅದೇ ಆಗಿದೆ. ಅಂದು ಘಟನೆಯಲ್ಲಿ ಏನಾಗಿದೆ ಎನ್ನುವುದು ಕುಟುಂಬದವರಿಗೆ, ರಾಜ್ಯದ ಜನತೆಗೆ ಸ್ಪಷ್ಟತೆಯಿದೆ. ಸಿಬಿಐ ತನಿಖೆಗೆ ವಹಿಸುವ ವಿಳಂಬದಿಂದಾಗಿ ಸಾಕ್ಷ್ಯ ನಾಶ ಆಗಿರಬಹುದು ಎಂಬ ಅಭಿಪ್ರಾಯ ಎಲ್ಲರದ್ದಾಗಿದೆ. ಕಾರಣ ಅದನ್ನು ಮರು ಪರಿಶೀಲನೆಗೆ ಒಳಪಡಿಸಲು ಬೇಕಾದ ಕೆಲಸ ಆಗಲಿದೆ ಎಂದು ಹೇಳಿದ್ದಾರೆ.
ಮಾಜಿ ಸಚಿವರಾದ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅಧಿವೇಶನಕ್ಕೆ ಗೈರಾದ ಕುರಿತು ಪ್ರತಿಕ್ರಿಯಿಸಿ, ಇಬ್ಬರು ಶಾಸಕರು ಅಧಿವೇಶನಕ್ಕೆ ಗೈರಾಗಿದ್ದು ತಪ್ಪು. ನಮ್ಮ ನಿಯಮಾವಳಿ ಪ್ರಕಾರ ಪತ್ರ ಅಥವಾ ಮೌಖಿಕವಾಗಿ ಸಭಾಧ್ಯಕ್ಷರ ಮೂಲಕ ಸದನದ ಗಮನಕ್ಕೆ ಅವರು ತರಬೇಕಿತ್ತು. ಆದರೆ, ಹಿರಿಯ ರಾಜಕೀಯ ನಾಯಕರು ಈ ರೀತಿ ಮಾಡಿರುವುದು ತಪ್ಪು. ಇನ್ನು ಮುಂದೆ ಈ ರೀತಿ ತಪ್ಪು ಮರುಕಳಿಸದಂತೆ ವಿವರಿಸಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಅಪರಿಚಿತ ಶವದ ಬೆನ್ನು ಹತ್ತಿದ ಪೊಲೀಸರಿಗೆ ಸಿಕ್ಕಿತು ಪ್ರೇಮಿಗಳ ಆತ್ಮಹತ್ಯೆ, ಕೊಲೆ ರಹಸ್ಯ