ಬೆಂಗಳೂರು: ಗೌರಿ ಗಣೇಶ ಹಬ್ಬ ಬಂದರೆ ಸಾಕು ಬೆಂಗಳೂರಿನಲ್ಲಿದ್ದವರೆಲ್ಲ ಊರಿಗೆ ಹೋಗುವ ಧಾವಂತದಲ್ಲಿರುತ್ತಾರೆ. ಆದರೆ, ಪ್ರತಿ ಸಾರಿಯೂ ಎದುರಾಗುವ ದೊಡ್ಡ ಸಮಸ್ಯೆ ಎಂದರೆ ಊರಿಗೆ ಹೋಗಲು ಬಸ್ ಸಿಗಲ್ಲ, ಸಿಕ್ಕಿದರೂ ವಿಪರೀತ ರೇಟು ಅಂತ. ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿರುವ ಕೆಎಸ್ಸಾರ್ಟಿಸಿ ಈಗ ರಾಜ್ಯದ ನಾನಾ ಭಾಗಗಳಿಗೆ ೫೦೦ ಹೆಚ್ಚುವರಿ ಬಸ್‌ಗಳನ್ನು ಬಿಡಲು ನಿರ್ಧರಿಸಿದೆ.
ಆಗಸ್ಟ್ ೩೦ ಮತ್ತು ೩೧ರಂದು ಗೌರಿ ಗಣೇಶದ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಬಿಡಲು ನಿರ್ಧರಿಸಿದೆ. ಬೆಂಗಳೂರಿನಿಂದ ರಾಜ್ಯದ ನಾನಾ ಭಾಗಗಳಿಗೆ ೫೦೦ ಸ್ಪೆಷಲ್ ಬಸ್ ಬಿಡಲು ವ್ಯವಸ್ಥೆ ಮಾಡಿದೆ.
ಯಾವ ಕಡೆಗೆಲ್ಲ ಬಸ್?
ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕುಂದಾಪುರ, ತಿರುಪತಿ, ಹೈದರಾಬಾದ್ ಸೇರಿದಂತೆ ಹಲವೆಡೆಗೆ ಬಸ್‌ಗಳು ಹೊರಡಲಿವೆ. ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ವಿರಾಜಪೇಟೆ, ಕುಶಾಲನಗರ ಕಡೆಗೆ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಶಾಂತಿನಗರ ನಿಲ್ದಾಣದಿಂದ ತಮಿಳುನಾಡು ಮತ್ತು ಕೇರಳ ಕಡೆಗೆ ಬಸ್ ಗಳು ತೆರಳಲಿವೆ. ರಾಜ್ಯದ ಹಾಗೂ ಬೇರೆ ರಾಜ್ಯದ ನಾನಾ ಸ್ಥಳಗಳಿಂದ ಆಗಸ್ಟ್ 31ರಂದು ಆಗಮಿಸುವ ಪ್ರಯಾಣಿಕರಿಗೂ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಮುಂಗಡ ಬುಕ್ಕಿಂಗ್‌ಗೆ ರಿಯಾಯಿತಿ
ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಆನ್ ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ವಿಶೇಷವೆಂದರೆ ಒಮ್ಮೆಗೆ ಐದು ಮಂದಿಗೆ ಟಿಕೆಟ್ ಮಾಡಿದರೆ ಅಂದರೆ ಫ್ಯಾಮಿಲಿ ಟಿಕೆಟ್ ಬುಕ್ಕಿಂಗ್ ಮಾಡಿದರೆ ಒಟ್ಟು ಮೊತ್ತದಲ್ಲಿ ಶೇಕಡಾ ಐದು ರಿಯಾಯಿತಿ ನೀಡಲಾಗುತ್ತದೆ. ಒಂದು ವೇಳೆ ಏಕಕಾಲದಲ್ಲಿ ಹೋಗಿ-ಬರುವ ಟಿಕೆಟ್ ಮಾಡಿದರೆ ಶೇಕಡಾ ೧೦ರಷ್ಟು ರಿಯಾಯಿತಿ ದೊರೆಯಲಿದೆ.