ಬೆಂಗಳೂರು: ವಾರಾಣಸಿಯ ಕಾಶಿ ವಿಶ್ವನಾಥ ಸನ್ನಿಧಿ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಹಿನ್ನೆಲೆಯನ್ನು ಕೆದಕುವ ಕೆಲಸ ಜೋರಾಗಿ ನಡೆಯುತ್ತಿದೆ. ಮಸೀದಿ ಸಂಕೀರ್ಣದ ಗೋಡೆಗಳಲ್ಲಿರುವ ಶೃಂಗಾರ ಗೌರಿ ದೇವರ ಚಿತ್ರಗಳಿಗೆ ಪೂಜೆ ಮಾಡಲು ಅವಕಾಶ ಕೋರಿ ಸಲ್ಲಿಸಿದ ಒಂದು ಅರ್ಜಿ ಇದೀಗ ಇಡೀ ಸಂಕೀರ್ಣದ ಮೂಲವನ್ನೇ ಅಲುಗಾಡಿಸುತ್ತಿದೆ. ಕೋರ್ಟ್ ಮಧ್ಯ ಪ್ರವೇಶದಿಂದ ನಡೆದಿರುವ ಸಮೀಕ್ಷೆಯಲ್ಲಿ ಆ ಸಂಕೀರ್ಣ ಮೂಲತಃ ಒಂದು ದೇವಸ್ಥಾನ ಎಂಬುದಕ್ಕೆ ಹಲವು ಪುರಾವೆಗಳು ನೀಡಿದೆ.
ಇದೇ ರೀತಿ ಮಂಗಳೂರಿನ ಕೈಕಂಬ ಸಮೀಪದ ಮಳಲಿಯಲ್ಲಿ ಮಸೀದಿಯೊಂದನ್ನು ಜೀರ್ಣೋದ್ಧಾರಕ್ಕಾಗಿ ಕೆಡವಿದಾಗ ಅಲ್ಲಿ ದೇವಸ್ಥಾನದ ಕುರುಹುಗಳು ಕಂಡುಬಂದ ಹಿನ್ನೆಲೆಯಲ್ಲಿ ಅದೂ ನ್ಯಾಯಾಲಯದ ಮೆಟ್ಟಿಲೇರಿದೆ. ಅದೀಗ ದೇವಾಲಯವೋ, ಮಸೀದಿಯೋ ಎನ್ನುವ ನ್ಯಾಯ ತೀರ್ಮಾನ ಆಗುವವರೆಗೆ ನಿಲ್ಲದು ಅನಿಸುತ್ತದೆ. ಈಗ ನೋಡಿದರೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಪ್ರಕರಣವೂ (Jamia masjid row) ಅದೇ ದಾರಿಯಲ್ಲಿ ಸಾಗುತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಕಾರಣ ಅದು ಮಸೀದಿಯೋ, ಮೂಲ ದೇವಸ್ಥಾನವೋ ಎನ್ನುವ ವಿಚಾರದ ಗೊಂದಲ ಪರಿಹರಿಸುವಂತೆ ಕೋರಿ ರಾಜ್ಯ ಹೈಕೋರ್ಟ್‌ನಲ್ಲಿ ಪಿಐಎಲ್ ಒಂದು ದಾಖಲಾಗಿದೆ.
ಏನಿದು ಪಿಐಎಲ್?
ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ಧ್ವಂಸಗೊಳಿಸಿ ಟಿಪ್ಪು ಸುಲ್ತಾನ್ ಜಾಮೀಯಾ ಮಸೀದಿ ನಿರ್ಮಿಸಿದ್ದಾರೆ ಎಂದು ಆಕ್ಷೇಪಿಸಿ ಮಂಡ್ಯ ಜಿಲ್ಲೆಯ ಹಾಲಹಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಜರಂಗ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಬಿ ಮಂಜುನಾಥ್ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ, ರಾಜ್ಯ ಧಾರ್ಮಿಕ ಪರಿಷತ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಪ್ರಮಾದ ಸರಿಪಡಿಸಿ ಎಂದು ಕೋರಿಕೆ
ಮೂಡಲ ಬಾಗಿಲು ಆಂಜನೇಯ ದೇವಸ್ಥಾನವು ಹಿಂದೂಗಳ ಪವಿತ್ರ ದೇವಸ್ಥಾನ ಹಾಗೂ ತೀರ್ಥಯಾತ್ರಾ ಸ್ಥಳ. ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯ, ಮೈಸೂರು ರಾಜವಂಶಸ್ಥರು ಹಾಗೂ ದಳವಾಯಿ ದೊಡ್ಡಯ್ಯ ಸೇರಿ ಅನೇಕ ಆಡಳಿತಗಾರರು, ಪೋಷಕರು ಆರಾಧನೆ, ಸಂರಕ್ಷಣೆ, ನಿರ್ವಹಣೆ ಹಾಗೂ ಜೀರ್ಣೋದ್ಧಾರ ಮಾಡಿದ್ದರು. ಆದರೆ, ಇದನ್ನು ಧ್ವಂಸಗೊಳಿಸಿದ ಟಿಪ್ಪು ಸುಲ್ತಾನ್ 1786ರಿಂದ 1789ರ ತನ್ನ ಆಡಳಿತಾವಧಿಯಲ್ಲಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾರೆ. ಟಿಪ್ಪು ಸುಲ್ತಾನ್ ಮಾಡಿದ ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳದ್ದಾಗಿದೆ. ಈ ನಿಟ್ಟಿನಲ್ಲಿ 2022ರ ಮೇ 24ರಂದು ಅರ್ಜಿದಾರ ಸಂಘಟನೆಯಿಂದ ಪ್ರತಿವಾದಿಗಳಿಗೆ ಕಾನೂನು ಪ್ರಕಾರ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಅರ್ಜಿದಾರರು ಹೇಳುವುದೇನು?
ಶ್ರೀರಂಗಪಟ್ಟಣದಲ್ಲಿರುವ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನ-ಜಾಮಿಯಾ ಮಸೀದಿ ಜಾಗದ ಬಗ್ಗೆ ಪುರಾತತ್ವಶಾಸ್ತ್ರ ಅಧ್ಯಯನ, ಸಮೀಕ್ಷೆ ಹಾಗೂ ಉತ್ಖನನ ನಡೆಸಿ 30 ದಿನಗಳಲ್ಲಿ ಹೈಕೋರ್ಟ್‌ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.
ಅಲ್ಲದೇ, ದೇವಾಲಯದ ಆವರಣದಲ್ಲಿರುವ ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯ ಕುರುಹುಗಳಾಗಿರುವ ಗರುಡ ಕಂಬ, ಕಲ್ಯಾಣಿ, ಸ್ಥೂಪ, ಸ್ತಂಭ, ಹಿಂದೂ ದೇವ-ದೇವತೆಗಳ ಕಲ್ಲಿನ ಕೆತ್ತನೆಗಳು ಹಾಗೂ ಭೂಗತ ದೇವಸ್ಥಾನದ ಭಾಗ, ದೇವಸ್ಥಾನದ ವಾಸ್ತು ಶಿಲ್ಪ, ದೇವಸ್ಥಾನದ ವಿನ್ಯಾಸ, ಹೂತಿಟ್ಟ ವಿಗ್ರಹಗಳನ್ನು ಸಂರಕ್ಷಿಸಿಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರ, ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿಯಲ್ಲಿ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ | ಮಳಲಿ ಮಸೀದಿ ವಿವಾದ | ಮಸೀದಿ ಅರ್ಜಿ ವಜಾ, ವಿಹಿಂಪ ಹೋರಾಟಕ್ಕೆ ಮೊದಲ ಜಯ, ಜ್ಞಾನವಾಪಿ ಮಾದರಿ ವಿಚಾರಣೆಗೆ ವೇದಿಕೆ ಸಜ್ಜು?