ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ಅವರು ಎಚ್.ಡಿ. ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸರಕಾರ ಪತನಗೊಳಿಸುವುದರಲ್ಲಿ ಸಕ್ರಿಯರಾಗಿ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ೧೭ ಮಂದಿ ಶಾಸಕರನ್ನು ರಂಜಿಸುವುದಕ್ಕಾಗಿ ೧೨ ಹುಡುಗಿಯರನ್ನು ಮುಂಬಯಿಗೆ ಕಳುಹಿಸಿಕೊಡಲಾಗಿತ್ತು. ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿರುವ ಸ್ಯಾಂಟ್ರೋ ರವಿ ಈ ವ್ಯವಸ್ಥೆ ಮಾಡಿದ್ದ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಆರೋಪ ಮಾಡಿದ್ದರು. ಈ ಹೇಳಿಕೆ ಮುಂಬಯಿಗೆ ಹೋಗಿದ್ದ ಶಾಸಕರ ತಂಡದಲ್ಲಿದ್ದ ಸಚಿವ ಎಸ್. ಟಿ. ಸೋಮಶೇಖರ್ ಅವರಿಗೆ ತೀವ್ರ ಸಿಟ್ಟು ತರಿಸಿದೆ. ಈ ಸಿಟ್ಟಿನ ಭರದಲ್ಲಿ ಅವರು ಎಚ್.ಡಿ ಕುಮಾರಸ್ವಾಮಿ ಅವರನ್ನು ಸೂಳೆಗೆ ಹೋಲಿಸಿದ್ದಾರೆ!
ಕುಣಿಲಾರದ ಸೂಳೆ ನೆಲ ಡೊಂಕು ಅಂದಳಂತೆ.. ಹಾಗೆ ಎಚ್.ಡಿ.ಕುಮಾರಸ್ವಾಮಿ ಅವರು ಮೂರು ವರ್ಷ ಏನೂ ಮಾಡಲಾಗದೆ ಈಗ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಈ ಮೂಲಕ ಅವರು ಎಚ್ಡಿಕೆಯನ್ನು ಸೂಳೆ ಎಂದು ಹೋಲಿಕೆ ಮಾಡಿದರು ಎಂಬ ಗುಲ್ಲೆದ್ದಿದೆ.
ʻʻಮೂರು ವರ್ಷ ಏನು ಮಾಡಲಾಗಲಿಲ್ಲ. ಚುನಾವಣೆ ಸಮೀಪವಿರುವಾಗ ಗೆಲ್ಲೋದಿಲ್ಲ ಎಂದು ಗೊತ್ತಾಗಿದೆ, ಅದಕ್ಕೆ ಈ ವಿಚಾರ ತೆಗೆದಿದ್ದಾರೆ. ಎಚ್ ಡಿ ಕೆ ಫೈವ್ ಸ್ಟಾರ್ ಹೋಟೆಲ್ನಲ್ಲಿ ಕುಳಿತು ಅಧಿಕಾರ ನಡೆಸುತ್ತಾರೆ ಎಂಬ ಒಂದೇ ಕಾರಣಕ್ಕೆ ಅವರ ಪಕ್ಷದ ಶಾಸಕರು ಪಕ್ಷ ಬಿಡಬೇಕಾಯಿತು. ಅಂದು ಅವರು ಸರಿಯಾಗಿದ್ದರೆ ಅವರೇ 5 ವರ್ಷ ಸಿಎಂ ಆಗಿ ಮುಂದುವರಿಯಬಹುದಾಗಿತ್ತುʼʼ ಎಂದು ಹೇಳಿದರು ಎಸ್ಟಿ ಸೋಮಶೇಖರ್.
ʻʻಜೆಡಿಎಸ್ ನ ಶಾಸಕರಾಗಲಿ, ಕಾರ್ಯಕರ್ತರಾಗಲಿ ನಮ್ಮದೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಪರಿಸ್ಥಿತಿಯೂ ಇರಲಿಲ್ಲ. ಆ ತಪ್ಪುಗಳನ್ನ ಮುಚ್ಚಿಹಾಕಿಕೊಳ್ಳಲು ಎಲೆಕ್ಷನ್ ಟೈಮ್ ನಲ್ಲಿ ಈ ವಿಚಾರ ತೆಗೆದಿದ್ದಾರೆ. ಈ ಬಗ್ಗೆ ತನಿಖೆಗೆ ಎಚ್ಡಿಕೆ ದೂರು ನೀಡಲಿ. ಮುಖ್ಯಮಂತ್ರಿಗಳ ಪರಮಾಧಿಕಾರದಲ್ಲಿ ಯಾವ ತನಿಖೆ ಬೇಕಾದರೂ ಆಗಲಿ. ಆರೋಪ ಮಾಡುವವರು ಬರವಣಿಗೆಯಲ್ಲಿ ಒಂದು ದೂರನ್ನು ಸಿಎಂಗೆ ನೀಡಲಿʼʼ ಎಂದು ಸೋಮಶೇಖರ್ ಸವಾಲು ಹಾಕಿದರು.
ಇದನ್ನೂ ಓದಿ | Karnataka Election | ಬಾಂಬೇ ಬಾಯ್ಸ್ಗೆ 12 ಜನ ಹುಡುಗಿಯರನ್ನು ಸಪ್ಲೈ ಮಾಡಿದ್ದೇ ಸ್ಯಾಂಟ್ರೊ ರವಿ: HDK ಗಂಭೀರ ಆರೋಪ