ಮೈಸೂರು: ʻʻನನ್ನನ್ನು ಪಕ್ಷದಿಂದ ಬಿಟ್ಟು ಹೋಗು ಅಂತ ಹೇಳಲು ಈಶ್ವರಪ್ಪ (KS Eshwarappa) ಯಾರು? ಈಶ್ವರಪ್ಪನಿಗೆ ಯಾವುದೇ ಬೆಲೆ ಇಲ್ಲ. ಈಶ್ವರಪ್ಪ ಏನು ರಾಜ್ಯಾಧ್ಯಕ್ಷನಾ? ಬೆಲೆ ಇಲ್ಲದವರ ಹೇಳಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲʼʼ- ಹೀಗೆಂದು ಆಕ್ರೋಶದಿಂದ ಹೇಳಿದ್ದಾರೆ ಮಾಜಿ ಸಚಿವ, ಯಶ್ವಂತಪುರ ಶಾಸಕ ಎಸ್.ಟಿ ಸೋಮಶೇಖರ್ (ST Somashekhar).
ʻʻನಾನು ಈಶ್ವರಪ್ಪನನ್ನು ನಂಬಿ ಪಕ್ಷಕ್ಕೆ ಬರಲಿಲ್ಲ. ನಾನು ಯಡಿಯೂರಪ್ಪ (BS Yediyurappa) ಅವರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನೆ. ಇದೆಲ್ಲ ಬೆಳವಣಿಗೆಯಾದ ಮೇಲೆ ನಾನು ಯಡಿಯೂರಪ್ಪ ಜತೆ ಮಾತನಾಡಿದ್ದೇನೆ. ಅವರು ಯಾವುದೇ ಕಾರಣಕ್ಕೆ ಪಕ್ಷ ಬಿಡಬೇಡ ಎಂದು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಪಕ್ಷದಲ್ಲಿದ್ದೇನೆ. ಈಗ ಯಾರೋ ಐದು ಜನರು ಮಾತನಾಡುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲʼʼ ಎಂದು ಮೈಸೂರಿನಲ್ಲಿ ಮಾತನಾಡುತ್ತಾ ಅವರು ಹೇಳಿದರು.
ʻʻಎಸ್.ಟಿ.ಸೋಮಶೇಖರ್ ಬೆಂಬಲಿಗರು ಮಾತ್ರ ಪಕ್ಷ ಬಿಟ್ಟಿದ್ದಲ್ಲ. ಆರ್ ಅಶೋಕ್ ಕ್ಷೇತ್ರದಲ್ಲಿ ಹೋಗಿಲ್ಲವೇ? ಮುನಿರತ್ನ ಕ್ಷೇತ್ರದಲ್ಲಿ ಹೋಗಿಲ್ಲವೇ? ದಾಸರಹಳ್ಳಿ, ಕೆ.ಆರ್.ಪುರಂ ಕ್ಷೇತ್ರದಲ್ಲಿ ಹೋಗಿಲ್ಲವೇ? ಕೇವಲ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತೀರಾ? ಕ್ಷೇತ್ರದಲ್ಲಿ ಸಾವಿರ ಜನ ಲೀಡರ್ ಇರುತ್ತಾರೆ. ಚುನಾವಣೆ ಸಂಧರ್ಭದಲ್ಲಿ ಆ ಕಡೆ ಈ ಕಡೆ ಹೋಗುತ್ತಾರೆʼʼ ಎಂದು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಕಡೆಗೆ ವಲಸೆ ಹೋಗುತ್ತಿರುವ ಪ್ರಕ್ರಿಯೆಗೆ ಉತ್ತರಿಸಿದರು.
ನಾನು ಬಿಡಲ್ಲ, ಕಾಂಗ್ರೆಸ್ ಸೇರಲ್ಲ ಎಂದ ಸೋಮಶೇಖರ್
ʻʻನಾನು ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ. ನಾನು ಮಾನಸಿಕವಾಗಿ ದೈಹಿಕವಾಗಿ ನಾನು ಪಕ್ಷದಲ್ಲೆ ಇದ್ದೇನೆʼʼ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
ʻʻಕಾಂಗ್ರೆಸ್ ಸೇರುತ್ತಾರೆ ಎಂಬುದ್ದೆಲ್ಲ ಊಹಾಪೋಹಗಳು. ನಾನು ಯಡಿಯೂರಪ್ಪ ಮಾತು ನಂಬಿ ಬಿಜೆಪಿಯಲ್ಲಿದ್ದೇನೆ.
ಆದರೆ ಉಳಿದಿವರೇ ಪಕ್ಷದಿಂದ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ನನ್ನ ವಿರುದ್ಧ ಕೆಲಸ ಮಾಡಿದರು. ಈ ಬಗ್ಗೆ ದಾಖಲೆ ಸಮೇತ ದೂರು ಕೊಟ್ಟೆ, ಆದರೆ ಪ್ರಯೋಜನವಾಗಲಿಲ್ಲ. ಅವರ ಹುಟ್ಟಹಬ್ಬವನ್ನೇ ಕ್ಷೇತ್ರದಲ್ಲಿ ಅದ್ದೂರಿಯಾಗಿ ಮಾಡಿದರು. ಇದೆಲ್ಲ ಏನ್ ಅರ್ಥʼʼ ಎಂದು ಸೋಮಶೇಖರ್ ಪ್ರಶ್ನೆ ಮಾಡಿದರು.
ʻʻಬಸವರಾಜು ಬೊಮ್ಮಯಿ ಅವರು ಮುಖ್ಯಮಂತ್ರಿಯಾದಾಗ ನನ್ನನ್ನು ಉಳಿಸಿದ್ದು ಯಡಿಯೂರಪ್ಪ ಅವರು. ಯಡಿಯೂರಪ್ಪ ಅವರ ವಿರುದ್ಧ ಐದಾರು ಜನರು ಮಾತನಾಡಿದರು. ಅವರ ವಿರುದ್ಧ ಪಕ್ಷದಲ್ಲಿ ಕ್ರಮ ತೆಗೆದುಕೊಳ್ಳಲಿಲ್ಲ. ಇದು ಕೂಡ ಪಕ್ಷದ ಹಿನ್ನೆಡೆಗೆ ಕಾರಣʼʼ ಎಂದು ಹೇಳುವ ಮೂಲಕ ಯಡಿಯೂರಪ್ಪರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿರುವುದಕ್ಕೆ ಎಸ್.ಟಿ. ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಗೆ ಬರುವಾಗ ಜಾಮೂನು, ಅಧಿಕಾರ ಮುಗಿದ ಮೇಲೆ ವಿಷ!
ʻʻಬಿಜೆಪಿಯವರು ಪಕ್ಷಕ್ಕೆ ಬರುವಾಗ ಜಾಮೂನು ಕೊಡುತ್ತಾರೆ. ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆʼʼ ಎಂದು ಎಸ್.ಟಿ. ಸೋಮಶೇಖರ್ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು.
ʻʻನಾನು ಕಾಂಗ್ರೆಸ್ ನಲ್ಲಿದ್ದವನು. ಅವರಾಗಿಯೇ ಪಕ್ಷಕ್ಕೆ ಸೇರಿಸಿಕೊಂಡರು. ಈಗ ಎಸ್.ಟಿ.ಸೋಮಶೇಖರ್ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ. ನನ್ನನ್ನು ಪಕ್ಷ ಬಿಡಿಸಲು ಅಂತ ರೆಡಿಯಾಗಿದ್ದಾರೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʻʻನಾನು ಕ್ಷೇತ್ರಕ್ಕೆ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ, ಡಿಸಿಎಂ ಹತ್ತಿರ ಹೋಗುತ್ತೇನೆ. ಇದರಲ್ಲಿ ತಪ್ಪೇನಿದೆ. ಜತೆಗೆ ನಾನು ಸಿಎಂ, ಡಿಸಿಎಂ ಅವರನ್ನು ಹೊಗಳುವುದನ್ನು ಸಹಿಸುತ್ತಿಲ್ಲ.ʼʼ ಎಂದು ಹೇಳಿದರು ಸೋಮಶೇಖರ್.
ಇದನ್ನೂ ಓದಿ: ST Somashekhar : ಜೆಡಿಎಸ್ ಜತೆಗಿನ ಮೈತ್ರಿಗೆ ನನ್ನ ವಿರೋಧ; ಅಧಿಕೃತವಾದ ಬಳಿಕ ನನ್ನ ನಿರ್ಧಾರ: ಎಸ್.ಟಿ. ಸೋಮಶೇಖರ್
ʻʻನಾನು ನನ್ನ ಕಚೇರಿ ಮೂಲಕ ಕಾಂಗ್ರೆಸ್ ಗ್ಯಾರಂಟಿಗಳ ಫಾಲೋ ಅಪ್ ಮಾಡಿದ್ದೇನೆ. ಇದರಿಂದ ನನ್ನ ಕ್ಷೇತ್ರರ ಜನರಿಗೆ ಅನುಕೂಲವಾಗಿದೆ. ಆದರೆ ಬಿಜೆಪಿಯವರು ಅದೆಲ್ಲ ಕಾಂಗ್ರೆಸ್ ಗ್ಯಾರಂಟಿ ಅದನ್ನು ನೀವೇಕೆ ಉತ್ತೇಜನ ನೀಡುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ಅರೇ ಸರ್ಕಾರ ಯಾವುದಾದರೂ ಇರಲಿ. ಜನಕ್ಕೆ ಒಳ್ಳೆಯದು ಮಾಡುವುದು ಬೇಡವೇ?ʼʼ ಎಂದು ಸೋಮಶೇಖರ್ ಪ್ರಶ್ನಿಸಿದರು.
ಬಿಜೆಪಿ ಬರ ಅಧ್ಯಯನಕ್ಕೂ ಎಸ್‌ಟಿ ಸೋಮಶೇಖರ್ ವಿರೋಧ
ರಾಜ್ಯ ಬಿಜೆಪಿ ಘಟಕ ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ ಮಾಡುತ್ತಿರುವುದನ್ನು ಎಸ್.ಟಿ. ಸೋಮಶೇಖರ್ ವಿರೋಧಿಸಿದರು. ʻʻನಿಮ್ಮದೇ ಕೇಂದ್ರ ಸರ್ಕಾರ ಇದೆ. ಅಧಿಕಾರಿಗಳು ಅಧ್ಯಾಯನ ಮಾಡಿ ಹೋಗಿದ್ದಾರೆ. ನೀವು ಕೇಂದ್ರಕ್ಕೆ ಮನವರಿಕೆ ಮಾಡುವ ಕೆಲಸ ಮಾಡಿ. ಅದನ್ನು ಬಿಟ್ಟು ಇಲ್ಲಿ ಪ್ರವಾಸ ಮಾಡಿದರೆ ಏನು ಪ್ರಯೋಜನ. ನಿಮ್ಮ ಬರ ಅಧ್ಯಯನ ಪ್ರವಾಸದಿಂದ ಯಾವುದೇ ಪ್ರಯೋಜನ ಇಲ್ಲʼʼ ಎಂದು ಸ್ವಪಕ್ಷದ ವಿರುದ್ಧವೇ ಅವರು ಕಿಡಿ ಕಾರಿದರು.