ಮಂಡ್ಯ: ಮಂಡ್ಯದಲ್ಲಿರುವ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ (ಮೈಷುಗರ್) ಎಥೆನಾಲ್ ಘಟಕವನ್ನು ಪ್ರಾರಂಭಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರ ಬರೆದು ಆಗ್ರಹಿಸಿದ್ದಾರೆ.
ಎಥೆನಾಲ್ ಘಟಕ ಪ್ರಾರಂಭದಿಂದ ಆಗುವ ಲಾಭಗಳೇನು? ಪ್ರತಿ ಟನ್ ಕಬ್ಬಿನಿಂದ ಎಷ್ಟು ಲೀಟರ್ ಎಥೆನಾಲ್ ಸಂಗ್ರಹ ಮಾಡಬಹುದು? ಅವುಗಳಿಗೆ ಮಾರುಕಟ್ಟೆ ಹೇಗಿದೆ? ಮತ್ತು ಎಲ್ಲಿದೆ ಎಂಬಿತ್ಯಾದಿ ಮಾಹಿತಿಯುಕ್ತ ಅಂಶಗಳನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅವರ ಪತ್ರದ ಸಂಪೂರ್ಣ ವಿವರ ಇಲ್ಲಿದೆ.
ಟನ್ ಕಬ್ಬಿನಿಂದ 67-70 ಲೀಟರ್ ಎಥೆನಾಲ್ ಉತ್ಪಾದನೆ
ಮಂಡ್ಯದಲ್ಲಿರುವ ಮೈಸೂರು ಸಕ್ಕರೆ ಕಾರ್ಖಾನೆಯು ಇತಿಹಾಸ ಪ್ರಸಿದ್ಧವಾಗಿದ್ದು, ಈ ಕಾರ್ಖಾನೆಯಲ್ಲಿ ಎಥೆನಾಲ್ ಘಟಕವನ್ನು ಪ್ರಾರಂಭಿಸುವುದು ಸೂಕ್ತವಾಗಿದೆ. 100 ಕೆಎಲ್‌ಪಿಡಿಯ ಎಥೆನಾಲ್ ಘಟಕವನ್ನು ಪ್ರಾರಂಭಿಸಬಹುದಾಗಿದ್ದು, ಕಬ್ಬಿನ ರಸದಿಂದ ನೇರವಾಗಿ ಎಥೆನಾಲ್ ಉತ್ಪಾದಿಸಿದರೆ ಪ್ರತಿ ಟನ್ ಕಬ್ಬಿನಿಂದ ಸುಮಾರು 67ರಿಂದ 70 ಲೀಟರ್‌ನಷ್ಟು ಎಥೆನಾಲ್ ಉತ್ಪಾದಿಸಬಹುದಾಗಿರುತ್ತದೆ ಎಂದು ಅಂದಾಜಿಸಲಾಗಿರುತ್ತದೆ.
ಇದನ್ನೂ ಓದಿ | ಮದ್ದೂರು ಗ್ರಾಪಂ ಸದಸ್ಯರ ಸಮಸ್ಯೆ ಬಗೆಹರಿಸಿ; ಸಿಎಂಗೆ ಪತ್ರ ಬರೆದ ಎಂಎಲ್‌ಸಿ ದಿನೇಶ್ ಗೂಳಿಗೌಡ
ಎಥೆನಾಲ್ ಲಾಭದ ಉಲ್ಲೇಖ
ಒಂದು ಲೀಟರ್ ಎಥೆನಾಲ್ ಅನ್ನು 60 ರೂಪಾಯಿಯಿಂದ 67 ರೂಪಾಯಿವರೆಗೆ ಪೆಟ್ರೋಲಿಯಂ ಕಂಪನಿಗಳಾದ B.P.C.L, H.P.C.L ಮತ್ತು I.O.C.L ಗಳು ಖರೀದಿ ಮಾಡುತ್ತವೆ. ಪ್ರಸ್ತುತ ದಕ್ಷಿಣ ಕರ್ನಾಟಕದ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2,821 ರೂ.ಗಳನ್ನು ನಿಗದಿಪಡಿಸಲಾಗಿದೆ. ಅದನ್ನು ಕೂಡ ಜಾರಿಗೊಳಿಸಬೇಕು. ಒಂದು ಟನ್ ಕಬ್ಬಿನಿಂದ ಸುಮಾರು 70 ಲೀಟರ್ ಎಥೆನಾಲ್ ಉತ್ಪಾದನೆಯಾಗುವುದರಿಂದ ಪ್ರತಿ ಲೀಟರ್ ಎಥೆನಾಲ್‌ಗೆ 67 ರೂ.ನಂತೆ ಸುಮಾರು 4,690 ರೂಪಾಯಿಗಳಾಗುತ್ತದೆ. ಎಥೆನಾಲ್ ಘಟಕ ಸ್ಥಾಪನೆಯಿಂದ ರೈತರ ಕಬ್ಬಿಗೆ ವೈಜ್ಞಾನಿಕ ದರವನ್ನು ನೀಡಲು ಸಹಕಾರಿಯಾಗುತ್ತದೆ.
ಲಾಭಾಂಶದತ್ತ ಕಾರ್ಖಾನೆ
ಮಂಡ್ಯದಲ್ಲಿರುವ ಮೈಸೂರು ಸಕ್ಕರೆ ಕಾರ್ಖಾನೆಯು ಪ್ರಾರಂಭವಾದಾಗಿನಿಂದ ಇಂದಿನವರೆಗೂ ಜಿಲ್ಲೆಯ ಲಕ್ಷಾಂತರ ರೈತ ಕುಟುಂಬಗಳ ಜೀವನ ನಿರ್ವಹಣೆಗೆ ಸಹಕಾರಿಯಾಗಿದೆ. ಸದರಿ ಕಾರ್ಖಾನೆಯಲ್ಲಿ ಎಥೆನಾಲ್ ಘಟಕವನ್ನು ಪ್ರಾರಂಭ ಮಾಡುವುದರಿಂದ ರೈತರಿಗೆ ಸುಗುಮವಾಗಿ ಹಣ ಪಾವತಿ ಮಾಡಬಹುದಾಗಿದ್ದು, ಕಾರ್ಖಾನೆಯೂ ಲಾಭಾಂಶದತ್ತ ಹೋಗಿ ಕಾರ್ಖಾನೆಯ ಕಾರ್ಮಿಕರಿಗೆ ಹಾಗೂ ರೈತರಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ.
ಆದ್ದರಿಂದ, ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕವನ್ನು ಪ್ರಾರಂಭಿಸಲು ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಈ ಕ್ಷೇತ್ರದ ಪರಿಣಿತರ ಜತೆ ಸಭೆ ನಡೆಸಿ ತಾವು ಶೀಘ್ರ ಕ್ರಮಕೈಗೊಳ್ಳಬೇಕು. ಕಾರ್ಖಾನೆಗೆ ಬಾಕಿ ಇರುವ 20 ಕೋಟಿ ರೂಪಾಯಿಗಳ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಸೂಚಿಸಬೇಕೆಂದು ಮಂಡ್ಯ ಜಿಲ್ಲೆಯ ರೈತರ ಪರವಾಗಿ ಮನವಿ ಮಾಡುವುದಾಗಿ ಎಂದು ದಿನೇಶ್ ಗೂಳಿಗೌಡ ಪತ್ರದಲ್ಲಿ ಸಿಎಂಗೆ ಮನವಿ ಮಾಡಿದ್ದಾರೆ.
ಅಲ್ಲದೆ, ಸಕ್ಕರೆ ಸಚಿವ ಶಂಕರ ಬಿ. ಮುನೇನಕೊಪ್ಪ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರಿಗೂ ಮನವಿ ಮಾಡಿದ್ದು, ಮುಖ್ಯಮಂತ್ರಿಗಳ ಜತೆ ಸಮಾಲೋಚಿಸಿ ಶೀಘ್ರವಾಗಿ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕವನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಮೈಷುಗರ್ ಕಾರ್ಖಾನೆಗೆ ಬಾಕಿ ಬಿಡುಗಡೆ ಮಾಡಿ ರೈತರ ಆತಂಕ ದೂರ ಮಾಡಿ; ಸಿಎಂಗೆ ದಿನೇಶ್ ಗೂಳಿಗೌಡ ಪತ್ರ