ಚಿತ್ರದುರ್ಗ: ಬೆಂಗಳೂರಿನ ಭರವಸೆಯ ಎಐ ಸ್ಟಾರ್ಟಪ್ ಕಂಪನಿಯ ಸಿಇಒ (AI Startup CEO) ಸುಚನಾ ಸೇಠ್ (Suchana Seth) ಎಂಬವರು ತನ್ನ ನಾಲ್ಕು ವರ್ಷದ ಪುಟ್ಟ ಮಗುವನ್ನು ಅತ್ಯಂತ ಭಯಾನಕವಾಗಿ ಕೊಂದು ಹಾಕಿದ ಘಟನೆಯ ಕುರಿತು ಬಗಿದಷ್ಟು ಮಾಹಿತಿ ಲಭ್ಯವಾಗುತ್ತಿದೆ. ಕೊಲೆಯ ಕುರಿತು ಚಿತ್ರದುರ್ಗದ ಹಿರಿಯೂರು ಆಸ್ಪತ್ರೆ (Hiriyur Hospital) ಮಾಹಿತಿ ನೀಡಿದ್ದು, “ತಲೆದಿಂಬಿನಿಂದ ಮಗುವಿನ ಮುಖಕ್ಕೆ ಗಟ್ಟಿಯಾಗಿ ಹಿಡಿದು, ಆತನ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಶವದ ಪ್ರಾಥಮಿಕ ತಪಾಸಣೆ ಮಾಡಿದ ಬಳಿಕ ಡಾ. ಕುಮಾರ್ ನಾಯಕ್ ಅವರು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ. “ತಲೆದಿಂಬು ಅಥವಾ ಬೇರಾವುದೋ ವಸ್ತುವಿನಿಂದ ಉಸಿರುಗಟ್ಟಿಸಿ ಮಗುವನ್ನು ಕೊಲೆ ಮಾಡಿರುವ ಸಾಧ್ಯತೆ ಹೆಚ್ಚಿದೆ. ಮಗುವಿನ ಮೂಗಿನಲ್ಲಿ ರಕ್ತ ಸೋರಿದೆ. ಕೊಲೆ ಮಾಡಿ 36 ಗಂಟೆಯಾದ ಕಾರಣ ಬಾಲಕನ ಮುಖ ಹಾಗೂ ಎದೆ ಊದಿಕೊಂಡಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಂಪೂರ್ಣ ಮಾಹಿತಿ ದೊರೆಯಲಿದೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿದ್ದ ಆಕೆ ತನ್ನ ಮಗನನ್ನು ಗೋವಾಗೆ ಕರೆದುಕೊಂಡು ಹೋಗಿ ಅಲ್ಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಮಗುವನ್ನು ಕೊಂದು ಖಾಸಗಿ ಟ್ಯಾಕ್ಸಿಯಲ್ಲಿ ಶವವನ್ನು ಹಿಡಿದುಕೊಂಡು ಬರುವ ವೇಳೆ ಚಿತ್ರದುರ್ಗದಲ್ಲಿ ಸಿಕ್ಕಿಬಿದ್ದಿದ್ದಾಳೆ. ಆಕೆಯ ವಿಚಾರಣೆಯ ವೇಳೆ ಕೆಲವೊಂದು ಭಯಾನಕ ಸಂಗತಿಗಳು ಹೊರಬರುತ್ತಿವೆ. ಒಂದು ಮೂಲದ ಪ್ರಕಾರ ಆಕೆ ತನ್ನ ಗಂಡನ ಮೇಲಿನ ಸಿಟ್ಟಿಗೆ ಮಗುವನ್ನು ಬಲಿ ಕೊಟ್ಟಿದ್ದಾಳೆ ಎನ್ನಲಾಗಿದೆ.
39 ವರ್ಷದ ಸುಚನಾ ಸೇಠ್ (Suchana Seth) ಬೆಂಗಳೂರಿನಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್ ಮೈಂಡ್‌ಫುಲ್ ಎಐ ಲ್ಯಾಬ್ಸ್‌ನ (Mindful AI Labs) ಸಹ-ಸ್ಥಾಪಕಿ ಹಾಗೂ ಸಿಇಒ. ಸುಚನಾ ಸೇಠ್ ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದಳು. ಸೋಮವಾರ ಆಕೆ ಕೊಠಡಿಯಿಂದ ಒಬ್ಬಂಟಿಯಾಗಿ ಚೆಕ್ ಔಟ್ ಮಾಡಿದ್ದಳು. ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಗೆ ಕೇಳಿದ್ದಳು. ವಿಮಾನದಲ್ಲಿ ತೆರಳಲು ಸಿಬ್ಬಂದಿ ಸಲಹೆ ನೀಡಿದರೂ ಒಪ್ಪದೆ ಟ್ಯಾಕ್ಸಿಯಲ್ಲಿ ಬಂದಿದ್ದ ಆಕೆ ಅದೇ ಕಾರಿನಲ್ಲಿ ತನ್ನ ನಾಲ್ಕು ವರ್ಷದ ಮಗನ ಹೆಣವನ್ನು ಸಾಗಿಸಿದ್ದಳು. ಆದರೆ, ಇದು ಅಪಾರ್ಟ್‌ಮೆಂಟ್‌ನ ಸಿಬ್ಬಂದಿಗೆ ಸಂಶಯ ಬಂದು ಕಾರಿನ ಚಾಲಕನ ಸಂಪರ್ಕ ಸಾಧಿಸಿ ಚಿತ್ರದುರ್ಗ ಠಾಣೆಗೆ ಮಾಹಿತಿ ನೀಡಿ ಆಕೆಯನ್ನು ವಶಕ್ಕೆ ಪಡೆದಾಗ ಕೊಲೆಯ ಭಯಾನಕ ಸ್ಟೋರಿ ಬಿಚ್ಚಿಕೊಂಡಿದೆ.
ಸುಚನಾ ಶೇಠ್ ಮಗುವನ್ನು ಕೊಂದ ಬಳಿಕ ಏನೂ ಆಗಿಲ್ಲ ಎಂಬಂತೆ ಕಾರಿನಲ್ಲಿ ಹೊರಟಿದ್ದಳು. ಹಾಗಿದ್ದರೆ ಆಕೆ ಮಗುವನ್ನು ಕೊಂದಿದ್ದಾಳೆ ಎಂಬ ಸಂಶಯ ಬಂದಿದ್ದಾದರೂ ಹೇಗೆ? ಸುಚನಾ ಶೇಠ್ ಆ ಅಪಾರ್ಟ್‌ಮೆಂಟ್‌ಗೆ ಬಂದಾಗ ಆಕೆಯ ಜತೆ ಮಗು ಇರುವುದನ್ನು ಸಿಬ್ಬಂದಿ ಗಮನಿಸಿದ್ದರು. ಆದರೆ, ಚೆಕ್‌ಔಟ್ ಮಾಡುವಾಗ ಮಗು ಇರಲಿಲ್ಲ. ಈ ನಡುವೆ ಅಪಾರ್ಟ್‌ಮೆಂಟ್‌ನ ಕ್ಲೀನಿಂಗ್ ಸಿಬ್ಬಂದಿ ಕೋಣೆಗೆ ಹೋಗಿ ನೋಡಿದಾಗ ಅಲ್ಲಿ ರಕ್ತದ ಕಲೆಗಳನ್ನು ಗಮನಿಸಿದ್ದರು. ಆಗ ಇಡೀ ಅಪಾರ್ಟ್‌ಮೆಂಟ್‌ನ ಸಿಬ್ಬಂದಿ, ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಗೋವಾ ಪೊಲೀಸರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: Killer CEO : ಮಗುವನ್ನೇ ಕೊಂದ ಬುದ್ಧಿವಂತೆ; ಭೀಕರ ಕ್ರೌರ್ಯದ ಬೆಚ್ಚಿಬೀಳಿಸುವ ಕಥೆ!
ಈ ನಡುವೆ ಪೊಲೀಸರು ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಸುಚನಾ ಸೇಠ್ ಅವರೊಂದಿಗೆ ಮಾತನಾಡಿದ್ದರು. ಆಕೆಯ ಮಗನ ಬಗ್ಗೆ ಕೇಳಿದಾಗ, ಅವನು ಸ್ನೇಹಿತನೊಂದಿಗೆ ಇದ್ದಾನೆ ಎಂದು ಹೇಳಿ ಒಂದು ವಿಳಾಸ ನೀಡಿದ್ದಳು. ಆದರೆ ಅದು ನಕಲಿ ಎಂದು ತಿಳಿದುಬಂತು! ಈ ನಡುವೆ, ಪೊಲೀಸರು ಮತ್ತೆ ಚಾಲಕನಿಗೆ ಕರೆ ಮಾಡಿ, ಸುಚನಾಗೆ ಅರ್ಥವಾಗದಂತೆ ಕೊಂಕಣಿ ಭಾಷೆಯಲ್ಲಿ ಕ್ಯಾಬ್ ಅನ್ನು ಚಿತ್ರದುರ್ಗದ ಪೊಲೀಸ್ ಠಾಣೆ ಕಡೆಗೆ ತಿರುಗಿಸಲು ಆದೇಶಿಸಿದ್ದರು. ಕಾರು ಅಲ್ಲಿಗೆ ಬಂದ ಬಳಿಕ ಸುಚನಾಳನ್ನು ಬಂಧಿಸಿದ್ದರು. ಆಕೆಯ ಬ್ಯಾಗ್‌ನಲ್ಲಿ ಆಕೆಯ ಮಗನ ಶವ ಪತ್ತೆಯಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ