ಬೆಂಗಳೂರು: ಇತ್ತೀಚೆಗಷ್ಟೆ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾಗಿರುವ ಜಿ.ವಿ. ರಾಜೇಶ್ ಅವರು ರಾಜ್ಯ ಬಿಜೆಪಿ ಪದಾಧಿಕಾರಿಗಳೊಂದಿಗೆ ಮಂಗಳವಾರ ಮೊದಲ ಸಭೆ ನಡೆಸಿದರು. ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ʻಪರಿಚಯಾತ್ಮಕʼ ಸಭೆ ನಡೆಸಲಾಯಿತು.
ರಾಜ್ಯ ಬಿಜೆಪಿಯ ರಾಜ್ಯ, ಜಿಲ್ಲಾ ಮಟ್ಟದ ಪದಾಧಿಕಾರಿಗಳು, ವಿವಿಧ ಮೋರ್ಚಾ ಹಾಗೂ ಪ್ರಕೋಷ್ಠಗಳ ಪ್ರಮುಖರು, ಕೆಲವು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿರ್ಗಮಿತ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರೂ ಉಪಸ್ಥಿತರಿದ್ದರು.
ಕಳೆದ ಆರು ವರ್ಷಗಳಿಂದ ರಾಜ್ಯ ಪದಾಧಿಕಾರಿಯಾಗಿದ್ದ ಅರುಣ್ ಕುಮಾರ್ ಅವರನ್ನು ಜುಲೈ 19ರಂದು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ನಡೆದ ಆರ್‌ಎಸ್‌ಎಸ್ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಸಮನ್ವಯ ಬೈಠಕ್‌ನಲ್ಲಿ ಬದಲಾವಣೆ ಮಾಡಲಾಗಿತ್ತು. ಅರುಣ್ ಕುಮಾರ್ ಅವರನ್ನು ಆರ್‌ಎಸ್‌ಎಸ್‌ಗೆ ಮರುನಿಯುಕ್ತಿ ಮಾಡಿ, ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾಗಿ ಹೊಣೆ ನೀಡಲಾಗಿತ್ತು.
ಆರ್‌ಎಸ್‌ಎಸ್‌ನ ತುಮಕೂರು ವಿಭಾಗದ ಪ್ರಚಾರಕರಾಗಿದ್ದ ಜಿ.ವಿ. ರಾಜೇಶ್ ಅವರನ್ನು ರಾಜಕೀಯ ಕ್ಷೇತ್ರಕ್ಕೆ ನಿಯುಕ್ತಿ ಮಾಡಲಾಗಿತ್ತು. ದಕ್ಷಿಣ ಕನ್ನಡ ಮೂಲದವರಾದ ರಾಜೇಶ್ ತಮ್ಮ ಬಿಬಿಎ ವಿದ್ಯಾಭ್ಯಾಸದ ನಂತರ ಆರ್‌ಎಸ್‌ಎಸ್ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮೈಸೂರು ಜಿಲ್ಲಾ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. 2021ರಲ್ಲಿ ತುಮಕೂರು ವಿಭಾಗ ಪ್ರಚಾರಕರಾಗಿ ನಿಯುಕ್ತಿಯಾಗಿದ್ದರು.
ಜುಲೈ 20ರಂದು ರಾಜೇಶ್ ಅವರನ್ನು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಕೂಡಲೆ ಅವರು ನವದೆಹಲಿಗೆ ತೆರಳಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಬಂದಿದ್ದರು.
ವಾಪಸಾದ ನಂತರ ಇದೇ ಮೊದಲ ಬಾರಿಗೆ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಮಂಗಳವಾರ ಆಯೋಜನೆ ಮಾಡಲಾಯಿತು. ಪದಾಧಿಕಾರಿಗಳಿಗೆ ಮಾತ್ರವೇ ಕಾರ್ಯಕ್ರಮ ಸೀಮಿತವಾಗಿತ್ತು. ಸಭೆಯಲ್ಲಿ, ನಿರ್ಗಮಿತ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಸಹ ಉಪಸ್ಥಿತರಿದ್ದರು. ಉಪಸ್ಥಿತರಿದ್ದ ಎಲ್ಲ ಪದಾಧಿಕಾರಿಗಳನ್ನೂ ಜಿ.ವಿ. ರಾಜೇಶ್ ಪರಿಚಯ ಮಾಡಿಕೊಂಡರು. ಎಲ್ಲರ ಹೊಣೆಗಾರಿಕೆ, ಎಷ್ಟು ವರ್ಷದಿಂದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ ಎಂಬುದನ್ನು ತಿಳಿದುಕೊಂಡರು.
ಈ ಪೈಕಿ ಅನೇಕರು ಈ ಹಿಂದಿನಿಂದಲೇ ಪರಿಚಯವಿದ್ದವರಾದ್ಧರಿಂದ ಆತ್ಮೀಯವಾಗಿ ಮಾತನಾಡಿಸಿದರು. ಕೊನೆಗೆ ಮಾತನಾಡಿದ ಜಿ.ವಿ. ರಾಜೇಶ್, ರಾಜ್ಯದಲ್ಲಿ ಬಿಜೆಪಿ ಉತ್ತಮ ಸಂಘಟನೆ ಹೊಂದಿದೆ. ಈ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಇನ್ನೂ ಶ್ರಮವಹಿಸಿ ದುಡಿಯೋಣ. ನಾವೆಲ್ಲರೂ ಒಂದು ಕುಟುಂಬದಂತೆ ಕೆಲಸ ಮಾಡೋಣ. ಪಕ್ಷಕ್ಕೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ, ಯಾವುದೇ ಸಮಯದಲ್ಲಿ ನನ್ನನ್ನು ಸಂಪರ್ಕಿಸಬಹುದು. ಸೌಹಾರ್ದಯುತ ವಾತಾವರಣದಲ್ಲಿ ಸಂಘಟನೆಯನ್ನು ಭದ್ರಪಡಿಸೋಣ ಎಂದು ತಿಳಿಸಿದರು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅತ್ಯಂತ ಚಿಕ್ಕ ವಯಸ್ಸಾದರೂ ಎಲ್ಲರನ್ನೂ ಸಮಾಧಾನದಿಂದ ಆಲಿಸಿದ್ದು ಸಂತಸ ತಂದಿತು. ದೂರಗಾಮಿಯಾಗಿ ಪಕ್ಷಕ್ಕೆ ಉಪಯೋಗವಾಗಲಿದ್ದಾರೆ. ಇದೇ ರೀತಿ ಸೌಹಾರ್ದ ಸಂಬಂಧವನ್ನು ಅವರು ಮುಂದೆಯೂ ಉಳಿಸಿಕೊಂಡು ಹೋಗುತ್ತಾರೆ ಎಂಬ ನಂಬಿಕೆ ಇದೆ ಎಂದು ಪದಾಧಿಕಾರಿ ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮರಳಿ ಆರ್‌ಎಸ್‌ಎಸ್‌ಗೆ: ಬಿಜೆಪಿಗೆ ರಾಜೇಶ್