Site icon Vistara News

ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌ ಮರಳಿ ಆರ್‌ಎಸ್‌ಎಸ್‌ಗೆ: ಬಿಜೆಪಿಗೆ ರಾಜೇಶ್‌

arun kumar bjp

ಬೆಂಗಳೂರು: ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌ ಅವರನ್ನು ಆರ್‌ಎಸ್‌ಎಸ್‌ಗೆ ಮರುನಿಯುಕ್ತಿ ಮಾಡಲಾಗಿದೆ. ಆರ್‌ಎಸ್‌ಎಸ್‌ನ ತುಮಕೂರು ವಿಭಾಗದ ಪ್ರಚಾರಕರಾಗಿರುವ ರಾಜೇಶ್‌ ಅವರನ್ನು ರಾಜಕೀಯ ಕ್ಷೇತ್ರಕ್ಕೆ ನಿಯುಕ್ತಿ ಮಾಡಲಾಗಿದ್ದು, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡುವ ಸಾಧ್ಯತೆಯಿದೆ.

ಆರ್‌ಎಸ್‌ಎಸ್‌ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಸಮನ್ವಯ ಬೈಠಕ್‌ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಮಂಗಳವಾರ ನಡೆಯಿತು, ಅಲ್ಲಿ ಒಟ್ಟು ಐವರು ಪ್ರಚಾರಕರ ಜವಾಬ್ದಾರಿಗಳಲ್ಲಿ ಬದಲಾವಣೆ ಮಾಡಲಾಗಿದೆ.

ಅರುಣ್‌ ಕುಮಾರ್‌ ಅವರು ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿದರು. ಶಿಕ್ಷಣದ ನಂತರ ಆರ್‌ಎಸ್‌ಎಸ್‌ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಆರು ವರ್ಷದ ಹಿಂದೆ ಬಿಜೆಪಿಗೆ ನಿಯುಕ್ತಿ ಮಾಡಲಾಗಿತ್ತು. ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಹೊಣೆ ನೀಡಲಾಗಿತ್ತು. ಇನ್ನುಮುಂದೆ ಅರುಣ್‌ಕುಮಾರ್‌ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾಗಿ ಕಾರ್ಯನಿರ್ವಹಿಸಲಿದ್ದಾರೆ.

ರಾಜೇಶ್‌ ಬಿಜೆಪಿಗೆ

ರಾಜೇಶ್‌

ಆರ್‌ಎಸ್‌ಎಸ್‌ ಪ್ರಚಾರಕರಾದ ರಾಜೇಶ್‌ ಅವರನ್ನು ರಾಜಕೀಯ ಕ್ಷೇತ್ರಕ್ಕೆ ನಿಯೋಜನೆ ಮಾಡಲಾಗಿದೆ. ಅವರು ಬಿಜೆಪಿಗೆ ನಿಯುಕ್ತಿಯಾಗಿದ್ದು, ಸಂಘಟನೆಯನ್ನು ಸೇರಿದ ನಂತರ ಹೊಸ ಹೊಣೆಯನ್ನು ನೀಡಲಾಗುತ್ತದೆ. ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಕನ್ನಡ ಮೂಲದವರಾದ ರಾಜೇಶ್‌ ತಮ್ಮ ವಿದ್ಯಾಭ್ಯಾಸದ ನಂತರ ಆರ್‌ಎಸ್‌ಎಸ್‌ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮೈಸೂರು ಜಿಲ್ಲಾ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. 2021ರಲ್ಲಿ ತುಮಕೂರು ವಿಭಾಗ ಪ್ರಚಾರಕರಾಗಿ ನಿಯುಕ್ತಿಯಾಗಿದ್ದರು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಇನ್ನು ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ನಡೆಯಲಿದ್ದು, ಈ ಸಮಯದಲ್ಲಿ ಸಂಘಟನಾ ಕಾರ್ಯದರ್ಶಿ ಬದಲಾವಣೆ ಅಚ್ಚರಿಗೆ ಕಾರಣವಾಗಿದೆ.

ಒಟ್ಟು ಐವರು ಬದಲಾವಣೆ

ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ಒಟ್ಟು ಐವರು ಜವಾಬ್ದಾರಿಗಳನ್ನು ಬದಲಾವಣೆ ಮಾಡಲಾಗಿದೆ.

1. ಗ.ರಾ. ಸುರೇಶ್ – ಸಾಮರಸ್ಯ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಟೋಳಿ ಸದಸ್ಯರು. ಹಾಗೂ
ಘುಮಂತು (ಅಲೆಮಾರಿ ಸಮುದಾಯ) ಕಾರ್ಯದ ಕರ್ನಾಟಕ ರಾಜ್ಯ ಪ್ರಮುಖರು.

2. ಶಿ.ಲ. ಕೃಷ್ಣಮೂರ್ತಿ – ಹಿಂದು ಸೇವಾ ಪ್ರತಿಷ್ಠಾನ

3. ಮನೋಹರ ಮಠದ್ – ಕರ್ನಾಟಕ ದೇವಸ್ಥಾನ ಸಂವರ್ಧನ ಸಮಿತಿ ರಾಜ್ಯ ಸಂಯೋಜಕರು

4. ಅರುಣ್ ಕುಮಾರ್ – ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರು

5. ರಾಜೇಶ್ – ರಾಜನೈತಿಕ ಕ್ಷೇತ್ರ

Exit mobile version