Site icon Vistara News

ಬಿಬಿಎಂಪಿ ಚುನಾವಣೆಗೆ ಮತ್ತೊಂದು ಅಡೆ ನಿವಾರಣೆ: 198ರಿಂದ 243ಕ್ಕೆ ವಾರ್ಡ್‌ ಹೆಚ್ಚಿಸಿ ಕರಡು ಪ್ರಕಟ

ಬಿಬಿಎಂಪಿ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ತೊಡಕಾಗಿದ್ದ ವಾರ್ಡ್‌ ಮರುವಿಂಗಡನೆ (ಡಿ ಲಿಮಿಟೇಷನ್) ವಿಘ್ನ ನಿವಾರಣೆಯಾಗಿದೆ. ಬಿಬಿಎಂಪಿ ಜೂನ್ 9ರಂದು ಸಲ್ಲಿಸಿದ್ದ ಡಿ ಲಿಮಿಟೇಷನ್(ಮರು ವಿಂಗಡಣೆ) ವರದಿಗೆ ಗುರುವಾರ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ರಾಜ್ಯಪಾಲರ ಅಂಕಿತದೊಂದಿಗೆ ಕರಡು ಪ್ರಕಟಿಸಿದೆ.

ಬೆಂಗಳೂರು ನಗರವು ಅತೀ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು 2011ರ ಅವಧಿಯಲ್ಲಿ ಜನಸಂಖ್ಯೆಯ ಹೆಚ್ಚಳವು 44% ಮೀರಿ ದಾಖಲೆಯಾಗಿದೆ. 2011ರ ಜನಗಣತಿಯ ಪ್ರಕಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರದೇಶದಲ್ಲಿನ ಜನಸಂಖ್ಯೆ 84,43,675 ಇತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 198 ವಾರ್ಡ್‌ಗಳ ಜನಸಂಖ್ಯೆಯಲ್ಲಿ ಅಸಮಾನತೆ ಸೃಷ್ಟಿಯಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರ ಬಿಬಿಎಂಪಿಯ ವಾರ್ಡ್‌ಗಳನ್ನು 198ರಿಂದ 243ಕ್ಕೆ ಹೆಚ್ಚಿಸಿದೆ. ಜನಸಂಖ್ಯೆಯ ಏಕರೂಪತೆಯನ್ನು ಸಾಧಿಸುವ ಸಲುವಾಗಿ 243 ವಾರ್ಡ್‌ಗಳ ಸೀಮಾರೇಖೆಯನ್ನು ಗುರುತಿಸುವ (delimiting the ward boundary) ಕಾರ್ಯ ನಿರ್ವಹಿಸಲು ಕರ್ನಾಟಕ ಸರ್ಕಾರವು ಪುನರ್ವಿಂಗಡಣಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು BBMP Act 2020 ಮತ್ತು ರಾಜ್ಯಪತ್ರದಲ್ಲಿನ ಮಾನದಂಡಗಳನ್ನು ಅನುಸರಿಸಿ, 2011ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡ್‌ಗಳ ವಿಂಗಡಣೆ ಮಾಡಿ ಗಡಿಗಳನ್ನು ಗುರುತಿಸಿದೆ.

ವಾರ್ಡಿನ ಜನಸಂಖ್ಯೆ ಸ್ಪಷ್ಟವಾದ ಗಡಿ, ವಿಧಾನಸಭಾ ಕ್ಷೇತ್ರ ಮತ್ತು ವಾರ್ಡಿನ ವಿಸ್ತೀರ್ಣ, ವಸತಿಪ್ರದೇಶಗಳ ಸಾಮೀಪ್ಯತೆ (contiguity), ಸೇವಾ-ಸೌಲಭ್ಯಗಳ ನಿರ್ವಹಣೆ ಹಾಗೂ ಸರಳ ಆಡಳಿತಾತ್ಮಕ ಅನುಕೂಲತೆ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 243 ವಾರ್ಡ್‌ಗಳ ವಿಂಗಡಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೀಮಿತವಾಗಿರುವಂತೆ ವಾರ್ಡ್‌ಗಳನ್ನು ಗುರುತಿಸಲಾಗಿದ್ದು, ಈ ಪ್ರಕ್ರಿಯೆಯಿಂದಾಗಿ ವಾರ್ಡ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳು ಕಂಡುಬಂದರೂ ವಿಂಗಡಣೆಯಾದ ಎಲ್ಲ ವಾರ್ಡ್‌ಗಳು ಪಾಲಿಕೆಯ ವ್ಯಾಪ್ತಿಗೇ ಸೇರಿವೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ವಾರ್ಡುಗಳ ವಿಂಗಡಣೆಯ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ:

ಕರಡು ಕುರಿತು ಸಾರ್ವಜನಿಕರಿಗೆ ಆಕ್ಷೇಪ ಇದ್ದರೆ ಕಾರಣ ಸಮೇತ ಆಕ್ಷೇಪ ಹಾಗೂ ಸಲಹೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಗೆ 15 ದಿನಗಳ ಒಳಗಾಗಿ ಆಕ್ಷೇಪಣೆ ಅಥವಾ ಸಲಹೆಗಳಿದ್ದರೆ ತಿಳಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ | ವಿಧಾನಸಭೆ ಎಲೆಕ್ಷನ್‌ಗೂ ಮುನ್ನ ಬಿಬಿಎಂಪಿ ಚುನಾವಣೆಗೆ ಶಾಸಕರೇ ಅಡ್ಡಗಾಲು

Exit mobile version