| ಶಿವಾನಂದ ಹಿರೇಮಠ, ಗದಗ
ಕಳೆದೊಂದು ವರ್ಷದಿಂದ ಚರ್ಚೆಯಲ್ಲಿದ್ದ ಮತಾಂತರ ನಿಷೇಧ ಕಾಯ್ದೆ(ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ) ಜಾರಿ ಮಾಡಿ ಶುಕ್ರವಾರ(ಸೆ.30) ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಬಲವಂತದ, ಅಪ್ರಾಪ್ತ, ಮದುವೆ, ಉದ್ಯೋಗ, ನಗದು, ಉಚಿತ ಶಿಕ್ಷಣ, ಮದುವೆಯಾಗುವುದಾಗಿ ಆಮಿಷ ಹಾಗೂ ವಂಚನೆಯಿಂದ ಮತಾಂತರ ಆಗುವುದನ್ನು ನಿಷೇಧಿಸಿ ಮತ್ತು ಅದರ ಪರಿಭಾಷೆಗಳನ್ನು ರಾಜ್ಯ ಸರ್ಕಾರ ವ್ಯಾಖ್ಯಾನಿಸಿದೆ.
ಗೆಜೆಟ್‌ನಲ್ಲಿ(ರಾಜ್ಯಪತ್ರ) ಬಹು ಚರ್ಚಿತ ಮತ್ತು ನಿರೀಕ್ಷಿತ ಮತಾಂತರ ನಿಷೇಧ ಕಾಯ್ದೆಯಲ್ಲಿ ಯಾವುದು ನಿಷೇಧ, ಯಾವ ಮತಾಂತರವು ಪುರಸ್ಕೃತ ಎಂಬುವುದನ್ನು ವಿವರಿಸಲಾಗಿದೆ.
ಗೆಜೆಟ್ ನಲ್ಲಿ ಏನಿದೆ?
- ಪುರುಷ ಅಥವಾ ಮಹಿಳೆಯನ್ನು ಬಲವಂತವಾಗಿ, ವಂಚಿಸಿ, ಪ್ರಭಾವ ಬೀರಿ, ಮದುವೆ ಆಗುವುದಾಗಿ ವಾಗ್ದಾನ, ಮುಂತಾದ ಆಮಿಷ ಒಡ್ಡುವ ಮೂಲಕ ನೇರವಾಗಿ ಅಥವಾ ಇನ್ನಾವುದೋ ಮಾರ್ಗದ ಮೂಲಕ ಮತಾಂತರ ಮಾಡತಕ್ಕದ್ದಲ್ಲ. ಪ್ರೇರೇಪಿಸುವುದು ಕಾನೂನು ಬಾಹಿರ.
- ನಿಕಟ ಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡಲ್ಲಿ ಅದನ್ನು ಮತಾಂತರ ನಿಷೇಧ ಕಾಯ್ದೆಯಡಿ ಮತಾಂತರ ಎಂದು ಭಾವಿಸತಕ್ಕದಲ್ಲ.
- ಮತಾಂತರ ನಿಷೇಧಕ್ಕೆ ಅಧಿನಿಯಮದಲ್ಲಿ ಉಲ್ಲೇಖಿಸಿರುವ ಉಪಬಂಧಗಳನ್ನು(ಆಮಿಷ, ಬಲವಂತ ನಿಷೇಧ ಇತ್ಯಾದಿ) ಉಲ್ಲಂಘಿಸಿದರೆ 3 ವರ್ಷದಿಂದ 5 ವರ್ಷದ ವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸ, 25000 ರೂ. ದಂಡ.
- ಅಪ್ರಾಪ್ತ, ಅಸ್ವಸ್ಥ, ಮಹಿಳೆ ಅಥವಾ ರಾಜ್ಯ ಸರ್ಕಾರದ ಅನುಸೂಚಿತ ಜಾತಿ, ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಬಲವಂತದ ಮತಾಂತರ ಮಾಡಿದ್ದೇ ಆದಲ್ಲಿ 3 ರಿಂದ 10 ವರ್ಷದ ವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸ ಹಾಗೂ 50000 ರೂ. ದಂಡ.
- ಬಲವಂತದ, ಆಮಿಷೆಯ ಸಾಮೂಹಿಕ ಮತಾಂತರಕ್ಕೂ ಶಿಕ್ಷೆ ಅವಧಿ ಸೂಚಿಸಲಾಗಿದ್ದು, 3 ರಿಂದ 10 ವರ್ಷದ ವರೆಗೆ ಶಿಕ್ಷೆ, 1 ಲಕ್ಷ ದಂಡ ವಿಧಿಸಲಾಗಿದೆ.
- ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ನ್ಯಾಯಾಲಯ ಮೂಲಕ ಗರಿಷ್ಠ 5 ಲಕ್ಷ ಪರಿಹಾರ.
- ಬಲವಂತದ, ಆಮಿಷ ಮತಾಂತರವು ಜಾಮೀನು ರಹಿತ ಅಪರಾಧ.
ಕೌಟುಂಬಿಕ ನ್ಯಾಯಾಲಯಕ್ಕೆ ಅಧಿಕಾರ
ಅಂತರ್ ಧರ್ಮೀಯ ಮದುವೆ ವಿಚಾರದಲ್ಲಿ ಏಕ ಮಾತ್ರ ಉದ್ದೇಶಕ್ಕೆ (ಮದುವೆಗೆ), ಮದುವೆ ಮುಂಚೆ ಅಥವಾ ನಂತರ ಮತಾಂತರಗೊಂಡಲ್ಲಿ ಅಂತಹ ಮದುವೆಯನ್ನು ಕೌಟುಂಬಿಕ ನ್ಯಾಯಾಲಯ ಶೂನ್ಯ ಎಂದು ಪರಿಗಣಿಸಬೇಕು.
ಮತಾಂತರಗೊಳ್ಳುವುದು ಹೇಗೆ?
- ಮೂಲ ಧರ್ಮದಿಂದ ಮತಾಂತರಗೊಳ್ಳಲು ಇಚ್ಛಿಸಿದರೆ ವ್ಯಕ್ತಿಯು ತನ್ನ ಮೂಲ ವಿಳಾಸ ವ್ಯಾಪ್ತಿಯ ಜಿಲ್ಲಾ, ಅಪರ ಜಿಲ್ಲಾ ದಂಡಾಧಿಕಾರಿಗೆ ಒಂದು ತಿಂಗಳು ಮುಂಗಡ ಘೋಷಣಾ ಪತ್ರ (ನಮೂನೆ 1 ರಲ್ಲಿ) ನೀಡಬೇಕು.
- ಮತಾಂತರ ಮಾಡುವ ಧಾರ್ಮಿಕ ವ್ಯಕ್ತಿಯು ಮತಾಂತರ ಮಾಡುವ ಕುರಿತು ತನ್ನ ಮೂಲ ನಿವಾಸ ವ್ಯಾಪ್ತಿಯ ಜಿಲ್ಲಾ, ಅಪರ ಜಿಲ್ಲಾ ದಂಡಾಧಿಕಾರಿಗೆ ಒಂದು ತಿಂಗಳು ಮುಂಚೆ ನೋಟಿಸ್ (ನಮೂನೆ 2 ರಲ್ಲಿ) ನೀಡಿ ತಿಳಿಸಬೇಕು.
- ಮತಾಂತರದ ಘೋಷಣಾ ಪತ್ರ/ ನೋಟೀಸ್ ಬಗ್ಗೆ ಜಿಲ್ಲಾಧಿಕಾರಿ/ತಹಸೀಲ್ದಾರ ಅವರು ಸ್ಥಳೀಯವಾಗಿ ಆಕ್ಷೇಪಣೆಗಳನ್ನು ಆಹ್ವಾನಿಸುವುದು. ಆಕ್ಷೇಪಣೆಗಳು ಇರದಿದ್ದಲ್ಲಿ ಕಂದಾಯ/ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತಾಂತರದ ಉದ್ದೇಶ ಕುರಿತು ವಿಚಾರಣೆ ನಡೆಸಬೇಕು.
ಸಾಮಾಜಿಕ ಸ್ಥಾನಮಾನ, ಹಣಕಾಸಿನ ಪ್ರಯೋಜನ ವಾಪಸ್
ಮತಾಂತರದ ಉದ್ದೇಶಗಳನ್ನು ಮತ್ತು ಅದರ ನೈಜತೆ ಕುರಿತು ವಿಚಾರಣೆ ನಡೆಸುವ ಪ್ರಾಧಿಕಾರವು ಆಯಾ ವ್ಯಾಪ್ತಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ, ಗ್ರಾಮೀಣ ಸ್ಥಳೀಯ ನಿಕಾಯಗಳ ಸಿಬ್ಬಂದಿಗಳಾಗಿರುತ್ತಾರೆ. ಅಧಿಕೃತ ಮತಾಂತರಗೊಂಡ ವ್ಯಕ್ತಿಯು ಈ ಮೊದಲು ಸರಕಾರದಿಂದ ಪಡೆಯುತ್ತಿದ್ದ ಸಾಮಾಜಿಕ ಸ್ಥಾನಮಾನ, ಹಣಕಾಸಿನ ಸೌಲಭ್ಯಗಳನ್ನು ಪ್ರಾಧಿಕಾರವು ಹಿಂಪಡೆಯಬೇಕು. ತನ್ನ ಮೂಲ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಮತಾಂತರ ಎಂದು ಪರಿಗಣಿಸುವಂತಿಲ್ಲ. ಹೀಗಾಗಿ ಮೂಲ ಧರ್ಮಕ್ಕೆ ಮತಾಂತರ ಆಗುವುದನ್ನು ರಾಜ್ಯ ಸರ್ಕಾರ ಮುಕ್ತವಾಗಿರಿಸಿದೆ.
ಇದನ್ನೂ ಓದಿ | ಮತಾಂತರ ನಿಷೇಧ ಕಾಯಿದೆ ಈಗ ಅಧಿಕೃತ: ಕಾಂಗ್ರೆಸ್, ಜೆಡಿಎಸ್ ಸಭಾತ್ಯಾಗದ ನಡುವೆ ಮೇಲ್ಮನೆಯಲ್ಲೂ ವಿಧೇಯಕ ಪಾಸ್