Site icon Vistara News

Chilume Case: ಬಿಬಿಎಂಪಿ ಮುಖ್ಯ ಆಯುಕ್ತರ ಕೊರಳಿಗೆ ಸುತ್ತಿಕೊಂಡ ಚಿಲುಮೆ ಹಗರಣ

bbmp chief commissioner Tushar girinath

ಬೆಂಗಳೂರು: ಚಿಲುಮೆ ಸಂಸ್ಥೆಯ ಹಗರಣ ಇದೀಗ ಬಿಬಿಎಂಪಿ ಮುಖ್ಯ ಆಯುಕ್ತರ ಕೊರಳಿಗೆ ಸುತ್ತಿಕೊಂಡಿದೆ. ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಚಿಲುಮೆ ಹಗರಣಕ್ಕೆ (Chilume Case) ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧವೇ ತನಿಖೆಗೆ ಆದೇಶ ನೀಡಿದೆ.

ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ನಡೆದಿದ್ದ ಚಿಲುಮೆ ಸಂಸ್ಥೆಯ ಹಗರಣ ಭಾರೀ ಸಂಚರಣ ಸೃಷ್ಟಿಸಿತ್ತು. ಇದರಿಂದ ಇಬ್ಬರು ಐಎಎಸ್ ಅಧಿಕಾರಿಗಳು ಹುದ್ದೆ ಕಳೆದುಕೊಂಡಿದ್ದರು. ಎಲ್ಲವೂ ಮುಗಿದು ಹೋಯಿತು ಎನ್ನುವಷ್ಟರಲ್ಲಿ ಇದೀಗ ಬಿಬಿಎಂಪಿಯ ಮುಖ್ಯ ಆಯುಕ್ತರ ಬುಡಕ್ಕೆ ಬಂದಿದೆ.

ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದ ಚಿಲುಮೆ ಸಂಸ್ಥೆ ಪ್ರಕರಣ ಸಂಬಂಧ ಮತದಾರರ ಖಾಸಗಿ ಮಾಹಿತಿ ಸಂಗ್ರಹಕ್ಕೆ (voter data theft case) ಅವಕಾಶ ಮಾಡಿಕೊಡಲಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ತನಿಖೆ ಮಾಡಿ ವರದಿ ನೀಡಲು ರಾಜ್ಯದ ಮುಖ್ಯಕಾರ್ಯದರ್ಶಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ.

ಇದನ್ನೂ ಓದಿ | IT Raid: ಬೆಳ್ಳಂಬೆಳಗ್ಗೆ ಐಟಿ ಶಾಕ್‌, ರಾಜಧಾನಿಯ ಹಲವು ಕಡೆ ದಾಳಿ

ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದರು. ತುಷಾರ್ ಗಿರಿನಾಥ್ ಚಿಲುಮೆ ಸಂಸ್ಥೆಗೆ ಮತಪಟ್ಟಿ ಪರಿಷ್ಕರಣೆಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 3 ರಂದು ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಪತ್ರದಲ್ಲಿ ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಅವಕಾಶ ನೀಡಿ, ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ಹಾಗೂ ಚಿಲುಮೆ ಸಂಸ್ಥೆಯ ಲೋಪದ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸುವಂತೆ ಕೋರಿದ್ದರು. ಈಗ ತನಿಖೆಗೆ ಆದೇಶ ಮಾಡಿದ್ದು ಭಾರೀ ಸಂಚಲನ ಸೃಷ್ಟಿ ಮಾಡಿದೆ.

ಇದೇ ಪ್ರಕರಣದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳಾದ ಎಸ್. ರಂಗಪ್ಪ ಮತ್ತು ಕೆ. ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಿದ್ದ ಚುನಾವಣಾ ಆಯೋಗದ ಕ್ರಮದಿಂದ ಪ್ರಕರಣ ತಣ್ಣಗಾಗಿತ್ತು. ಈ ಅಧಿಕಾರಿಗಳನ್ನು ಹರಕೆಯ ಕುರಿಗಳನ್ನಾಗಿ ಮಾಡಲಾಗಿದೆ ಎಂದು ಕೆಲವರು ಆರೋಪಿಸಿದ್ದರು. ಇದಕ್ಕೂ ಮುನ್ನ ಹಲಸೂರು ಗೇಟ್‌ ಪೊಲೀಸರು ಶಿವಾಜಿನಗರ ಕಂದಾಯ ಅಧಿಕಾರಿ ಸುಹೇಲ್‌ ಅಹಮದ್‌, ಮಹದೇವಪುರ ಕಂದಾಯ ಅಧಿಕಾರಿ ಕೆ.ಚಂದ್ರಶೇಖರ್‌, ಚಿಕ್ಕಪೇಟೆ ಉಪ ಕಂದಾಯ ಅಧಿಕಾರಿ ವಿ.ಬಿ.ಭೀಮಾಶಂಕರ್‌, ಮತದಾರರ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್‌.ಆರ್‌.ನಗರ ಕಂದಾಯ ಅಧಿಕಾರಿ ಮಹೇಶ್‌ ಅವರನ್ನು ಬಂಧಿಸಿದ್ದರು. ಬಳಿಕ ಬಿಬಿಎಂಪಿ ಅವರನ್ನು ಅಮಾನತು ಮಾಡಿತ್ತು.

ಇದನ್ನೂ ಓದಿ | JDS Politics : ಮೈತ್ರಿ ಬಗ್ಗೆ ಜೆಡಿಎಸ್‌ನ 19 ಶಾಸಕರಲ್ಲಿ ಅಸಮಾಧಾನ; ಗಾಂಧೀಜಿ ಎಲೆಕ್ಷನ್‌ಗೆ ನಿಂತರೂ 20 ಕೋಟಿ ರೂ ಬೇಕು!

ಒಟ್ಟಾರೆಯಾಗಿ ಚಿಲುಮೆ ಸಂಸ್ಥೆ ಹಗರಣ ಬಿಬಿಎಂಪಿ ಮುಖ್ಯ ಆಯುಕ್ತರ ಕೊರಳಿಗೆ ಬಂದಿದೆ. ಆಯುಕ್ತರೇ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿದ್ದರಿಂದ ಅವರ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ.

Exit mobile version