Site icon Vistara News

ರಾಜ್ಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ

Vidhana soudha

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ ರಾರಾಜಿಸಿ, ಕನ್ನಡ ಕಡೆಗಣನೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ರಾಜ್ಯ ಸರ್ಕಾರ, ರಾಜ್ಯದಲ್ಲಿ ನಡೆಯುವ ಕಾರ್ಯಕ್ರಮಗಳ ಜಾಹೀರಾತು, ಬ್ಯಾನರ್‌ಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಬರೆದ ಪತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯನ್ನು ಬಳಸದಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಈ ಬಗ್ಗೆ ವೇದಿಕೆ ಮೇಲೆ ಅಳವಡಿಸಲಾಗುವ ಪರದೆ, ಫಲಕಗಳಲ್ಲಿ ಹಾಗೂ ಒಟ್ಟಾರೆಯಾಗಿ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಸರ್ಕಾರದ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಕೋರಿದ್ದರು. ಹೀಗಾಗಿ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆದೇಶ ಹೊರಡಿಸಿದ್ದಾರೆ.

ಕನ್ನಡ ರಾಜ್ಯದ ಆಡಳಿತ ಭಾಷೆಯಾಗಿ ಇರುಬೇಕು ಎಂಬುವುದನ್ನು ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ-1953ರಲ್ಲಿ ಉಲ್ಲೇಖ ಮಾಡಲಾಗಿದೆ. ರಾಜ್ಯದಲ್ಲಿ ಕನ್ನಡವು ಆಡಳಿತ ಭಾಷೆಯ ಜತೆಗೆ ಸಾರ್ವಭೌಮ ಭಾಷೆಯಾಗಿದೆ. ಕನ್ನಡವನ್ನು ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕನ್ನಡ ಭಾಷೆ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಕಾನೂನಿನನ್ವಯ ಸಂರಕ್ಷಿಸುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಚನೆಯಾಗಿರುತ್ತದೆ. ಹೀಗಾಗಿ ಕನ್ನಡ ಕಡ್ಡಾಯಗೊಳಿಸುವ ಬಗ್ಗೆ ಪ್ರಾಧಿಕಾರ ಶಿಫಾರಸು ಮಾಡಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ರಾಜ್ಯ ಸರ್ಕಾರವೇನೋ ತಿಳಿಸುತ್ತದೆ. ಆದರೆ ಕಾರ್ಯಕ್ರಮ ಆಯೋಜನೆಯಲ್ಲಿ ಅಧಿಕಾರಿಗಳು ಕನ್ನಡ ನಿರ್ಲಕ್ಷಿಸುತ್ತಲೇ ಇದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಇಂತಹ ಎಡವಟ್ಟುಗಳು ಮಾಡದೆ ಸರ್ಕಾರದ ಕಾರ್ಯಕ್ರಮಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಸಬೇಕಾಗಿದೆ.

ಇದನ್ನೂ ಓದಿ | ಸಿಎಂ ಬೊಮ್ಮಾಯಿ ಹೇಳಿಕೆಗೆ ತಿರುಗಿಬಿದ್ದ ಕಾಂಗ್ರೆಸ್‌: ಸಿದ್ದರಾಮಯ್ಯ, ಡಿಕೆಶಿ ಪ್ರತಿಕ್ರಿಯೆ

Exit mobile version